‘ಚಿನ್ನ ಅಥವಾ ಬಂಗಾರ’ ಎಂದರೆ ಯಾರಿಗೆ ಬೇಡ ಹೇಳಿ? ಪ್ರತಿ ಕುಟುಂಬದಲ್ಲಿ ಚಿನ್ನವನ್ನು ಆಭರಣಗಳ ಮೂಲಕ ಅಥವಾ ಚಿನ್ನದ ಗಟ್ಟಿ ಮೂಲಕ ಶೇಖರಿಸಿ ಇಡುವುದನ್ನು ನಾವುಗಳು ಇಂದು ಕಾಣಬಹುದು. ಅಂದರೆ ಆಭರಣಗಳನ್ನು ಧರಿಸಿ ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು, ಮದುಮಗಳಿಗೆ ತಮ್ಮ ಶಕ್ತಾö್ಯನುಸಾರದ ಲೆಕ್ಕದಲ್ಲಿ ಚಿನ್ನ ಖರೀದಿಸಿ ಆಭರಣ ಮಾಡಿ ತೊಡಿಸಿ ಸಂತೋಷಪಡುವುದು ಒಂದು ಕಡೆಯಾದರೆ, ಇನ್ನು ಕೆಲವರಿಗೆ ಚಿನ್ನ ಖರೀದಿ ಪ್ರತಿಷ್ಠೆಯ ವಿಚಾರವೂ ಹೌದು. ಬಂಗಾರವು ಪ್ರತಿ ಮನೆಯ ಒಂದು ಅವಿಭಾಜ್ಯ ಅಂಗ ಹಾಗೂ ಸಾಂಪ್ರದಾಯಿಕ ವಸ್ತುವಾಗಿ ಮಾರ್ಪಟ್ಟಿದೆ. ಒಟ್ಟಿನಲ್ಲಿ ತುಂಬು ಸಂಸಾರವನ್ನು ಸಂತೋಷಪಡಿಸಲು ಹಾಗೂ ಕಷ್ಟಕಾಲದಲ್ಲಿ ಆಪತ್ಬಾಂಧವನಾಗಿ ಸಹಾಯ ಮಾಡುವಲ್ಲಿ ಚಿನ್ನ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಭಾರತದ ನಾರಿಯರಲ್ಲಿ ಚಿನ್ನದ ಮೇಲೆ ವ್ಯಾಮೋಹ ಹೆಚ್ಚಾಗಿ ಇರುವುದನ್ನು ಕಾಣುತ್ತೇವೆ. ಇತ್ತೀಚಿನ ದಿನಗಳಲ್ಲಿ ಹೆಂಗಳೆಯರು ಇಷ್ಟಪಡುವ ದಿನ ಅಂದರೆ ಅದು "ಅಕ್ಷಯ ತೃತೀಯ" ಅಥವಾ "ಅಕ್ಷಯ ತದಿಗೆ" ದಿನ.

ಅಕ್ಷಯ ತೃತೀಯ ಹಿಂದೂ ಮತ್ತು ಜೈನ ಧರ್ಮೀಯರಿಗೆ ಮಂಗಳಕರವಾದ ಹಬ್ಬದ ದಿನವಾಗಿದ್ದು, ವೈಶಾಖ ಮಾಸದ ಶುಕ್ಲ ಪಕ್ಷ ಮೂರನೆಯ ದಿನದಂದು ಆಚರಿಸಲಾಗುತ್ತದೆ. ಆದರೆ ವರ್ಷ ವರ್ಷ ದಿನಾಂಕ ಬದಲಾಗುತ್ತಾ ಇರುತ್ತದೆ. ಅದೇ ರೀತಿ ಇಂದು (೧೦.೫.೨೦೨೪) ರಂದು ನಾಡಿನೆಲ್ಲಡೆ ಅಕ್ಷಯ ತೃತೀಯವನ್ನು ಆಚರಿಸುತ್ತಿದ್ದಾರೆ. ಈ ದಿನ ಖರೀದಿಸಿದ ಬಂಗಾರವು ಎಂದಿಗೂ ಅಕ್ಷಯವಾಗಿ ಉಳಿಯುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ.

