ದೇವರ ದರ್ಶನ ಪಡೆದ ಭಕ್ತಾದಿಗಳು

ಐಗೂರು, ಮೇ ೯: ಐಗೂರಿನ ಶ್ರೀ ಆದಿ ಶಕ್ತಿ ಮಹಾ ತಾಯಿ ಹಾಗೂ ಪಾಷಾಣಮೂರ್ತಿ ಅಮ್ಮನವರ ದೇವಾಲಯದ ೪೮ನೇ ವರ್ಷದ ವಾರ್ಷಿಕ ಪೂಜೆಯು ಐದು ದಿನಗಳ ಕಾಲ ವಿವಿಧ ಬಗೆಯ ೯ ಕೋಲಗಳ ಜಾತ್ರೆಯ ಮುಖಾಂತರ ಸಂಪನ್ನ ಗೊಂಡಿತು. ಈಗಿರುವ ದೇವಾಲಯದ ಸ್ಥಳದಲ್ಲಿ ಬಹಳ ವರ್ಷಗಳ ಹಿಂದೆ ಸಾಂಪ್ರದಾಯಿಕ ಶೈಲಿಯ ದೇವಾಲಯವಾಗಲಿ, ಸುಸಜ್ಜಿತವಾದ ಅನ್ನ ಛತ್ರವಾಗಲಿ ಮತ್ತು ಭಕ್ತಾದಿಗಳಿಗೆ ಆಸೀನರಾಗಲು ಸ್ಥಳಾವಕಾಶವಾಗಲಿ ಇರಲಿಲ್ಲ. ಆದರೆ ಈಗ ಇವೆಲ್ಲವೂ ಭಕ್ತರ ಸಹಕಾರದಿಂದ ಈಡೇರಿದೆ.

ದೈವದರ್ಶಿಗಳಾದ ಆನಂದ ಪೂಜಾರಿ, ಪ್ರಧಾನ ಅರ್ಚಕರು ಹಾಗೂ ಕುಟುಂಬಸ್ಥರು ಮತ್ತು ಗ್ರಾಮಸ್ಥರ ಸಹಕಾರದಿಂದ ಪ್ರಾರಂಭವಾದ ೪೮ನೇ ವಾರ್ಷಿಕ ಪೂಜೆಯ ಈ ಜಾತ್ರೋತ್ಸವದಲ್ಲಿ ವಿವಿಧ ಬಗೆಯ ವೇಷಭೂಷಣಗಳ ದೇವರ ನರ್ತನವು ಮೆರಗು ನೀಡಿದವು. ಸುಳ್ಯದ ಭೊಳಿಯ ಮಜಲಿನ ದೈವನರ್ಥಕರಾದ ಜಯರಾಮ ಮತ್ತು ಸಹಪಾಠಿಗಳು ಪ್ರಾರಂಭದಿAದ ಉತ್ಸವದ ಕೊನೆಯವರೆಗೂ ಭಾಗವಹಿಸಿದರು. ಇಡೀ ತುಳುನಾಡ ದೈವದ ಕಲೆಗಳನ್ನು ನೆರೆದಿದ್ದ ಭಕ್ತ ಸಮೂಹ ವೀಕ್ಷಿಸಿತು ಸುಳ್ಯದ ವಾದ್ಯ ವೃಂದವು ಉತ್ಸವಕ್ಕೆ ಮೆರಗನ್ನು ನೀಡಿತು. ಐಗೂರು ವ್ಯಾಪ್ತಿಯ ಗ್ರಾಮಗಳಾದ ಹೊಸತೋಟ, ಕಾಜೂರು, ಎಡವಾರೆ, ಮಾದಾಪುರ, ಸುಂಟಿಕೊಪ್ಪ ಮತ್ತು ಸೋಮವಾರಪೇಟೆ ಭಾಗಗಳಿಂದ ಐದು ದಿನಗಳ ಕಾಲ ಭಕ್ತ ಜನಸಾಗರವೇ ಹರಿದು ಬಂದಿತ್ತು. ಪೂಜೋತ್ಸವದ ಪ್ರಾರಂಭ ದಿನದ ತಾ. ೨ ರಂದು ಗಣಪತಿ ಹೋಮ ಮತ್ತು ಶುದ್ದಿಪುಣ್ಯ ಕಾರ್ಯಕ್ರಮ ನಡೆಯಿತು. ತಾ. ೩ ರಂದು ಕಲಶದ ಮೆರವಣಿಗೆ ನಡೆಯಿತು. ಈ ಸಂದರ್ಭ ಆದಿಶಕ್ತಿ, ಮಹಾತಾಯಿ ಮತ್ತು ಅಣ್ಣಪ್ಪ ಸ್ವಾಮಿಯ ದರ್ಶನವು ಜಾತ್ರೆಗೆ ಕಳೆಯನ್ನು ನೀಡಿತು.

ತಾ. ೪ ರಂದು ರಾತ್ರಿಯ ವೇಳೆ ಕೋಲಗಳು ಆರಂಭವಾಗಿ ಭಂಡಾರದ ಆಗಮನದ ಪೂಜೆಯು ನಡೆದು ನೇಮಗರಡಿಯನ್ನು ಇಳಿಸಲಾಗಿ, ಪೂಜೆಗೆ ಆಗಮಿಸಿದ ಭಕ್ತರಲ್ಲಿ ಹಿರಿಯರನ್ನು ಗುರುತಿಸಿ ಅವರಿಗೆ ವಸ್ತçದಾನವನ್ನು ಮಾಡಲಾಯಿತು. ನಂತರ ಪಾಷಾಣಮೂರ್ತಿ ಮತ್ತು ಕಲ್ಕುಡ ದೈವಗಳು ಭಕ್ತರನ್ನು ಆಶೀರ್ವದಿಸಿದವು. ತಾ. ೫ ರಂದು ಬೆಳಗಿನ ಜಾವ ಮಂತ್ರವಾದಿ ಗುಳಿಗ ದೈವದ ಕೋಲ, ಕುಪ್ಪೆ ಪಂಜುರ್ಲಿ ದೈವದ ಕೋಲ, ಕೊರತಿ ರಕ್ತೇಶ್ವರಿ ಕೋಲ, ಧರ್ಮ ದೈವದ ಕೋಲ ಮತ್ತು ಕೊರಗಜ್ಜ ದೈವದ ಕೋಲಗಳು ನಡೆದು ಭಂಡಾರದ ನಿರ್ಗಮನವಾಯಿತು. ದೈವ ಕೋಲದ ಕೊನೆಯ ದಿನ ತಾ. ೭ ರಂದು ಮಂಗಳವಾರ ದೈವಗಳಿಗೆ ಬೇಟೆ ಕೊಡುವ ಸಲುವಾಗಿ ಭಕ್ತಾದಿಗಳು ಕುರಿ ಹಾಗೂ ಕೋಳಿಯನ್ನು ಹರಕೆಯ ರೂಪದಲ್ಲಿ ಸಲ್ಲಿಸಿದರು. ಪೂಜೆಗೆ ಮೂರು ದಿನ ಮೊದಲೇ ಅಕ್ಕಿ, ತರಕಾರಿ, ಮತ್ತು ದವಸ ಧಾನ್ಯಗಳನ್ನು ಹರಕೆ ರೂಪದಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಸಲ್ಲಿಸಿದರು. ಐದು ದಿನಗಳ ಕಾಲ ಪೂಜೋತ್ಸವದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. - ಸುಕುಮಾರ ಎಂ.ಎ.