ಶನಿವಾರಸಂತೆ, ಮೇ ೯: ಪಟ್ಟಣ ಹಾಗೂ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದು ಕಣ್ಣಾಮುಚ್ಚಾಲೆಯಾಡುತ್ತಿದೆ. ಈ ಭಾಗದಲ್ಲಿ ಈವರೆಗೆ ಅರ್ಧ ಇಂಚಿಗೂ ಕಡಿಮೆ ಮಳೆಯಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಬುಧವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು ಸಂಜೆ ೫ ರ ನಂತರ ಗುಡುಗಿನ ಶಬ್ದ ಕೇಳಿಸಿತೇ ಹೊರತು ಮಳೆ ಸುರಿಯಲಿಲ್ಲ.

ಕಳೆದ ಒಂದುವಾರದಿAದ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಧಗೆಯ ಅನುಭವ, ಸಂಜೆಯ ಹೊತ್ತಿಗೆ ದಟ್ಟವಾಗಿ ಮೋಡ ಕವಿದು ಗುಡುಗು ಮಿಂಚಿನ ಆರ್ಭಟ. ಇನ್ನೇನು ಧಾರಾಕಾರ ಮಳೆ ಸುರಿಯಿತೆಂಬ ನಿರೀಕ್ಷೆ, ಕೆಲ ಕ್ಷಣದಲ್ಲೇ ಹುಸಿಯಾಗಿ ಹೋಗುತ್ತದೆ. ಒಂದೈದು ಹತ್ತು ನಿಮಿಷ ತುಂತುರು ಮಳೆಯ ಸಿಂಚನವಾಗುತ್ತಿದೆ.

ಕೆಲವು ಭಾಗಗಳ ಕಾಫಿ ತೋಟಗಳಲ್ಲಿ ಕಾಫಿ ಗಿಡಗಳು ಹಾಗೂ ಕಾಳು ಮೆಣಸಿನ ಬಳ್ಳಿಗಳು ಸಂಪೂರ್ಣ ಒಣಗಿ ಹೋಗಿದ್ದು, ಮತ್ತೆ ಕೆಲವೆಡೆ ತೋಟಗಳಲ್ಲಿ ಬಳ್ಳಿಗಳು ಒಣಗಲಾರಂಭಿಸಿವೆ. ಕೊಳವೆ ಬಾವಿ ಇದ್ದು ನೀರಿನ ಅನುಕೂಲ ಇರುವ ಬೆಳೆಗಾರರು ನೀರು ಹಾಯಿಸಿ ಬೆಳೆ ಕಾಪಾಡಿಕೊಳ್ಳಲು ಹಗಲು-ರಾತ್ರಿಯೆನ್ನದೆ ಶ್ರಮಿಸುತ್ತಿದ್ದಾರೆ. ನೀರಿನ ಅನುಕೂಲ ಇಲ್ಲದ ಕೃಷಿಕರು ದಿನವೂ ಆಕಾಶದತ್ತ ಮೊಗಮಾಡಿ ನಿಟ್ಟುಸಿರು ಹೊರಚೆಲ್ಲುತ್ತಿದ್ದಾರೆ. ಬಿಸಿಲ ಬೇಗೆ ಅಧಿಕಗೊಳ್ಳುತ್ತಿದ್ದು, ಬರಗಾಲದ ಛಾಯೆ ಆವರಿಸುತ್ತಿದೆ. ಸರ್ಕಾರ ಕೂಡಲೇ ಎಚ್ಚೆತ್ತು ಬರ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ಹಾಗೂ ನಿಡ್ತ ಮತ್ತು ಹಂಡ್ಲಿ ಗ್ರಾಮ ಪಂಚಾಯಿತಿಗಳ ಬಹುತೇಕ ಕೃಷಿಕರು ಅಳಲು ತೋಡಿಕೊಂಡಿದ್ದಾರೆ.