ಸೋಮವಾರಪೇಟೆ, ಮೇ ೫: ಮದುವೆ ಎಂಬುದು ಒಂದು ಸುಂದರ ಅನುಭೂತಿ. ನೆಂಟರಿಷ್ಟರ ಸಂಭ್ರಮ, ಬಂಧುಬಳಗದವರ ಪಾದರಸದ ಓಡಾಟ, ಎಲ್ಲರ ಮೊಗದಲ್ಲೂ ನಗು.., ಹಿರಿಯರ ಆಶೀರ್ವಾದದೊಂದಿಗೆ ಸಪ್ತಪದಿ ತುಳಿದು ಬಾಳಲ್ಲಿ ಸತಿ-ಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವ ಅಪೂರ್ವ ಘಳಿಗೆ. ಇಂತಹದೇ ಘಳಿಗೆಗೆ ಇನ್ನೇನು ಕೆಲವೇ ಗಂಟೆಗಳಿರುವಾಗ ಮದುವೆಯೇ ಮುರಿದು ಬಿದ್ದ ಅಪರೂಪದ ವಿಲಕ್ಷಣ ಘಟನೆ ಪಟ್ಟಣದಲ್ಲಿ ನಡೆದಿದೆ.

ನಿನ್ನೆ ರಾತ್ರಿ ಮದುವೆ ಮಂಟಪಕ್ಕೆ ಬಂದ ವರನ ಕಡೆಯವರು ಆರಂಭದಿAದಲೇ ತಗಾದೆ ತೆಗೆದು, ಊಟದ ವಿಚಾರದಲ್ಲಂತೂ ಕೋಲಾಹಲ ಎಬ್ಬಿಸಿ, ಅಂತಿಮವಾಗಿ ಮದುವೆಯೇ ರದ್ದುಗೊಂಡ ಘಟನೆಗೆ ವಧು-ವರನ ಕಡೆಯವರು ಸಾಕ್ಷಿಯಾಗಿದ್ದು, ಘಟನೆಯ ಹಿನ್ನೆಲೆ ವಧುವಿನ ಬಳಗ ಪೊಲೀಸ್ ಠಾಣೆ ಎದುರು ಜಮಾಯಿಸಿ ಆಕ್ರೋಶ ಹೊರಹಾಕಿದ ಘಟನೆ ನಡೆಯಿತು.

ಪಟ್ಟಣ ಸಮೀಪದ ಹಾನಗಲ್ಲು ಗ್ರಾಮದ ಸಿದ್ದಾರ್ಥ ಬಡಾವಣೆಯ ಯುವತಿಯ ವಿವಾಹ ತುಮಕೂರು ಜಿಲ್ಲೆಯ ಯುವಕನೋರ್ವನೊಂದಿಗೆ ನಿಶ್ಚಯವಾಗಿದ್ದು, ಈರ್ವರೂ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಉಭಯ ಕಡೆಯವರ ಮಾತುಕತೆಯಂತೆ ತಾ. ೫ರಂದು ವಿವಾಹ ನಿಗದಿಯಾಗಿತ್ತು. ಇಲ್ಲಿನ ಜಾನಕಿ ಕನ್ವೆನ್ಷನ್ ಹಾಲ್‌ನಲ್ಲಿ ಏರ್ಪಟ್ಟಿದ್ದ ಮದುವೆಗೆ ನಿನ್ನೆ ಸಂಜೆಯೇ ತುಮಕೂರಿನಿಂದ ವರನ ಕಡೆಯವರು ಆಗಮಿಸಿದ್ದರು.

ವಧುವಿನ ಕಡೆಯವರು ಕಲ್ಯಾಣ ಮಂಟಪಕ್ಕೆ ಬರಲು ತಡವಾದ ಹಿನ್ನೆಲೆ, ವರನ ಕಡೆಯವರು ಪಟ್ಟಣದ ಲಾಡ್ಜ್ವೊಂದರಲ್ಲಿ ಕೊಠಡಿ ಪಡೆದಿದ್ದರು. ಸಂಜೆ ೬ ಗಂಟೆ ಸುಮಾರಿಗೆ ಮಂಟಪಕ್ಕೆ ವಧುವಿನ ಕಡೆಯವರು ಆಗಮಿಸಿ ವರನಿಗೆ ಕರೆ ಮಾಡಿ ತಿಳಿಸಿದರೂ ರಾತ್ರಿ ೯ ಗಂಟೆ ಸುಮಾರಿಗೆ ವರ ಸೇರಿದಂತೆ ಆತನ ಬಳಗದವರು ಆಗಮಿಸಿದರು.

ಅಷ್ಟರಲ್ಲೇ ವರ ಸೇರಿದಂತೆ ಆತನ ಕಡೆಯವರು ಕುಪಿತರಾಗಿ ವಧುವಿನ ಮನೆಯವರೊಂದಿಗೆ ಮುನಿಸಿಕೊಂಡಿದ್ದರು. ರಾತ್ರಿ ಊಟಕ್ಕೆ ‘ಸಿಹಿ ತಿಂಡಿ ಮಾಡಿಲ್ಲ’ ಎಂಬ ಕಾರಣವನ್ನೇ ಮುಂದಿಟ್ಟುಕೊAಡು ವರನ ಕಡೆಯವರು ಗಲಾಟೆ ಮಾಡಿದ್ದು, ವೇದಿಕೆಯಲ್ಲಿಯೇ ಅವಮಾನ ಮಾಡಿದ್ದಾರೆ. ನೆಂಟರಿಷ್ಟರು, ಬಂಧುಬಳಗದವರ ಎದುರೇ ಗಲಾಟೆ ತಾರಕಕ್ಕೆ ಹೋಗಿದ್ದು, ಅಂತಿಮವಾಗಿ ವಧು ಕಣ್ಣೀರು ಹಾಕುತ್ತಲೇ ರಾತ್ರಿ ೧೨.೪೫ಕ್ಕೆ ಉಂಗುರ ಬದಲಾಯಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ.

ಇಲ್ಲಿಗೆ ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಮತ್ತೆ ಮಾತಿಗೆ ಮಾತು ಬೆಳೆದಿದೆ. ನಿಶ್ಚಿತಾರ್ಥದ ಉಂಗುರವನ್ನು ಕಿತ್ತು ಹುಡುಗಿಯತ್ತ ಎಸೆದ ವರ, ನನಗೆ ಮದುವೆ ಬೇಡ, ನಾನು ತೊಡಿಸಿದ್ದ ರಿಂಗ್ ವಾಪಸ್ ಕೊಡು ಎಂದು ಕೇಳಿದ್ದಾನೆ. ಇದಕ್ಕೆ ವಧೂ ಸಹ ಉಂಗುರವನ್ನು ವಾಪಸ್ ನೀಡಿದ್ದಾಳೆ. ಈ ಸಂದರ್ಭ ಎರಡೂ ಕುಟುಂಬಗಳ ನಡುವೆ ವಾಗ್ವಾದ ತಾರಕಕ್ಕೇರಿದ್ದು, ಈ ಸಮಯದಲ್ಲಿ ವರನ ಸಹೋದರನ ಕೈಗೆ ಗಾಯವಾಗಿದೆ.

ಅಲ್ಲಿಂದ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ವಧು-ವರರ ಸಹಿತ ಎರಡೂ ಕಡೆಯ ಕುಟುಂಬ ಸದಸ್ಯರು ಠಾಣೆಗೆ ಬಂದು ಮಾತುಕತೆ ನಡೆಸಿದ್ದು, ಆರಂಭದಲ್ಲಿ ಮದುವೆಯೇ ಬೇಡ ಎಂದಿದ್ದ ವರ ನಂತರ ಮದುವೆಯಾಗುತ್ತೇನೆ ಎಂದು ಮಾತು ಬದಲಿಸಿದ್ದಾನೆ.

