ಮಡಿಕೇರಿ, ಮೇ ೧೦: ಬಾಲಕಿಯನ್ನು ಹತ್ಯೆ ಮಾಡಿದ ಆರೋಪಿ ಪ್ರಕಾಶ್‌ನನ್ನು ಪತ್ತೆ ಹಚ್ಚಿ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದರು.

ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಜಿಲ್ಲಾಸ್ಪತ್ರೆಗೆ ಆಗಮಿಸಿ ಮೃತ ಬಾಲಕಿಯ ತಂದೆ - ತಾಯಿಯ ಬಗ್ಗೆ ವಿಚಾರಿಸಿ, ಮಾಧ್ಯಮದವರೊಂದಿಗೆ ಮಾತನಾಡಿದರು. ನಿನ್ನೆ ಸಂಜೆ ೫.೩೦ರ ವೇಳೆಗೆ ಘಟನೆ ನಡೆದಿದ್ದು, ವಿಷಯ ತಿಳಿದ ತಕ್ಷಣ ಅಧಿಕಾರಿಗಳು, ಸಿಬ್ಬಂದಿಗಳೊAದಿಗೆ ಭೇಟಿ ನೀಡಿದ್ದೇನೆ. ಇಂದು ಕೂಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆತನ ಜೊತೆ ಇನ್ನಿಬ್ಬರು ವ್ಯಕ್ತಿಗಳಿದ್ದು, ವಾಹನದಲ್ಲಿ ಬಂದಿರುವುದಾಗಿ ತಿಳಿದುಬಂದಿದೆ. ಅವರುಗಳನ್ನು ಹಾಗೂ ವಾಹನ ಪತ್ತೆ ಹಚ್ಚಲಾಗುವುದು. ಆರೋಪಿ ಕ್ರೂರವಾಗಿ ಹತ್ಯೆ ಮಾಡಿರುವುದರಿಂದ ಹುಡುಕಾಟಕ್ಕಾಗಿ ವಿಶೇಷ ಪಡೆಯನ್ನು ನಿಯೋಜಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಆರೋಪಿಯನ್ನು ಬಿಡುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.

ಬಾಲಕಿಯ ತಂದೆ - ತಾಯಿ ಮೇಲೆಯೂ ಹಲ್ಲೆ ಮಾಡಲಾಗಿದ್ದು, ತಾಯಿ ಜಾನಕಿ ಕೈಗೆ ಆಳವಾದ ಗಾಯಗಳಾಗಿರುವುದರಿಂದ ಜಿಲ್ಲಾಧಿಕಾರಿಗಳ ಮುಖೇನ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ. ಮೃತಳ ಮನೆ ಹಾಗೂ ಆಸ್ಪತ್ರೆಯಲ್ಲಿ ಕೂಡ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಆರೋಪಿ ವಿರುದ್ಧ ಕೊಲೆ ಹಾಗೂ ಪೋಕ್ಸೊ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿಸಿದರು.