ಮಡಿಕೇರಿ, ಮೇ ೮: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ "ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್" ಪಂದ್ಯಾವಳಿಯ ಬುಧವಾರದ ಮೊದಲ ಪಂದ್ಯದಲ್ಲಿ ಪ್ರಗತಿ ಕ್ರಿಕೆಟರ್ಸ್ ತಂಡ ಟೀಂ ಲಿವರೇಜ್ ವಿರುದ್ಧ ೧೪ ರನ್‌ಗಳ ಜಯ ದಾಖಲಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪ್ರಗತಿ ಕ್ರಿಕೆಟರ್ಸ್ ತಂಡ ೨೦ ಓವರ್‌ಗಳಲ್ಲಿ ೧೬೭ ಬಾರಿಸಿತು. ಇದನ್ನು ಬೆನ್ನಟ್ಟಿದ ಟೀಂ ಲಿವರೇಜ್ ೧೮.೨ ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ೧೫೩ ರನ್ ಗಳನ್ನಷ್ಟೇ ಗಳಿಸಿ ಸೋಲು ಒಪ್ಪಿಕೊಂಡಿತು.

ಪ್ರಗತಿ ಕ್ರಿಕೆಟರ್ಸ್ನ ಅಭಿಮನ್ಯು ದೇವಯ್ಯ ಅವರು ೩೬ ಬಾಲ್ ಗಳಲ್ಲಿ ಭರ್ಜರಿ ೭೩ ರನ್‌ಗಳನ್ನು ಗಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡರು.

ಪಂದ್ಯಾಟ ರದ್ದು

ಮಧ್ಯಾಹ್ನ ಆಯೋಜಿಸಲಾಗಿದ್ದ ೨ನೇ ಪಂದ್ಯಾಟದಲ್ಲಿ ಟಾಸ್ ಗೆದ್ದ ರಾಯಲ್ ಟೈಗರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂಜಿಗೇರಿ ನಾಡ್ ತಂಡ ೧೫.೫ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೪೭ ರನ್‌ಗಳನ್ನು ಗಳಿಸಿತ್ತು. ಆದರೆ ಮಳೆ ಬಂದ ಕಾರಣ ಪಂದ್ಯ ರದ್ದುಗೊಂಡಿತು.