ಮಡಿಕೇರಿ, ಮೇ ೭: ರಾಜ್ಯದಲ್ಲಿ ೧ ಕೋಟಿ ೧೫ ಲಕ್ಷ ಪ್ರಮುಖ ಜಾನುವಾರುಗಳಿದ್ದು, ೧ ಕೋಟಿ ೭೨ ಲಕ್ಷ ಚಿಕ್ಕ ಜಾನುವಾರುಗಳಿವೆ ಇವುಗಳ ಸಂರಕ್ಷಣೆಯನ್ನು ಮಾಡುವಲ್ಲಿ ಕಾಂಗ್ರೆಸ್ ಸರ್ಕಾರವು ವಿಫಲಗೊಂಡಿದೆ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಆರೋಪಿಸಿದೆ.

೨೦೨೩-೨೪ರಲ್ಲಿ ಕರ್ನಾಟಕ ರಾಜ್ಯದ ೧೯೬ ತಾಲೂಕುಗಳು ತೀವ್ರ ಬರಕ್ಕೆ ಒಳಗಾಗಿದ್ದು ಮತ್ತು ೨೭ ತಾಲೂಕುಗಳು ಸಾಧಾರಣ ಬರಕ್ಕೆ ಒಳಗಾಗಿದೆ ಎಂದು ಸರ್ಕಾರ ಘೋಷಿಸಿತ್ತು. ಪ್ರಮುಖ ಜಾನುವಾರುಗಳಿಗೆ ಪ್ರತಿದಿನ ೬ ಕೆ.ಜಿ ಒಣ ಮೇವಿನ ಅವಶ್ಯಕತೆಯಿದ್ದು, ಚಿಕ್ಕ ಜಾನುವಾರುಗಳಿಗೆ (ಕುರಿ ಮತ್ತು ಆಡು) ೧/೨ ಕೆ.ಜಿ ಒಣ ಮೇವು ಅವಶ್ಯಕತೆಯಿದೆ.ಆದರೆ ಸರಕಾರ ಯಾವುದೇ ಮುಂಜಾಗ್ರತಾ ಕ್ರಮ ವಹಿಸದೆ ಜಾನುವಾರುಗಳು ಮತ್ತು ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ದೂರಿದೆ.

ರೈತರಿಗೆ ಹಸಿರು ಮೇವು ಉತ್ಪಾದನೆ ಮಾಡಲು ಬೀಜಗಳನ್ನು ನೀಡಿಲ್ಲ, ಹಸಿರು ಮೇವು ಬೆಳೆಯಲು ಯಾವುದೇ ಜಾಗ ಅಥವಾ ಗೋಮಾಳ ಗುರುತಿಸಿಲ್ಲ, ಮಿನಿ ಕಿಟ್‌ನಲ್ಲಿ ಬೀಜಗಳನ್ನು ವಿತರಿಸಬೇಕು ಎಂಬ ಮಾರ್ಗಸೂಚಿ ಇದ್ದರೂ ಅದರ ಪಾಲನೆಯಾಗುತ್ತಿಲ್ಲ. ಜಾನುವಾರುಗಳ ಆರೋಗ್ಯ ಕಾಪಾಡಲು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ, ಜಿಲ್ಲಾ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಕೂಡ ರೈತರಿಗೆ ಮಾಹಿತಿ, ಸಹಕಾರ ನೀಡುವುದಾಗಲಿ ಮಾಡುತ್ತಿಲ್ಲ. ಹೈನುಗಾರಿಕೆಯನ್ನು ನಂಬಿದ್ದು, ರೈತರ ಸ್ಥಿತಿ ಶೋಚನೀಯವಾಗಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೊಡಗಿನ ಜಿಲ್ಲೆಯ ಹೈನುಗಾರರ ನೆರವಿಗೆ ಧಾವಿಸಬೇಕು ಎಂದು ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅಮ್ಮಣಿಚಂಡ ರಂಜಿ ಪೂಣಚ್ಚ ಆಗ್ರಹಿಸಿದ್ದಾರೆ.