ಸೋಮವಾರಪೇಟೆ, ಮೇ ೮: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ರೂ. ೯ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಆಧುನಿಕ ಚಿತಾಗಾರವನ್ನು ಪ್ರಮುಖರು ಹಾಗೂ ಗ್ರಾಮದ ಮುಖಂಡರು ಲೋಕಾರ್ಪಣೆ ಮಾಡಿದರು.

ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿಯೇ ಪ್ರಥಮವಾಗಿ ನಿರ್ಮಾಣಗೊಂಡಿರುವ ಸಿಲಿಕಾನ್ ಚೇಂಬರ್ ಚಿತಾಗಾರವನ್ನು ಒಟ್ಟು ರೂ. ೯ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಮೂಲಕ ರೂ. ೭.೫೦ ಲಕ್ಷ ಹಾಗೂ ಸಿಲಿಕಾನ್ ಚೇಂಬರ್‌ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರೂ. ೧.೫೭ ಲಕ್ಷ ವಿನಿಯೋಗಿಸಲಾಗಿದ್ದು, ಸುಸಜ್ಜಿತ ಚಿತಾಗಾರವನ್ನು ಮುಂದಿನ ಉಪಯೋಗಕ್ಕೆ ಮುಕ್ತಗೊಳಿಸಲಾಯಿತು.

ಚಿತಾಗಾರವನ್ನು ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಮಂಜುನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ, ತಾಲೂಕು ಯೋಜನಾಧಿಕಾರಿ ರೋಹಿತ್, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಎಂ. ಜಯರಾಂ, ಮಾಜಿ ಅಧ್ಯಕ್ಷ ಹೆಚ್.ಡಿ. ಮೋಹನ್, ಗ್ರಾ.ಪಂ. ಸದಸ್ಯೆ ದಿವ್ಯ ಮಧುಕುಮಾರ್ ಸೇರಿದಂತೆ ಇತರರು ಲೋಕಾರ್ಪಣೆ ಮಾಡಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ, ಚಿತಾಗಾರವು ಶಾಶ್ವತ ಯೋಜನೆಯಾಗಿದ್ದು, ಎಲ್ಲಾ ಗ್ರಾಮಗಳಿಗೂ ಇದು ಅನಿವಾರ್ಯವಾಗಿದೆ. ಆಧುನಿಕ ಚಿತಾಗಾರಗಳು ಬಡವರು, ಭೂಹೀನರಿಗೆ ಹೆಚ್ಚು ಉಪಯೋಗವಾಗಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನ ಬಜೆಗುಂಡಿ, ಕೊಡಗರಹಳ್ಳಿ, ಕೂತಿ ಗ್ರಾಮಗಳಿಗೆ ಸಿಲಿಕಾನ್ ಚೇಂಬರ್ ಮಂಜೂರಾಗಿದ್ದು, ಇದರಲ್ಲಿ ಕೂತಿ ಗ್ರಾಮಸ್ಥರು ಹೆಚ್ಚಿನ ಶ್ರಮವಹಿಸಿ ನಿರೀಕ್ಷಿತ ಸಮಯದಲ್ಲಿ ಕೆಲಸ ಪೂರ್ಣಗೊಳಿಸಿದ್ದಾರೆ ಎಂದು ಶ್ಲಾಘಿಸಿದರು.

ರಾಜ್ಯದಲ್ಲಿ ಒಟ್ಟು ೬೭೮ ಚಿತಾಗಾರಗಳನ್ನು ಒದಗಿಸಲಾಗಿದ್ದು, ರೂ. ೯.೭೦ ಕೋಟಿ ವಿನಿಯೋಗಿಸಲಾಗಿದೆ. ಜಿಲ್ಲೆಯಲ್ಲಿ ಪ್ರವಾಹ ಸಂದರ್ಭ ಯೋಜನೆಯಿಂದ ರೂ. ೨೮ ಕೋಟಿ ನೆರವು ನೀಡಲಾಗಿದೆ. ಕೊಡಗಿನ ಅನೇಕ ಕೆರೆಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು ೭೩೬ ಕೆರೆಗಳನ್ನು ರೂ. ೫೬ ಕೋಟಿ ವೆಚ್ಚದಲ್ಲಿ ಹೂಳು ತೆಗೆದು ನೀರಿನ ಮೂಲವನ್ನು ಸಂರಕ್ಷಿಸುವ ಕಾರ್ಯ ಮಾಡಲಾಗಿದೆ ಎಂದರು.

ತಾಲೂಕು ಯೋಜನಾಧಿಕಾರಿ ರೋಹಿತ್ ಮಾತನಾಡಿ, ರುದ್ರಭೂಮಿಯಲ್ಲಿ ಕಟ್ಟಿಗೆ ಶೇಖರಿಸಿಡಲು ಹಾಗೂ ವಿಶ್ರಾಂತಿಗೆ ಶೆಡ್ ನಿರ್ಮಾಣಕ್ಕೆ ಯೋಜನೆಯ ಮೂಲಕ ರೂ. ೧ ಲಕ್ಷ ಅನುದಾನ ನೀಡಲು ಅವಕಾಶವಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಚೌಡ್ಲು ವಿಎಸ್‌ಎಸ್‌ಎನ್ ಅಧ್ಯಕ್ಷ ಕೆ.ಟಿ. ಪರಮೇಶ್, ಗ್ರಾಮಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಕೆ.ಟಿ. ಜೋಯಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಪೊನ್ನಪ್ಪ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಗ್ರಾ.ಪಂ. ಸದಸ್ಯ ನವೀನ್, ಯುವಕ ಸಂಘದ ಅಧ್ಯಕ್ಷ ಹೆಚ್.ಬಿ. ಉದಯ, ಪ್ರಮುಖರಾದ ವಿನೋದ್, ಯಾದವ್, ಯೋಜನೆಯ ಮೇಲ್ವಿಚಾರಕ ಲಕ್ಷö್ಮಣ್, ಸೇವಾ ಪ್ರತಿನಿಧಿ ವಿಜಯಕುಮಾರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.