ಮಡಿಕೇರಿ, ಮೇ ೯: ಬಾಲಕಿಯನ್ನು ವ್ಯಕ್ತಿಯೋರ್ವ ಬರ್ಬರವಾಗಿ ಹತ್ಯೆಗೈದು ರುಂಡ-ಮುAಡ ಬೇರ್ಪಡಿಸಿ ಪೈಶಾಚಿಕ ಕೃತ್ಯವೆಸಗಿದ ಘಟನೆ ಸೂರ್ಲಬ್ಬಿ ಬಳಿಯ ಕುಂಬಾರಗಡಿಗೆಯಲ್ಲಿ ನಡೆದಿದೆ.

ಹಮ್ಮಿಯಾಲದ ಓಂಕಾರಪ್ಪ (ಪಾಪು) ಕೊಲೆ ಮಾಡಿದ ಆರೋಪಿ ಎಂದು ತಿಳಿದು ಬಂದಿದ್ದು, ಈತನ ಕೃತ್ಯಕ್ಕೆ ಬಲಿಯಾದ ಬಾಲಕಿ ಸೂರ್ಲಬ್ಬಿ ಸಮೀಪದ ಕುಂಬಾರಗಡಿಗೆ ಗ್ರಾಮದ ಸುಬ್ರಮಣಿ-ಮುತ್ತಕ್ಕಿ ದಂಪತಿಯ ಪುತ್ರಿ ಯು. ಎಸ್. ಮೀನಾ.

ಮೀನಾ ಮನೆಯ ಪಕ್ಕದ ಜಾಗಕ್ಕೆ ಬಾಲಕಿಯನ್ನು ಎಳೆದೊಯ್ದ ಓಂಕಾರಪ್ಪ ಕತ್ತಿ ಯಿಂದ ತಲೆಯನ್ನು ಕಡಿದು, ಬಳಿಕ ರುಂಡದ ಜೊತೆಗೆ ಪರಾರಿಯಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ಈ ಸಂದರ್ಭ ಮೀನಾ ಪೋಷಕರಿಗೂ ಗಾಯಗಳಾಗಿವೆ. ಸೋಮವಾರ ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಯ ಹಿಂದಿನ ಕಾರಣ ತಿಳಿದು ಬರಬೇಕಾಗಿದೆ.

ಪಾಸ್ ಆಗಿದ್ದ ಖುಷಿಯಲ್ಲಿದ್ದ ಮೀನಾ

ಇಂದಷ್ಟೆ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿನ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಗೆ ಶೇ.೧೦೦ ಫಲಿತಾಂಶ ಲಭಿಸಿದೆ. ೨೦೨೩-೨೪ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಯಲ್ಲಿ ಕಲಿಯುತ್ತಿದ್ದ ಏಕೈಕ ವಿದ್ಯಾರ್ಥಿನಿಯಾಗಿದ್ದ ಯು.ಎಸ್. ಮೀನಾ ತೇರ್ಗಡೆ ಹೊಂದಿದ ಪರಿಣಾಮ ಶಾಲೆಗೆ ಶೇ.೧೦೦ ಫಲಿತಾಂಶ ಪಡೆದ ಶಾಲೆಗಳ ಪಟ್ಟಿಯಲ್ಲಿ ಸೂರ್ಲಬ್ಬಿ ಶಾಲೆ ಸೇರ್ಪಡೆಗೊಂಡಿದೆ. ಮುಟ್ಲು ಗ್ರಾಮದಿಂದ ಪ್ರತಿನಿತ್ಯ ಶಾಲೆಗೆ ಆಗಮಿಸಿ ಅಭ್ಯಸಿಸಿದ ಮೀನಾ, ಅಂತಿಮವಾಗಿ ತೇರ್ಗಡೆಯಾಗುವ ಮೂಲಕ ಗ್ರಾಮಸ್ಥರ ಪ್ರಶಂಸೆಗೆ ಪಾತ್ರಳಾಗಿದ್ದಳು. ಅಷ್ಟೇ ಅಲ್ಲದೆ ಶಿಕ್ಷಕರ ಅಭಿಮಾನಕ್ಕೂ ಕಾರಣಳಾಗಿದ್ದಳು. ಪಾಸ್ ಆದ ಖುಷಿಯಲ್ಲಿದ್ದ ಈಕೆ ಅಮಾನವೀಯವಾಗಿ ಹತ್ಯೆಯಾಗಿ ಕೊನೆಯುಸಿರೆಳೆದಿದ್ದಾಳೆ.