ವೀರಾಜಪೇಟೆ, ಮೇ ೫: ಕ್ರೀಡೆಯು ಸಾಮರಸ್ಯದ ಸಂಕೇತವಾಗಿದೆ. ಇಲ್ಲಿ ಜಾತಿ ಧರ್ಮ ಬೇಧವಿಲ್ಲದೆ ಎಲ್ಲರೂ ಕ್ರೀಡಾ ಪಟುಗಳು ಎಂಬ ಭಾವನೆಯಿಂದ ಸರ್ವರು ಒಟ್ಟಿಗೆ ಭಾಗವಹಿಸುತ್ತಾರೆ ಎಂದು ಉದ್ಯಮಿ ಎಂ.ಇ. ಶರೀಫ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ವೀರಾಜಪೇಟೆ ನಗರದ ಕ್ರೌನ್ಸ್ ಕ್ರಿಕೆರ‍್ಸ್ ಸಂಸ್ಥೆಯ ವತಿಯಿಂದ ನಗರದ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕೊಡಗು ೪೦+ ಲೆಜೆಂಡ್ಸ್ ಕ್ರಿಕೆಟ್ ಪ್ರಿಮಿಯರ್ ಲೀಗ್ ೨೦೨೪ರ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶರೀಫ್ ಅವರು ಕೊಡಗು ಜಿಲ್ಲೆ ಕ್ರೀಡೆಗಳ ತವರೂರು. ಕ್ರೀಡೆಗಳು ಜನತೆಯ ಮನಮನದಲ್ಲಿ ರಾರಾಜಿ ಸುತ್ತಿವೆ. ಕ್ರೀಡಾ ಆಯೋಜಕರಿಗೆ ದಾನಿಗಳು ಪ್ರೋತ್ಸಾಹ ನೀಡುವಂತಾಗಬೇಕು. ಕ್ರೀಡೆಗಳು ಆಯೋಜಿತವಾದಲ್ಲಿ ಬಹುಮುಖ ಪ್ರತಿಭೆಗಳನ್ನು ಸಮಾಜಕ್ಕೆ ಕೊಡುಗೆ ನೀಡಬಹುದಾಗಿದೆ ಎಂದು ಹೇಳಿದರು.

ಬ್ಯಾಟ್ ಬೀಸುವ ಮೂಲಕ ಫೈನಲ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅಂತರರಾಷ್ಟಿçÃಯ ರಗ್ಬಿ ಪಟು ಮಾದಂಡ ತಿಮ್ಮಯ್ಯ ಅವರು ಭಾಗವಹಿಸುವ ಛಲ ಎಂಬುದು ಮುಖ್ಯ, ೪೦ ವರ್ಷ ಕಳೆದರೂ ಉತ್ತಮ ಆಟವನ್ನು ಪ್ರದರ್ಶನ ಮಾಡಿ ದೈಹಿಕವಾಗಿ ದೃಢವಾಗಿದ್ದೇವೆ ಎಂದು ಈ ಟೂರ್ನಿಯಲ್ಲಿ ಸಾಬೀತು ಪಡಿಸಲಾಗಿದೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ದಿವಂಗತ ನಜೀರ್ ಅಹಮ್ಮದ್ ಅವರ ಪತ್ನಿ ನಿಕಾತ್ ಆಸ್ಮ ಅವರು ಮಾತನಾಡಿದರು.

ವೇದಿಕೆಯಲ್ಲಿ ಪ್ರಮುಖರಾದ ಎಲ್.ಜಿ. ಭಾಸ್ಕರ್, ಅಮಾನುಲ್ಲಾ, ಪಾಪು ಮೂರ್ನಾಡ್, ಜೀವನ್, ಹರೀಶ್ ಮಡಿಕೇರಿ, ನಂದಾ, ಮೆಲ್ವೀನ್ ಲೋಬೋ, ಕ್ಲಿಫರ್ಡ್ ಡಿಮೆಲ್ಲೋ, ಮತ್ತು ನಿವೃತ್ತ ಶಿಕ್ಷಕರಾದ ಆಲ್ಬರ್ಟ್ ಡಿಸೋಜಾ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಉದ್ಯಮಿ ಕೆ.ಪಿ. ಶಕೀಲ್, ಪುರಸಭೆ ಸದಸ್ಯರಾದ ಅಬ್ದುಲ್ ಜಲೀಲ್, ಆಯೋಜಕರಾದ ಅಲ್ತಾಫ್, ಹೆಚ್.ಎಂ. ಆನಂದ್, ನಿಸಾರ್, ಅತೀಫ್ ಮನ್ನಾ, ಟೇರಿ ಡಿಸೇಲ್ವಾ ಮುಂತಾದವರು ಉಪಸ್ಥಿತರಿದ್ದರು.

