ಮಡಿಕೇರಿ, ಮೇ ೮: ಪ್ರಸಕ್ತ ಸಾಲಿನಲ್ಲಿ ಬಿಸಿಲಿನ ತಾಪಮಾನದ ಹೆಚ್ಚಳದಿಂದಾಗಿ ಮದ್ಯಪ್ರಿಯರು ಬಿಯರ್ ಮೊರೆ ಹೋಗುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಿಯರ್ ಅಧಿಕವಾಗಿ ಮಾರಾಟವಾಗಿದೆ.

೨೦೨೩ರ ಜನವರಿ ತಿಂಗಳಿನಲ್ಲಿ ೪೦,೫೫೦ ಬಾಕ್ಸ್ ಬಿಯರ್ ಮಾರಾಟಗೊಂಡಿದ್ದರೆ ಈ ಬಾರಿ ಜನವರಿ ತಿಂಗಳಿನಲ್ಲಿ ೪೫,೩೧೪ ಬಾಕ್ಸ್ ಮಾರಾಟವಾಗಿದೆ. ೨೦೨೩ರ ಫೆಬ್ರವರಿಯಲ್ಲಿ ೪೯,೮೩೨ ಬಾಕ್ಸ್ಗಳಷ್ಟು ಬಿಯರ್ ಮಾಟವಾಗಿತ್ತು. ಈ ಬಾರಿ ಫೆಬ್ರವರಿಯಲ್ಲಿ ೫೩,೪೬೪ ಬಾಕ್ಸ್ ಬಿಯರ್ ಮಾರಾಟವಾಗಿದೆ. ೨೦೨೩ರ ಮಾರ್ಚ್ನಲ್ಲಿ ೬೨,೯೫೪ ಬಾಕ್ಸ್ ಬಿಯರ್ ಬಿಕರಿಯಾಗಿದ್ದು, ಈ ಬಾರಿ ಮಾರ್ಚ್ನಲ್ಲಿ ೬೩,೫೫೦ ಬಾಕ್ಸ್ ಮಾರಾಟವಾಗಿದೆ. ೨೦೨೩ರ ಏಪ್ರಿಲ್‌ನಲ್ಲಿ ೫೯,೨೪೫ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಈ ಬಾರಿ ಏಪ್ರಿಲ್‌ನಲ್ಲಿ ೭೪,೫೩೬ ಬಾಕ್ಸ್ ಬಿಯರ್ ಮಾರಾಟಗೊಂಡಿದೆ. ಆ ಮೂಲಕ ಜನವರಿಯಲ್ಲಿ ೪೭೬೪, ಫೆಬ್ರವರಿಯಲ್ಲಿ ೩೬೩೨, ಮಾರ್ಚ್ನಲ್ಲಿ ೫೯೬, ಏಪ್ರಿಲ್‌ನಲ್ಲಿ ೧೫,೨೯೧ ಬಾಕ್ಸ್ ಬಿಯರ್ ಹೆಚ್ಚುವರಿಯಾಗಿ ಮಾರಾಟಗೊಂಡಿದೆ. ಒಂದು ಬಾಕ್ಸ್ನಲ್ಲಿ ೯ ಲೀಟರ್ ಬಿಯರ್ ಇರುತ್ತದೆ.

ಬಿಸಿಲಿನ ತಾಪದ ಹೆಚ್ಚಳದಿಂದ ಹಾಗೂ ವಾತಾವರಣದಲ್ಲಿನ ಏರುಪೇರಿನಿಂದಾಗಿ ಬಿಯರ್‌ಗೆ ಬೇಡಿಕೆ ಹೆಚ್ಚಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಉತ್ಪಾದನೆಗೆ ನಿಯಂತ್ರಣ ಹೇರುವ ಕಾರಣದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಸರಬರಾಜಾಗುವುದಿಲ್ಲ ವಾದರೂ ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಬಿಯರ್ ದಾಸ್ತಾನು ಕೊರತೆ ಉಂಟಾಗಿಲ್ಲ ಎಂದು ಅಬಕಾರಿ ಉಪ ಆಯುಕ್ತ (ಪ್ರಬಾರ) ಮುರಳೀಧರ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.

ರಾಜ್ಯದಲ್ಲೂ ಬೇಡಿಕೆ

ರಾಜ್ಯದಲ್ಲಿ ಏಪ್ರಿಲ್‌ನ ೧೧ ದಿನಗಳಲ್ಲಿ ೧೭ ಲಕ್ಷ ಲೀಟರ್ ಕೋಲ್ಡ್ ಬಿಯರ್ ಮಾರಾಟವಾಗಿ ಹಿಂದಿನ ೩ ವರ್ಷಗಳ ದಾಖಲೆ ಮುರಿದಿದೆ.

ರಾಜ್ಯದಲ್ಲಿ ಪ್ರಸ್ತುತ ನಿತ್ಯ ೧೧.೫೦ ಲಕ್ಷ ಲೀಟರ್ ಬಿಯರ್ ಮಾರಾಟವಾಗುತ್ತಿದೆ. ಬೇಸಿಗೆಗೆ ಮುನ್ನ ನಿತ್ಯ ೮ ಲಕ್ಷ ಲೀಟರ್ ಬಿಯರ್ ಮಾರಾಟವಾಗುತ್ತಿತ್ತು. ಈಗ ಬೇಸಿಗೆ ಹಿನ್ನೆಲೆ ನಿತ್ಯ ೨ ಲಕ್ಷ ಲೀಟರ್ ಬಿಯರ್ ಬೇಡಿಕೆ ಹೆಚ್ಚಾಗಿದೆ. ಕಳೆದ ವರ್ಷದ ಬೇಸಿಗೆಗೆ ಹೋಲಿಸಿದರೆ ಈ ವರ್ಷದಲ್ಲಿ ಶೇ. ೩೦ ರಷ್ಟು ಮಾರಾಟ ಹೆಚ್ಚಳವಾಗಿದೆ. ಇದೀಗ ಬಿಯರ್‌ಗೆ ಭಾರಿ ಬೇಡಿಕೆ ಉಂಟಾಗಿದ್ದು, ರಾಜ್ಯದಲ್ಲಿ ಅದಕ್ಕೆ ತಕ್ಕಂತೆ ಪೂರೈಕೆಯಾಗದಿರುವುದು ಸಮಸ್ಯೆಗೆ ಕಾರಣವಾಗಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕೂಡ ಬಿಯರ್ ಉತ್ಪಾದನೆ ಕುಸಿಯಲು ಕಾರಣವಾಗಿದೆ ಎನ್ನಲಾಗುತ್ತಿದೆ. ಇನ್ನು ಸಾರಿಗೆ ಸಮಸ್ಯೆ, ಚುನಾವಣೆ ಸಮಯದಲ್ಲಿ ಮಳಿಗೆಗಳಲ್ಲಿ ಹೆಚ್ಚುವರಿ ಮದ್ಯ, ಬಿಯರ್ ಸಂಗ್ರಹಣೆ ಮೇಲೆ ನಿರ್ಬಂಧ ಹೇರಿರುವುದು ಕೂಡ ಬಿಯರ್ ಪೂರೈಕೆ ಕುಸಿಯಲು ಕಾರಣವಾಗುತ್ತಿದೆ ಎನ್ನಲಾಗಿದೆ.