ಕೂಡಿಗೆ, ಮೇ ೧೧: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿವೃತ್ತ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿಗೆ ವಿಶೇಷ ಯೋಜನೆ ಜಾರಿಗೆ ತರಬೇಕು ಎಂದು ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ ಆಗ್ರಹಿಸಿದರು.
ಇಲ್ಲಿನ ಮಹಾಲಕ್ಷಿö್ಮ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನಿವೃತ್ತ ಸರ್ಕಾರಿ ನೌಕರರ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘ ಸ್ಥಾಪನೆಯಾಗಿ ಹತ್ತು ವರ್ಷಗಳಾಗಿದ್ದು, ಸಂಘ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಪ್ರಬುದ್ಧವಾಗಿ ಬೆಳೆವಣಿಗೆ ಹೊಂದುತ್ತಿದೆ ಎಂದರು. ಸಂಘವು ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ಕ್ರಿಯಾಶೀಲವಾಗಿದೆ. ಎಲ್ಲಾ ಸದಸ್ಯರು ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಮಾಜಕ್ಕೆ ಹಾಗೂ ಯುವಜನತೆಗೆ ಸೂಕ್ತ ಮಾರ್ಗದರ್ಶನ ನೀಡುವುದರ ಜೊತೆಗೆ ತಮ್ಮ ಅನುಭವಗಳನ್ನು ಸಮಾಜದ ಅಭಿವೃದ್ಧಿಗಾಗಿ ಬಳಸುತ್ತಿರುವುದರಿಂದ ಜನರ ಮೆಚ್ಚುಗೆಗೂ ಪಾತ್ರವಾಗಿದೆ. ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ ಕಚೇರಿ ಅವಶ್ಯಕತೆ ಇದ್ದು, ಇದಕ್ಕಾಗಿ ಜಾಗ ಮಂಜೂರಾತಿಗಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಸAಘದ ಕಾರ್ಯದರ್ಶಿ ರಾಮಯ್ಯ ಮಾತನಾಡಿ, ಸಂಘದ ಎಲ್ಲಾ ಚಟುವಟಿಕೆಗಳು ಪಾರದರ್ಶಕ ವಾಗಿದ್ದು, ಪದಾಧಿಕಾರಿಗಳು ಪ್ರಾಮಾಣಿಕವಾಗಿ ಹಾಗೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಸಂಘದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದರು.
ಸಭೆಯಲ್ಲಿ ೨೦೨೩-೨೪ನೇ ಸಾಲಿನ ಮಹಾಸಭೆ ನಡಾವಳಿ ಮಂಡಿಸ ಲಾಯಿತು. ೨೦೨೪-೨೫ನೇ ಸಾಲಿನ ಮುಂಗಡ ಕ್ರಿಯಾಯೋಜನೆಗೆ ಅನುಮೋದನೆ ಪಡೆದು ಕೊಳ್ಳಲಾಯಿತು. ಸದಸ್ಯರಿಗೆ ಗುಂಪು ವಿಮೆ ಹಾಗೂ ವೈಯಕ್ತಿಕ ಅಪಘಾತ ವಿಮೆ ಮಾಡಿಸುವ ಕುರಿತು ಚರ್ಚೆ ನಡೆಯಿತು. ಸಂಘದ ಕಚೇರಿಯಲ್ಲಿ ಗ್ರಂಥಾಲಯ ಸ್ಥಾಪನೆ ಹಾಗೂ ಸದಸ್ಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲು ತೀರ್ಮಾನಿಸ ಲಾಯಿತು. ಸಂಘ ಬೆಳವಣಿಗೆ ಕುರಿತು ಚರ್ಚೆ ನಡೆಯಿತು.
ಸಂಘದ ಉಪಾಧ್ಯಕ್ಷ ಬಿ.ಸಿ. ರಾಜು, ಖಜಾಂಜಿ ಲಿಂಗರಾಜು, ಬುದ್ಧ ಸೊಸೈಟಿ ಆಫ್ ಇಂಡಿಯಾ ಕೊಡಗು ಶಾಖೆಯ ಅಧ್ಯಕ್ಷ ಶಿವಪ್ಪ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸಿದ್ದಪ್ಪ, ಕಾರ್ಯದರ್ಶಿ ರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಮೃತಪಟ್ಟ ಸಂಘದ ಸದಸ್ಯರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.