ಪುರಾಣಗಳ ಪ್ರಕಾರ ದ್ವಾಪರಯುಗದಲ್ಲಿ ಪಾಂಡವರು ವನವಾಸದಲ್ಲಿ ಇದ್ದಂತಹ ಸಂದರ್ಭ, ಪಾಂಡವರು ಮತ್ತು ಅವರ ಪತ್ನಿ ದ್ರೌಪದಿ ಆಹಾರದ ಕೊರತೆಯಿಂದ ಬಳಲುತ್ತಿದ್ದರು. ಮಾತ್ರವಲ್ಲ, ತಮ್ಮಲ್ಲಿಗೆ ಭೇಟಿ ಕೊಟ್ಟ ಅತಿಥಿಗಳಿಗೆ ಸರಿಯಾದ ಭೋಜನವನ್ನು ಪೂರೈಸಲು ಕಷ್ಟವಾಗುತ್ತಿತ್ತು. ಒಮ್ಮೆ ಇಂತಹ ಪರಿಸ್ಥಿತಿಯಲ್ಲಿರುವ ಸಂದರ್ಭ ಭಗವಾನ್ ಶ್ರೀ ಕೃಷ್ಣನು ತಯಾರಿಸಿಟ್ಟ ಆಹಾರವು ಎಂದಿಗೂ ಕ್ಷಯವಾಗದಂತಹ ಪಾತ್ರೆಯೊಂದನ್ನು ದ್ರೌಪದಿಗೆ ನೀಡಿದನು. ಇದರ ಸಹಾಯದಿಂದ ಪಾಂಡವರಿಗೆ ತಮ್ಮಲ್ಲಿಗೆ ಬಂದ ಅತಿಥಿಗಳಿಗೆ ಬೇಕುಬೇಕಾದ ಆಹಾರ ಪದಾರ್ಥಗಳನ್ನು ಕ್ಷಣಾರ್ಧದಲ್ಲಿ ತಯಾರಿಸಲು ಸಹಕಾರಿಯಾಗುತ್ತಿತ್ತು. ಹೀಗೆ ಶ್ರೀ ಕೃಷ್ಣನು ದ್ರೌಪದಿಗೆ ಅಕ್ಷಯ ಪಾತ್ರೆಯನ್ನು ನೀಡಿದ್ದು ಇದೇ ದಿನವೆಂದು ಎನ್ನಲಾಗುತ್ತಿದೆ. ಇದೇ ರೀತಿ ಇನ್ನೂ ಹಲವು ಜೈನ ಹಾಗೂ ಹಿಂದೂ ಪುರಾಣಗಳಲ್ಲಿ ಹಲವು ಕಥೆಗಳಿವೆ.

ಹಲವು ಸ್ಥಳಗಳಲ್ಲಿ ಈ ದಿನವನ್ನು ಹಬ್ಬದಂತೆ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ. ಎಲ್ಲಾ ಪ್ರೀತಿಪಾತ್ರರ ಅದೃಷ್ಟ, ಸಮೃದ್ಧಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಪೂಜೆಗಳು ಮತ್ತು ಯಜ್ಞಗಳನ್ನು ನಡೆಸಲಾಗುತ್ತದೆ. ದಾನ ಮಾಡುವುದು ಸಹ ದಿನದ ಪ್ರಮುಖ ಭಾಗವಾಗಿದೆ ಮತ್ತು ಅಂತಹ ಆಹಾರ, ಬಟ್ಟೆ ಮತ್ತು ಇತರ ವಸ್ತುಗಳನ್ನು ಬಡ ಮತ್ತು ನಿರ್ಗತಿಕರಿಗೆ ವಿತರಿಸಲಾಗುತ್ತದೆ. ಚಿನ್ನದಂಗಡಿಯಲ್ಲಿ ಮಕ್ಕಳಿಗೆ ಕಿವಿ ಹಾಗೂ ಮೂಗು ಚುಚ್ಚಿ ಕಿವಿಯೋಲೆ, ಮೂಗುತಿಯನ್ನು ಹಾಕುತ್ತಾರೆ. ಅಲ್ಲದೇ ಈ ದಿನದಂದು ಲಕ್ಷ್ಮಿ ದೇವಿಯೊಂದಿಗೆ ಕುಬೇರನನ್ನು ಪೂಜಿಸುವ ಸಂಪ್ರದಾಯವೂ ಇದೆ. ಅಕ್ಷಯ ತೃತೀಯ ದಿನದಂದು ನಾವು ಯಾವುದೇ ಪುಣ್ಯ ಕಾರ್ಯ ಮಾಡಿದರೂ ಅದರಿಂದ ದೊರೆತ ಪುಣ್ಯ ಎಂದಿಗೂ ನಾಶವಾಗುವುದಿಲ್ಲ ಎನ್ನುವ ನಂಬಿಕೆಯಿದೆ. ಈ ಕಾರಣಕ್ಕಾಗಿ ಜನರು ಅಕ್ಷಯ ತೃತೀಯ ದಿನದಂದು ಲಕ್ಷ್ಮಿ ದೇವಿಯೊಂದಿಗೆ ಕುಬೇರ ದೇವನನ್ನೂ ಪೂಜಿಸುತ್ತಾರೆ. ಇದರಿಂದ ವ್ಯಕ್ತಿಯ ಜೀವನದಲ್ಲಿ ಎಂದಿಗೂ ಹಣ ಮತ್ತು ಸಂಪತ್ತಿಗೆ ಯಾವುದೇ ರೀತಿಯ ಕೊರತೆ ಎದುರಾಗುವುದಿಲ್ಲ ಎನ್ನುವ ಮಾತಿದೆ.