ಇಷ್ಟೆಲ್ಲಾ ಅವಾಂತರಗಳು ನಡೆದ ಮೇಲೆ ‘ನಮ್ಮ ಮಗಳನ್ನು ಈತನಿಗೆ ಮದುವೆ ಮಾಡಿಕೊಡಲು ಇಷ್ಟವಿಲ್ಲ, ಒಂದು ವೇಳೆ ಮಗಳು ಒಪ್ಪಿದರೆ ನಮ್ಮ ಅಭ್ಯಂತರವಿಲ್ಲ’ ಎಂದು ವಧುವಿನ ಪೋಷಕರು ತಿಳಿಸಿದರೆ, ನನ್ನ ಪೋಷಕರಿಗೆ ಅವಮಾನ ಮಾಡಿದ ಈತ ಮುಂದೆ ಮದುವೆಯಾದರೆ ನನ್ನನ್ನು ಸಾಕುವುದಿಲ್ಲ. ಮದುವೆ ಮಂಟಪದಲ್ಲಿಯೇ ಊಟದ ವಿಚಾರಕ್ಕೆ ಇಷ್ಟೆಲ್ಲಾ ಗಲಾಟೆ ಮಾಡಿ ಮದುವೆಯೇ ಬೇಡ ಎಂದಿರುವ ಹಿನ್ನೆಲೆ ನನಗೆ ಮದುವೆ ಬೇಡ ಎಂದು ವಧು ಕಡ್ಡಿಮುರಿದಂತೆ ಹೇಳಿದ್ದಾಳೆ.

ಇತ್ತ ಮದುವೆಗೆಂದು ಕಲ್ಯಾಣ ಮಂಟಪಕ್ಕೆ ಆಗಮಿಸಿದ ಮಂದಿ, ಮದುವೆ ಮಂಟಪ ಖಾಲಿಯಿರುವು ದನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ನಂತರ ಪೊಲೀಸ್ ಠಾಣೆ ಎದುರು ಜಮಾಯಿಸಿ ವರನ ಕುಟುಂಬದ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಮದುವೆಗೆಂದು ಖರ್ಚು ಮಾಡಿದ್ದ ಹಣವನ್ನು ವರನ ಕಡೆಯವರು ವಾಪಸ್ ಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಈ ಸಂದರ್ಭ ಪೊಲೀಸರು ಗುಂಪನ್ನು ಚದುರಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಅAತಿಮವಾಗಿ ಉಭಯ ಕಡೆಯ ವರಿಂದಲೂ ದೂರು ಸ್ವೀಕರಿಸಿ ಹಿಂಬರಹ ನೀಡಿದ ಪೊಲೀಸರು, ಹಣಕಾಸಿನ ವಿಚಾರವನ್ನು ಮುಂದಿನ ಹಂತದಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ಮನವೊಲಿಸಿದರು.

‘ಸಿಹಿ ತಿಂಡಿ ನೀಡಿಲ್ಲ’ ಎಂಬ ಕ್ಷÄಲ್ಲಕ ವಿಚಾರಕ್ಕೆ ಆರಂಭಗೊAಡ ಗಲಾಟೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಿದ್ಧತೆ ಪೂರ್ಣ ಗೊಳಿಸಿದ್ದ ಮದುವೆಯನ್ನೇ ರದ್ದು ಗೊಳಿಸಿತು. ಸತಿ ಪತಿಗಳಾಗಬೇಕಿದ್ದ ವಧು-ವರರು ಕಲ್ಯಾಣ ಮಂಟಪ ದಿಂದ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರಾದರು. ವಧುವಿನ ಪೋಷಕರು, ಸಂಬAಧಿಕರ ಮನಸ್ಸುಗಳು ನೋವು ತುಂಬಿ ಭಾರವಾಗಿದ್ದವು!