ಪ್ರತ್ಯಕ್ಷ ವರದಿ : ಸುಧೀರ್ ಹೊದ್ದೆಟ್ಟಿ
ಕರಿಕೆ, ಮೇ ೯: ಕರ್ನಾಟಕ ರಾಜ್ಯ ಮಾತ್ರವಲ್ಲ ದಕ್ಷಿಣ ಭಾರತದ ರಾಜ್ಯಗಳಿಗೆ ನೀರುಣಿಸುವ ರಾಜ್ಯದ ಜೀವನದಿ, ಕಾವೇರಿ ತವರು ತಲಕಾವೇರಿಯ ತಪ್ಪಲಿಗೇ ಮರಗಳ್ಳರು ಭಾರೀ ಕೊಡಲಿಯೇಟು ನೀಡಿದ್ದಾರೆ. ಒಂದೆರಡು ದಿನಗಳ ಹಿಂದೆ ತಲಕಾವೇರಿ ರಕ್ಷಿತಾರಣ್ಯದಲ್ಲಿ ಬೆಳಕಿಗೆ ಬಂದ ಮರಹನನ ಪ್ರಕರಣ ‘ಶಕ್ತಿ’ಯಲ್ಲಿ ಪ್ರಕಟಗೊಂಡಿತ್ತು. ಇದೀಗ ಈ ಮರಹನನ ಪ್ರಕರಣ ಸಹಿತವಾಗಿ ಅರಣ್ಯಕ್ಕೆ ಬೆಂಕಿ ಇಟ್ಟು ಪರಿಸರದ ಅಸಮತೋಲನಕ್ಕೆ ಎಡೆಯಾಗಿರುವ ಈ ದುಷ್ಕೃತ್ಯದ ಇನ್ನಷ್ಟು ವಿವರಗಳು ಬೆಳಕಿಗೆ ಬಂದಿವೆ. ಸಾವಿರಾರು ಮರಗಳ ಮಾರಣ ಹೋಮ ಜಿಲ್ಲೆಯಲ್ಲಿ ನಡೆದ ದೊಡ್ಡ ಅರಣ್ಯ ಲೂಟಿಯ ಸಾಲಿಗೆ ಸೇರುತ್ತಿದೆ. ಕೆಲವು ದಿನಗಳ ಹಿಂದಷ್ಟೆ ತಲಕಾವೇರಿ ವನ್ಯಧಾಮದ ಅಂಚಿನ ಮೀಸಲು ಅರಣ್ಯ ಪ್ರದೇಶದಲ್ಲಿ ಬೆಳಕಿಗೆ ಬಂದ ಮರಗಳ ಹನನ ಪ್ರಕರಣಕ್ಕೆ ಹೊಸ ತಿರುವು ದೊರೆತ್ತಿದ್ದು, ಕೊಡಗು ಏಕೀಕರಣ ರಂಗದ ಪ್ರಮುಖರೊಂದಿಗೆ ಸ್ಥಳಕ್ಕೆ ತೆರಳಿದ ‘ಶಕ್ತಿ’ಗೆ, ಅನನ್ಯ ಹಸಿರು ಸಂಪತ್ತು ಲೂಟಿಯಾಗಿರುವ ದಿವ್ಯದರ್ಶನವಾಗಿದೆ. ದಾಖಲಾದ ಎಫ್.ಐ.ಆರ್.ಗೂ, ನೈಜ ಚಿತ್ರಣಕ್ಕೂ ಅಜಗಜಾಂತರ ವ್ಯತ್ಯಾಸಗಳು ಕಂಡುಬರುತ್ತಿವೆ. ಇದರ ಹಿಂದಿರುವ ಕಾಣದ ಕೈಗಳ ಬಗ್ಗೆಯೂ ಅನುಮಾನ ಸೃಷ್ಟಿಯಾಗಿದೆ. ಮರಗಳ ನಾಶಕ್ಕೆ ಅರಣ್ಯ ಇಲಾಖೆಯ ಬಾಹ್ಯ ಬೆಂಬಲವೂ ಇತ್ತೇ? ಎಂಬ ಸಂಶಯಕ್ಕೆ ಪ್ರಕರಣ ಎಡೆಮಾಡಿಕೊಟ್ಟಿದೆ. ವೀರಾಜಪೇಟೆ ಅರಣ್ಯ ವಲಯದ, ಮುಂಡ್ರೋಟ್ ವಲಯದ ಪದಿನಾಲ್ಕುನಾಡು ಮೀಸಲು ಅರಣ್ಯ ವ್ಯಾಪ್ತಿಯ ಮುರುಕುಮೊಟ್ಟೆ ಉಪ ವಲಯದ ಮುಂದಾರಮಲೆ ರಕ್ಷಿತಾರಣ್ಯದಲ್ಲಿ ಈ ಘಟನೆ ಸಂಭವಿಸಿದ್ದು, ಸುಮಾರು ಐದು ಎಕರೆಗೂ ಅಧಿಕ ಜಾಗದಲ್ಲಿ ಮರಕಡಿತಲೆ ಆಗಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ.