ಟೂರ್ನಿಯಲ್ಲಿ ಕೊಡಗು ಜಿಲ್ಲೆಯ ವಿವಿಧ ಸ್ಥಳಗಳಿಂದ ಒಟ್ಟು ೧೦ ತಂಡಗಳು ಭಾಗವಹಿಸಿದ್ದವು. ಪಂದ್ಯಾಟದಲ್ಲಿ ಒಟ್ಟು ೧೦೦ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದರು. ಲೀಗ್ ಮಾದರಿಯ ಪಂದ್ಯಾಟಗಳಲ್ಲಿ ಒಟ್ಟು ೬ ಓವರ್‌ಗಳಿಗೆ ಪಂದ್ಯ ಸೀಮಿತವಾಗಿತ್ತು. ಪ್ರಥಮ ಸೆಮಿಫೈನಲ್ ಪಂದ್ಯಾಟವು ಕೂರ್ಗ್ ವಾರಿರ‍್ಸ್ ತಂಡ ಮತ್ತು ಟೀಂ ಮಂಜೇಶ್ ತಂಡಗಳ ಮಧ್ಯೆ ನಡೆಯಿತು. ಕೂರ್ಗ್ ವಾರಿರ‍್ಸ್ ತಂಡ ಜಯಗಳಿಸಿ ಫೈನಲ್‌ಗೆ ಅರ್ಹತೆ ಪಡೆಯಿತು. ದ್ವಿತೀಯ ಪಂದ್ಯ ಎಂ.ವೈ.ಸಿ.ಸಿ ಮತ್ತು ರೈರ‍್ಸ್ ತಂಡಗಳ ಮಧ್ಯೆ ನಡೆದು ಎಂ.ವೈಸಿ.ಸಿ ತಂಡ ಜಯಗಳಿಸಿತು. ಎಲಿಮಿನೇರ‍್ಸ್ ಎಂ.ವೈ.ಸಿ.ಸಿ ಮತ್ತು ಟೀಂ ಮಂಜೇಶ್ ತಂಡಗಳ ಮಧ್ಯೆ ನಡೆದು ಟೀಂ ಮಂಜೇಶ್ ಫೈನಲ್‌ಗೆ ಆರ್ಹತೆ ಪಡೆಯಿತು. ಫೈನಲ್ ಪಂದ್ಯ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಮಂಜೇಶ್ ತಂಡ ನಿಗದಿತ ೬ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೨೦ ರನ್ ಕಲೆಹಾಕುವಲ್ಲಿ ಶಕ್ತವಾಯಿತು. ತನ್ನ ಎದುರಾಳಿಗೆ ೨೧ ರನ್‌ಗಳ ಗುರಿ ನೀಡಿತ್ತು. ಸುಲಭ ತುತ್ತಾದ ರನ್ ಗಳಿಕೆಯಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೩ ಓವರ್‌ಗಳಲ್ಲಿ ೨೨ ರನ್ ಗಳಿಸಿದ ಕೂರ್ಗ್ ವಾರಿರ‍್ಸ್ ತಂಡ ವಿಜಯದ ಮಾಲೆಗೆ ಕೊರಳೊಡ್ಡಿತು.

ಪಂದ್ಯಾಟದ ತೀರ್ಪುಗಾರರಾಗಿ ಮೈಸೂರಿನ ಎಜಾಜ್ ಮತ್ತು ವೀರಾಜಪೇಟೆಯ ಅಫ್ರೀದ್ ಅವರು ಕರ್ತವ್ಯ ನಿರ್ವಹಿಸಿದರು. ವಿಜೇತ ತಂಡಕ್ಕೆ ೬೬,೬೬೬ ರೂ. ನಗದು ಮತ್ತು ಆಕರ್ಷಕ ಟ್ರೋಫಿ ಮತ್ತು ಪರಾಜಿತ ತಂಡಕ್ಕೆ ೪೪,೪೪೪ ರೂ. ನಗದು ಟ್ರೋಫಿ ನೀಡಿ ಗೌರವಿಸಲಾಯಿತು. ಅಂತಿಮ ಹಂತಕ್ಕೆ ಪ್ರವೇಶ ಮಾಡಿದ ನಾಲ್ಕು ತಂಡಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಬೆಸ್ಟ್ ಕ್ಯಾಚ್ ಎಂ.ಬಿ.ಎಸ್. ಕುಟ್ಟ ತಂಡದ ಅಫ್ತಾಬ್, ಬೆಸ್ಟ್ ಫೀಲ್ಡರ್ ಡೈಮಂಡ್ ಮಣಿ, ಬೆಸ್ಟ್ ಸೀನಿಯರ್ ಪ್ಲೇಯರ್ ಟೇರಿ ಡಿಸೆಲ್ವಾ, ಬೆಸ್ಟ್ ಬೌಲರ್ ರತ್ನ ಕುಮಾರ್, ಬೆಸ್ಟ್ ಬ್ಯಾಟ್ಸ್ಮನ್ ಸಂತೋಷ್ ಗೌಡ, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ರಿಯಾಜ್, ಉತ್ತಮ ತಂಡ ಮನ್ನಾ ಸೂಪರ್ ಕಿಂಗ್ಸ್, ಬೆಸ್ಟ್ ಕೀಪರ್ ಸುಭಾಷ್ ಅವರುಗಳು ಪ್ರಶಸ್ತಿಗಳನ್ನು ಪಡೆದುಕೊಂಡರು.