ಗೋಣಿಕೊಪ್ಪಲು, ಮೇ ೮: ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಜನರಿಗೆ ಡೆಂಗ್ಯೂ ಜ್ವರ ಪತ್ತೆಯಾಗಿದೆ.

ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ನಾಗರಿಕರು ಮುಂದಾಗಬೇಕು, ಹಗಲಿನ ವೇಳೆ ಕಚ್ಚುವ ಸೊಳ್ಳೆಗಳಿಂದ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತದೆ ಈ ಬಗ್ಗೆ ನಾಗರಿಕರು ಎಚ್ಚರಿಕೆ ವಹಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ತಿಳಿಸಿದ್ದಾರೆ.

ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಕೆಲವು ಮಂದಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿ ಡಾ. ಯತಿರಾಜ್ ಅವರನ್ನು `ಶಕ್ತಿ' ಮಾಹಿತಿ ಬಯಸಿದಾಗ ಕಳೆದ ಜನವರಿ ತಿಂಗಳಿನಿAದ ಮೇ ತಿಂಗಳ ಮೊದಲ ವಾರದವರೆಗೂ ಎರಡು ತಾಲೂಕಿನಲ್ಲಿ ಇಲಾಖೆಯ ವತಿಯಿಂದ ಸರ್ವೆ ನಡೆಸಿದ ವೇಳೆ ಇಲ್ಲಿಯ ತನಕ ೨೨ ಪ್ರಕರಣಗಳು ಬೆಳಕಿಗೆ ಬಂದಿವೆ.

ಬೇಸಿಗೆಯಲ್ಲಿ ಬರುವ ಅಕಾಲಿಕ ಮಳೆ ಹಾಗೂ ಹವಾಮಾನ ಬದಲಾವಣೆಯಿಂದ ಹಲವರಲ್ಲಿ ಜ್ವರ ಕಾಣಿಸಿಕೊಂಡಿದೆ.

ಇAತವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರ ರಕ್ತವನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ ಬರುವ ವರದಿಯ ಆಧಾರದಲ್ಲಿ ಡೆಂಗ್ಯೂ ಜ್ವರ ಎಂದು ನಿರ್ಧಾರ ಮಾಡಲಾಗುತ್ತದೆ.

ಕೆಲವರಲ್ಲಿ ಬಿಳಿ ರಕ್ತ ಕಣಗಳ ಕೊರತೆಯಿಂದ ಡೆಂಗ್ಯೂ ಜ್ವರ ಬರುತ್ತದೆ. ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆ ಇಡುತ್ತವೆ. ಇವುಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವ ಮೂಲಕ ಸೊಳ್ಳೆಗಳ ನಿಯಂತ್ರಣ ಅಗತ್ಯ ಎಂದರು.

ಎರಡು ತಾಲೂಕಿನಲ್ಲಿ ಡೆಂಗ್ಯೂ ಜ್ವರಕ್ಕೆ ತುತ್ತಾದ ೨೨ ಮಂದಿಯೂ ಇದೀಗ ಆರೋಗ್ಯವಾಗಿದ್ದಾರೆ.

ಪ್ರತಿನಿತ್ಯ ಜ್ವರ ಸಂಬAಧ ಆಸ್ಪತ್ರೆಗೆ ಬರುವ ರೋಗಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ ಇದರಿಂದ ರೋಗ ಪತ್ತೆ ಹಚ್ಚಲಾಗುತ್ತಿದೆ.

ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲುವುದನ್ನು ತಡೆಗಟ್ಟುವುದು ಹಾಗೂ ಸೊಳ್ಳೆಗಳು ಉತ್ಪತ್ತಿ ಆಗದಂತೆ ಎಚ್ಚರಿಕೆ ವಹಿಸುವುದರಿಂದ ಇದನ್ನು ನಿಯಂತ್ರಣಕ್ಕೆ ತರಬಹುದಾಗಿದೆ.

ತಾಲೂಕಿನ ಪ್ರತಿ ಗ್ರಾಮದಲ್ಲಿ ಆಶಾ ಕಾರ್ಯಕತೆÀðಯರು ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಸೊಳ್ಳೆ ಕಚ್ಚಿಸಿಕೊಂಡ ವ್ಯಕ್ತಿಯೂ ತೀವ್ರ ತಲೆನೋವು, ಜ್ವರ ಹಾಗೂ ಮೈ-ಕೈ ನೋವಿನಿಂದ ಬಳಲುತ್ತಾರೆ. ಅಂತಹವರು ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಯತಿರಾಜ್ ತಿಳಿಸಿದ್ದಾರೆ.

- ಹೆಚ್.ಕೆ. ಜಗದೀಶ್