ಏನಿದು ಘಟನೆ?
ಏ. ೩೦ ರಂದು ಮುಂದಾರಮಲೆ ಸಂರಕ್ಷಿತ ಅರಣ್ಯದಲ್ಲಿ ವಿವಿಧ ರೀತಿಯ ಕಾಡುಜಾತಿಯ ಮರಗಳನ್ನು ಕಡಿದು ಸಾಗಾಟ ಮಾಡದೆ ಅಲ್ಲೇ ಸಂಗ್ರಹಿಸಿಟ್ಟಿದ್ದ ಕುರಿತ ವಿಚಾರ ಬೆಳಕಿಗೆ ಬಂದಿತ್ತು. ಈ ಸಂಬAಧ ಅರಣ್ಯ ಇಲಾಖೆ ಕಾಸರಗೋಡು ಮೂಲದ ಸನ್ನಿ ಮಲೆಬಾರಿ, ಕಣ್ಣನೂರು ಜಿಲ್ಲೆಯ ಅಬ್ರಹಾಂ ಎಂಬವರು ಸೇರಿದಂತೆ ಮೈಸೂರು ಫಾರ್ಮಸ್ ಎಂಟರ್‌ಪ್ರೆöÊಸಸ್ ಸಂಸ್ಥೆ ವಿರುದ್ಧ ಮೀಸಲು ಅರಣ್ಯನಾಶ ಪ್ರಕರಣದಂತೆ ಅರಣ್ಯ ಅಧಿನಿಯಮ ೧೯೬೮ ಅಧಿನಿಯಮ ಸೆಕ್ಷನ್ ೨೪,೬೨,೩೦ ಮತ್ತು ಕರ್ನಾಟಕ ಅರಣ್ಯ ನಿಯಮಗಳು ೧೯೬೯ರ ೧೪೪ ರಿಂದ ೧೬೫ರ ಕಲಂ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ಅರಣ್ಯ ಪ್ರದೇಶದ ಪಕ್ಕದ ೨೫೦ ಎಕರೆ ಖಾಸಗಿ ಸ್ವತ್ತು ಮೈಸೂರು ಫಾರ್ಮಸ್ ಎಂಟರ್‌ಪ್ರೆöÊಸಸ್ ಸಂಸ್ಥೆಗೆ ಸೇರಿದ್ದು ಎಂದು ಆರ್.ಟಿ.ಸಿ.ಯಲ್ಲಿ ನಮೂದಾಗಿದ್ದು, ಸನ್ನಿ ಮಲೆಬಾರಿ ಎಂಬವರಿಗೆ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿತ್ತು. ಜೊತೆಗೆ ಎಫ್.ಐ.ಆರ್.ನಲ್ಲಿ ಉಲ್ಲೇಖವಾಗಿರುವ ಅಬ್ರಾಹಂ ಕೆಲ ವರ್ಷದ ಹಿಂದೆ ನಿಧನರಾಗಿದ್ದು, ಜಾಗದ ದಾಖಲೆಗಳ ಪ್ರಕಾರ ಮಾಲೀಕತ್ವದಲ್ಲಿ ಅವರು ಕೂಡ ಒಬ್ಬರು ಎಂಬ ಅಂಶವಿರುವ ಕಾರಣ ಅವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಘಟನೆ ಅರಣ್ಯ ಇಲಾಖೆಗೆ ತಿಳಿದ ನಂತರ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಘಟನೆ ನಡೆದ ಪಕ್ಕದ ಜಾಗದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿರುವುದು ತಿಳಿದುಬಂದಿದೆ.
ಚಿತ್ರಣವೇ ಬೇರೆ!
ಎಫ್.ಐ.ಆರ್.ನಲ್ಲಿರುವ ವಿಚಾರ, ಅರಣ್ಯ ಇಲಾಖೆ ನೀಡಿದ ಫೋಟೋ, ಅಧಿಕಾರಿಗಳ ಹೇಳಿಕೆಗೂ ನೈಜ ಚಿತ್ರಣಕ್ಕೂ ದೊಡ್ಡಮಟ್ಟದ ವ್ಯತ್ಯಾಸ ಪ್ರತ್ಯಕ್ಷವಾಗಿ ತೆರಳಿದ ತಂಡಕ್ಕೆ ಕಂಡುಬAತು. ಮರಕಡಿತಲೆ ವಿಚಾರದಲ್ಲಿ ಈ ಮುನ್ನ ಇದೊಂದು ಚಿಕ್ಕ ಪ್ರಕರಣ. ದೊಡ್ಡಮಟ್ಟದ ಮರಗಳ ನಾಶವಾಗಿರುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಕೊಡಗು ಏಕೀಕರಣ ರಂಗದ ಸದಸ್ಯರಿಗೆ ಹೇಳುತ್ತಿದ್ದರು. ಅಲ್ಲದೆ, ಬೆಂಕಿ ಹಚ್ಚಿದ ವಿಚಾರವೇ ಹೊರಬಂದಿರಲಿಲ್ಲ.