"ಅಕ್ಷಯ" ಎಂಬ ಪದವು "ಎಂದಿಗೂ ಕಡಿಮೆಯಾಗುವುದಿಲ್ಲ" ಎಂದರ್ಥ, ಮತ್ತು ಈ ದಿನದಂದು ಪ್ರಾರಂಭಿಸಿದ ಯಾವುದೇ ಹೊಸ ಯೋಜನೆ ಅಥವಾ ಉದ್ಯಮವು ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಹೊಸ ಉದ್ಯಮಗಳು, ಮದುವೆಗಳು, ಹೂಡಿಕೆಗಳು ಮತ್ತು ಚಿನ್ನ ಅಥವಾ ಇತರ ಅಮೂಲ್ಯ ವಸ್ತುಗಳನ್ನು ಖರೀದಿಸಲು ಇದು ಅತ್ಯಂತ ಮಂಗಳಕರವೆAದು ಪರಿಗಣಿಸಲಾಗಿದೆ. ಈ ಸುಸಂದರ್ಭದಲ್ಲಿ ಎಲ್ಲಾ ಕಡೆ ಜುವೆಲ್ಲರಿ ಮಳಿಗೆಗಳು ನಾನಾ ತರಹದ ಕೊಡುಗೆಗಳನ್ನು ನೀಡುವ ತಂತ್ರವನ್ನು ಬಳಸುವ ಮೂಲಕ ಆಭರಣಪ್ರಿಯರನ್ನು ತಮ್ಮತ್ತ ಸೆಳೆದು ಚಿನ್ನ ಖರೀದಿಸಲು ಪ್ರೇರೇಪಿಸುತ್ತಾರೆ. ಇತ್ತೀಚಿನ ಹಲವು ವರ್ಷಗಳಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರುತ್ತಿದ್ದರೂ ಚಿನ್ನದ ಅಂಗಡಿಯವರು ತಯಾರಿಸಿಟ್ಟ ವಿಧ ವಿಧದ ನಾನಾ ವಿನ್ಯಾಸಗಳ ಆಭರಣಗಳನ್ನು ನಗದು ಅಥವಾ ತಿಂಗಳ ಕಂತುಗಳ ಮೂಲಕ ಅಕ್ಷಯ ತೃತೀಯ ದಿನದಂದು ಖರೀದಿ ಮಾಡುತ್ತಿರುವುದು ದಿನದ ಮಹತ್ವವನ್ನು ಎತ್ತಿ ತೋರಿಸುತ್ತದೆ.

"ಅಕ್ಷಯವಾಗಲಿ ಸುವರ್ಣ ಸಂಭ್ರಮ ವ್ಯಥೆ ಸಂಕಟ ಯಾತನೆ ಕ್ಷಯವಾಗಲಿ ಸದಾ ಆನಂದ ನಿಮ್ಮದಾಗಲಿ" ವರ್ಷಪೂರ್ತಿ ಪ್ರತಿದಿನ ದಿನಾಚರಣೆ ಇರುವಂತೆ ಸುವರ್ಣ ಖರೀದಿಗೂ ಅಕ್ಷಯ ತೃತೀಯದಿನವಿದ್ದು ಪ್ರತಿ ಮನೆಗೂ ಕನಕಲಕ್ಷಿö್ಮ ಪ್ರವೇಶವಾಗುವ ಸುಯೋಗವನ್ನು ಈ ದಿನ ತರುತಿದೆ ಎಂದರೂ ಅತಿಶಯೋಕ್ತಿಯಲ್ಲ.

- ಈರಮಂಡ ಹರಿಣಿ ವಿಜಯ್, ಮೂರ್ನಾಡು. ಮೊ. ೯೭೪೦೯೭೦೮೪೦