ಸುಂಟಿಕೊಪ್ಪ, ಮೇ ೭: ಆನ್‌ಲೈನ್ ವಂಚನೆಯ ಬಗ್ಗೆ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಕೂಡ ಕೆಲವರು ಆನ್‌ಲೈನ್ ವಂಚಕರ ಮೋಸದ ನಯ ಮಾತಿಗೆ ಬಲಿಯಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ.

ಸುಂಟಿಕೊಪ್ಪ ಸಮೀಪದ ಗರಗಂದೂರು ಗ್ರಾಮದ ವಿ.ಆರ್. ಸುರೇಶ್ ಎಂಬವರಿಗೆ ಇತ್ತೀಚೆಗೆ ಮೊಬೈಲ್ ನಂ. ೮೭೮೭೩೯೭೫೪೮ ರಿಂದ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ, “ನನ್ನ ಹೆಸರು ರಮೇಶ್, ಭಾರತೀಯ ಸೇನೆಯ ಪಾರ್ಸೆಲ್ ವಿಭಾಗ ಬೆಂಗಳೂರಿನಲ್ಲಿ ಡ್ಯೂಟಿ ಮಾಡಿಕೊಂಡಿದ್ದೇನೆ. ನನಗೆ ಜಮ್ಮು ಕಾಶ್ಮೀರಕ್ಕೆ ಟ್ರಾನ್ಸ್ಫರ್ ಆಗಿದೆ. ನನ್ನ ಹತ್ತಿರ ಬೊಲೆರೋ ವಾಹನವಿದ್ದು, ಕಡಿಮೆ ಬೆಲೆಗೆ ರೂ. ೧,೩೫,೫೦೦ಕ್ಕೆ ನಿಮಗೆ ಮಾರಾಟ ಮಾಡುತ್ತೇನೆ. ಬೇಕಿದ್ದಲ್ಲಿ ನನ್ನ ಫೇಸ್‌ಬುಕ್ ಎಕೌಂಟ್ ನೋಡಿ” ಎಂದು ನಯವಾಗಿ ಹಿಂದಿಯಲ್ಲಿ ಹೇಳಿದ್ದಾನೆ. ಈತನ ಮಾತನ್ನು ಸುರೇಶ್ ಅವರು ನಂಬದಿದ್ದಾಗ, ಸೇನಾ ಸಮವಸ್ತçದಲ್ಲಿಯೆ ವೀಡಿಯೋ ಕರೆ ಮಾಡಿ, “ನಾನು ಆರ್ಮಿಯಲ್ಲಿದ್ದು ದೇಶಸೇವೆ ಮಾಡುತ್ತಿದ್ದೇನೆ. ನಿಮಗೆ ಮೋಸ ಮಾಡುವುದಿಲ್ಲ. ಒಂದು ಲಕ್ಷ ರೂಪಾಯಿ ಆನ್‌ಲೈನ್ ಪೇಮೆಂಟ್ ಮಾಡಿದರೆ ಬೆಂಗಳೂರಿಗೆ ಬಂದು ಬೊಲೆರೋ ತೆಗೆದುಕೊಂಡು ಹೋಗಬಹುದು” ಎಂದೂ ಹೇಳಿದ್ದಾನೆ. ಇದರಿಂದ ಆತನ ಮೇಲೆ ವಿಶ್ವಾಸ ಮೂಡಿ ಸುರೇಶ್ ಅವರು ಬೆಂಗಳೂರಿನಲ್ಲಿರುವ ಪರಿಚಿತರ ಮೂಲಕ ಮೊದಲಿಗೆ ರೂ. ೧ ಲಕ್ಷವನ್ನು ಆನ್‌ಲೈನ್ ಮೂಲಕ ಪಾವತಿಸಿದ್ದಾರೆ. ಪುನಃ ೩೧,೫೦೦ ಹಣವನ್ನು ಹಾಕಲು ಹೇಳಿದಾಗ ಅಷ್ಟೂ ಹಣವನ್ನು ಪಾವತಿಸಿದ್ದಾರೆ. ತದನಂತರವೂ ಪುನಃ ೧ ಲಕ್ಷ ಹಣ ಹಾಕಲು ತಿಳಿಸಿದಾಗ ಸುರೇಶ್ ಅವರಿಗೆ ಸಂಶಯ ಬಂದು ಈ ಕುರಿತು ಪ್ರಶ್ನಿಸುತ್ತಿದ್ದಂತೆಯೇ ಮೊಬೈಲ್ ಸಂಪರ್ಕ ಕಡಿತಗೊಳಿಸಿ ಸ್ವಿಚ್‌ಆಫ್ ಮಾಡಿದ್ದಾನೆ. ಇನ್ನೊಂದೆಡೆ ಫೇಸ್‌ಬುಕ್ ಖಾತೆ ಡಿಲೀಟ್ ಆಗಿದೆ. ಹಣ ಕಳೆದುಕೊಂಡಿರುವ ಸುರೇಶ್ ಅವರು ಹಣ ಪಾವತಿಸಿದ ಪರಿಚಿತರ ಮೂಲಕ ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಗ್ಗದ ಬೆಲೆಗೆ ಸಿಗಲಿರುವ ಬೊಲೆರೋದಲ್ಲಿ ವಿಹರಿಸುವ ಕನಸು ಕಾಣುತ್ತಿದ್ದ ಸುರೇಶ್ ಇದೀಗ ಹಣ ಕಳೆದುಕೊಂಡು ಮೋಸ ಹೋಗಿದ್ದಾರೆ. -ರಾಜು ರೈ