ವೀರಾಜಪೇಟೆ, ಮೇ ೬: ಸಮೀಪದ ಹೆಗ್ಗಳ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಶಾಲಾ ಮಕ್ಕಳ ಉಚಿತ ಬೇಸಿಗೆ ಶಿಬಿರ ಮುಕ್ತಾಯಗೊಂಡಿತು.

೨೨ ದಿನಗಳ ಕಾಲ ಜರುಗಿದ ಶಿಬಿರದಲ್ಲಿ ವಿವಿಧ ಶಾಲೆಗಳ ಮೂವತ್ತಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು. ಶಿಬಿರದಲ್ಲಿ ವೀರಾಜಪೇಟೆಯ ನುರಿತ ತರಬೇತುದಾರರಿಂದ ಮಕ್ಕಳಿಗೆ ಯೋಗ, ಕರಾಟೆ, ಮಾರ್ಷಲ್ ಆರ್ಟ್ಸ್, ಕ್ರಾಫ್ಟ್, ನೃತ್ಯ, ಸಂಗೀತ, ಆಂಗ್ಲ ಭಾಷೆ ಕಲಿಕೆ, ಕ್ರೀಡೆ, ಡ್ರಾಯಿಂಗ್, ಕ್ಷೇತ್ರ ಪರಿಚಯ ಇನ್ನೂ ಮುಂತಾದ ವಿಚಾರಗಳ ಬಗ್ಗೆ ತರಬೇತಿ ನೀಡಲಾಯಿತು. ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಆಯೋಜಕರಾದ ಶಾಲಾ ಮುಖ್ಯೋಪಾಧ್ಯಾಯಿನಿ ಕಮಲಮ್ಮ ಮಕ್ಕಳು ಹಲವಾರು ವಿಷಯಗಳನ್ನು ಈ ಶಿಬಿರದಿಂದ ಕಲಿತಿದ್ದು, ಗ್ರಾಮೀಣ ಮಕ್ಕಳಿಗೆ ಪ್ರಯೋಜನವಾಗಿದೆ ಎಂದರು. ಈ ಸಂದರ್ಭ ಶಿಕ್ಷಣ ಇಲಾಖಾ ಅಧಿಕಾರಿಗಳಾದ ವೆಂಕಟೇಶ್, ವನಜಾಕ್ಷಿ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಶಾಂತಿ, ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತರಾದ ಸೌಮ್ಯ, ರತಿ, ಕೊಡಗು ಜಿಲ್ಲಾ ಅಕ್ಷರ ದಾಸೋಹ ಸಮಿತಿ ಅಧ್ಯಕ್ಷೆ ಪ್ರಮೀಳಾ, ಪೋಷಕರು, ಗ್ರಾಮಸ್ಥರು, ಮಕ್ಕಳು ಹಾಜರಿದ್ದರು.