ಮಡಿಕೇರಿ, ಮೇ ೮: ಸಣ್ಣಪುಲಿಕೋಟು ಗ್ರಾಮದ ಕಡೋಡಿ ಶ್ರೀ ಮಹಾವಿಷ್ಣು ದೇವಾಲಯದ ರಸ್ತೆಯನ್ನು ಸುಮಾರು ೧೦ ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕಡೋಡಿ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ದೇವರ ಉತ್ಸವ ನಡೆಯುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹರಕೆ ತೀರಿಸುತ್ತಾರೆ ಮತ್ತು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಬಾರಿಯೂ ಮೇ ೯ ಮತ್ತು ೧೦ ರಂದು ದೇವಾಲಯದ ಉತ್ಸವ ನಡೆಯಲಿದ್ದು, ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಎ.ಎಸ್. ಪೊನ್ನಣ್ಣ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಿದ್ದು, ಉತ್ಸವಕ್ಕೂ ಮುನ್ನ ರಸ್ತೆ ಅಭಿವೃದ್ಧಿಯಾಗಿದೆ.

ಈ ಹಿಂದೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಭಕ್ತರಿಗೆ ಅನಾನುಕೂಲವಾಗಿತ್ತು. ಇದನ್ನು ಮನಗಂಡ ಕುಯ್ಯಮುಡಿ ಹಾಗೂ ಕಡೋಡಿ ಕುಟುಂಬಸ್ಥರು, ಪ್ರಮುಖರಾದ ಹಾರಿಸ್ ಚೆಟ್ಟಿಮಾನಿ, ವಿಶು ಪ್ರವೀಣ್ ಕುಮಾರ್, ಲವ ಕುಯ್ಯಮುಡಿ, ಎಂ.ಬಿ. ಪ್ರೇಮ್‌ಕುಮಾರ್, ಮಂಗೇರಿರ ಜಗದೀಶ್, ಕೊಟ್ಟುಕಂಡ ದೀಪಕ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೆ. ಇಸ್ಮಾಯಿಲ್ ಅವರುಗಳು ಶಾಸಕ ಎ.ಎಸ್. ಪೊನ್ನಣ್ಣ ಅವರ ಗಮನ ಸೆಳೆದು ರಸ್ತೆ ಅಭಿವೃದ್ಧಿಗಾಗಿ ಮನವಿ ಮಾಡಿಕೊಂಡಿದ್ದರು. ಇದೀಗ ದೇವಾಲಯದ ಮುಂಭಾಗ, ಭಾಗಮಂಡಲ ಮುಖ್ಯರಸ್ತೆಯಿಂದ ಕಡೋಡಿ ದೇವಾಲಯಕ್ಕಾಗಿ ಅಯ್ಯಂಗೇರಿಗೆ ತೆರಳುವ ಸಾರ್ವಜನಿಕ ಸಂಪರ್ಕ ರಸ್ತೆಯನ್ನು ಶಾಸಕರ ಅನುದಾನದಿಂದ ಅಭಿವೃದ್ಧಿಪಡಿಸಲಾಗಿದೆ.