ಕಣಿವೆ, ಮೇ ೭: ಹಳೆ ಕೂಡಿಗೆ, ಭುವನಗಿರಿ ಹಾಗೂ ಕಣಿವೆ ತ್ರಿವಳಿ ಗ್ರಾಮಗಳ ಕೊಂಡಿಯಾಗಿರುವ ದಂಡಿನಮ್ಮನ ಕೆರೆಯಲ್ಲಿ ತುಂಬಿರುವ ಹೂಳನ್ನು ರೈತರೇ ಸೇರಿ ತೆಗೆಯುತ್ತಿದ್ದಾರೆ. ಹೂಳು ತೆಗೆದು ತಮ್ಮ ಕೃಷಿ ಭೂಮಿಗೆ ಹಾಕಿಕೊಳ್ಳುವ ಕೋರಿಕೆಗೆ ನೀರಾವರಿ ನಿಗಮದ ಅಧಿಕಾರಿಗಳು ಷರತ್ತುಗಳೊಂದಿಗೆ ಮೌಖಿಕ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

ದಂಡಿನಮ್ಮನ ಕೆರೆಯ ಹೂಳು ತೆಗೆದು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕೆಂಬ ರೈತರ ಕೋರಿಕೆಗೆ ಸ್ಪಂದಿಸಿರುವ ನೀರಾವರಿ ನಿಗಮದ ಅಧಿಕಾರಿಗಳು ಕೆರೆಯ ಅಭಿವೃದ್ಧಿಗೆ ಸಂಬAಧಿಸಿದAತೆ ಪೂರಕವಾದ ಅನುದಾನಕ್ಕಾಗಿ ಜಲ ಸಂಪನ್ಮೂಲ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಹಾರಂಗಿ ಯೋಜನೆಯ ಅಧೀಕ್ಷಕ ಅಭಿಯಂತರ ರಘುಪತಿ ‘ಶಕ್ತಿ'ಗೆ ಮಾಹಿತಿ ನೀಡಿದ್ದಾರೆ. ದಂಡಿನಮ್ಮನ ಕೆರೆ ಸುಮಾರು ೩೭ ಎಕರೆಯಷ್ಟು ವಿಶಾಲ ವ್ಯಾಪ್ತಿಯಲ್ಲಿ ಇದ್ದು ಸುತ್ತಲಿನ ಕೃಷಿಕರಿಂದ ಒತ್ತುವರಿಯಾಗಿದ್ದು, ಕೆರೆಯನ್ನು ಸಮಗ್ರವಾಗಿ ಸರ್ವೆ ಮಾಡಲು ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ. ಚುನಾವಣಾ ಪ್ರಕ್ರಿಯೆಯ ನೀತಿ ಸಂಹಿತೆ ಮುಗಿದ ಬಳಿಕ ಕೆರೆಯ ಸರ್ವೆ ನಡೆಸುವುದಾಗಿ ಕುಶಾಲನಗರ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವ ಕೃಷಿಕರು ಅವರಾಗಿಯೇ ಬಿಟ್ಟುಕೊಟ್ಟರೆ ಉತ್ತಮ. ಇಲ್ಲವಾದಲ್ಲಿ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುತ್ತದೆ ಎಂದು ರಘುಪತಿ ಎಚ್ಚರಿಸಿದ್ದಾರೆ.