ಮಡಿಕೇರಿ, ಮೇ ೧೧: ಉತ್ತಮ ಸಮಾಜ ನಿರ್ಮಾಣದ ಶಕ್ತಿ ಮಾಧ್ಯಮಗಳಿಗಿವೆ. ಮುಖ್ಯವಾಗಿ ಯುವಜನರಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾಭವನದಲ್ಲಿ ಹಮ್ಮಿಕೊಂಡ ಪ.ಗೋ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆ.ಎಂ. ಇಸ್ಮಾಯಿಲ್ ಕಂಡಕರೆಯವರಿಗೆ ಪ.ಗೋ. ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

ಮಾಧ್ಯಮಗಳು ಪರಂಪರೆಯ ಕೊಂಡಿಯಾಗಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿವೆ. ಮಂಗಳೂರು ವಿಶ್ವ ವಿದ್ಯಾನಿಲಯದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿವೆ. ಯುವ ಜನರಲ್ಲಿ ಕಲಿಕೆಯ ಬಗ್ಗೆ ಇರುವ ನಿರಾಸಕ್ತಿಯನ್ನು ದೂರ ಮಾಡಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಪಿ.ಎಲ್. ಧರ್ಮ ಹೇಳಿದರು. ಪ.ಗೋ. ಪ್ರಶಸ್ತಿ ವಿಜೇತ ವಾರ್ತಾಭಾರತಿ ಪತ್ರಿಕೆಯ ವಿಶೇಷ ವರದಿಗಾರ ಇಸ್ಮಾಯಿಲ್ ಕಂಡಕರೆ ಮಾತನಾಡಿ, ಪತ್ರಿಕೆಗಳು ಗ್ರಾಮೀಣ ಪ್ರದೇಶಗಳ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ ಎಂದರು. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ನ ಅಧ್ಯಕ್ಷ ರಾಮಕೃಷ್ಣ ಆರ್., ಹರ್ಷ ಮೊದಲಾದವರು ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಪ್ರೆಸ್‌ಕ್ಲಬ್ ಉಪಾಧ್ಯಕ್ಷ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.