ಮಡಿಕೇರಿ, ಮೇ ೭: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೀಗ ೧೧೦ ವರ್ಷಗಳ ಸಂಭ್ರಮ. ಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆಗಾಗಿ ೧೯೧೫ರಲ್ಲಿ ಆಗಿನ ಮೈಸೂರು ಸಂಸ್ಥಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವಿಶೇಷ ಕಾಳಜಿ ವಹಿಸಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ ಸಂಸ್ಥಾಪನೆ ಗೊಳ್ಳಲು ಪ್ರಮುಖ ಕಾರಣರಾಗಿದ್ದರು. ಆಗಿನಿಂದ ಇಂದಿನವರೆಗೂ ಹಲವು ಮಹನೀಯರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿ ಕನ್ನಡ ನಾಡು, ನುಡಿ ಬೆಳವಣಿಗೆಗೆ ನೆರವಾಗಿದ್ದಾರೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.

ನಗರದ ಕ.ಸಾ.ಪ. ಕಚೇರಿಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಕರ್ನಾಟಕ ಸುವರ್ಣ ಸಂಭ್ರಮ: ೫೦ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು, ಮಾತನಾಡಿದರು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ರಕ್ಷಣೆಗಾಗಿ ದುಡಿದವರನ್ನು ಸ್ಮರಿಸುವ ಮೂಲಕ ಎಲ್ಲರೂ ಕನ್ನಡಕ್ಕಾಗಿ ಕೈಎತ್ತಿ ನಾಡು-ನುಡಿಯ ರಕ್ಷಣೆಗೆ ಕಂಕಣಬದ್ಧ ರಾಗಿರಬೇಕು ಎಂದರು.

ಕೊಡಗು ಜಿಲ್ಲೆಯಲ್ಲಿ ಸ್ವಾತಂತ್ರ‍್ಯ ಪೂರ್ವದಲ್ಲಿ ಹುಟ್ಟಿಕೊಂಡ ಹಲವಾರು ಸಂಸ್ಥೆಗಳು ಕನ್ನಡ ಭಾಷೆ, ಸಾಹಿತ್ಯ, ಪರಂಪರೆಗೆ ಶ್ರಮಿಸಿವೆ. ತರುವಾಯ ದಿ. ಡಿ.ಜೆ. ಪದ್ಮನಾಭ ಅವರ ನೇತೃತ್ವದಲ್ಲಿ ಕೊಡಗಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ಬಂದು ೫೪ ವರ್ಷಗಳು ಸಂದಿವೆ. ಅಂದಿನಿAದ ಜಿಲ್ಲೆಯಲ್ಲಿ ಪರಿಷತ್ತಿನ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳು, ತಾಲೂಕು, ಜಿಲ್ಲಾ ಸಮ್ಮೇಳನಗಳು ಸೇರಿದಂತೆ ಜಿಲ್ಲೆಯಲ್ಲಿ ಈ ತನಕ ಮೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಟಿ.ಪಿ. ರಮೇಶ್ ತಿಳಿಸಿದರು. ಮುಖ್ಯ ಭಾಷಣ ಮಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಟಿ.ಜಿ. ಪ್ರೇಮ ಕುಮಾರ್, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕAತಿ, ಪರಂಪರೆಯನ್ನು ರಕ್ಷಿಸಲು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ೧೯೧೫ ರಂದು ಕನಾಟಕ ಸಾಹಿತ್ಯ ಪರಿಷತ್ ಸ್ಥಾಪನೆಯಾಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರವಾದುದು. ಒಡೆಯರ್ ಅವರ ಪ್ರಯತ್ನಕ್ಕೆ ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಅವರ ಕಾರ್ಯ ಕೂಡ ಗಣನೀಯವಾದುದು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ಆರ್. ನಗರ ತಾಲೂಕಿನ ಡೋರನಹಳ್ಳಿ ಸಂತ ಅಂತೋಣಿ ಪ್ರೌಢ ಶಾಲೆಯ ಕನ್ನಡ ಅಧ್ಯಾಪಕ ವಿಲೆಡ್ ಕ್ರಾಸ್ತಾ, ಮೈಸೂರು ಸಂಸ್ಥಾನದ ಮೂಲಕ ಕನ್ನಡ ನಾಡಿನ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನ್ನಡ ಸೇವೆಯು ಅನುಕರಣೀಯ ವಾದುದು. ಕನ್ನಡ ನಾಡಿಗೆ ಒಡೆಯರ ಕೊಡುಗೆ ಅಪಾರವಾದುದು. ಕನ್ನಡಿಗರಾದ ನಾವೆಲ್ಲರೂ ಜತೆಗೂಡಿ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಎಸ್.ಐ. ಮುನಿರ್ ಅಹ್ಮದ್, ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಭಾಷೆ, ನಾಡು ನುಡಿ, ನೆಲ-ಜಲ, ರಕ್ಷಣೆಗೆ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಕನ್ನಡನಾಡಿನ ಸಾಹಿತ್ಯ ದಿಗ್ಗಜರು ನಾಡು-ನುಡಿ, ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸಿದ್ದಾರೆ. ನಾವೆಲ್ಲರೂ ಜತೆಗೂಡಿ ಸಾಹಿತ್ಯ ಪರಿಷತ್ತನ್ನು ಗಟ್ಟಿಗೊಳಿಸಬೇಕಿದೆ ಎಂದರು. ಭಾರತ್ ಸೈಟ್ಸ್, ಗೈಡ್ಸ್ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿಮ್ಯಾಥ್, ಜಿಲ್ಲಾ ಲೇಖಕರು ಮತ್ತು ಕಲಾವಿದರ ಸಂಘದ ಅಧ್ಯಕ್ಷ ಲೋಕನಾಥ್ ಅಮೆಚೂರ್, ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷೆ ಕಡ್ಲೇರ ತುಳಸಿ ಮಾತನಾಡಿದರು. ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ರೇವತಿ ರಮೇಶ್, ಪದಾಧಿಕಾರಿಗಳಾದ ಎಂ.ಎನ್. ವೆಂಕಟನಾಯಕ್, ಹೆಚ್.ಎಸ್. ಪ್ರೇಮಕುಮಾರ್, ಮಾಜಿ ಕೋಶಾಧಿಕಾರಿ ಶ್ವೇತ ರವೀಂದ್ರ, ತಾಲೂಕು ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷ ಅಂಬೇಕಲ್ ನವೀನ್, ಕಾರ್ಯದರ್ಶಿ ಬಾಳೆಯಡ ದಿವ್ಯ, ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪುರಸ್ಕೃತರಾದ ಕಟ್ರತನ ಲಲಿತಾ ಅಯ್ಯಣ್ಣ, ಕಸಾಪ ಪರಿಷತ್ತಿನ ಸದಸ್ಯರಾದ ಕೆ.ಯು. ರಂಜಿತ್, ಕೆ.ವಿ. ಉಮೇಶ್, ಚೊಕ್ಕಾಡಿ ಪ್ರೇಮ ರಾಘವಯ್ಯ, ದಂಬೆಕೋಡಿ ನಿಖಿಲ್, ಅಬ್ದುಲ್ಲಾ, ಜಯಮ್ಮ, ಸೌಮ್ಯ, ಕಚೇರಿ ವ್ಯವಸ್ಥಾಪಕಿ ರೇಣುಕ ಇತರರು ಹಾಜರಿದ್ದರು. ಅಧ್ಯಾಪಕ ಮೆ.ನಾ. ವೆಂಕಟನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯರಾದ ಪ್ರೇಮ ರಾಘವಯ್ಯ, ಸೌಮ್ಯ ಕನ್ನಡ ಗೀತೆ ಹಾಡಿದರು.