ಮಡಿಕೇರಿ, ಮೇ ೧೦: ‘ಮನೆಗೆ ನುಗ್ಗಿ ಜಗಳವಾಡುತ್ತಲೇ ಮಗಳನ್ನು ಮನೆಯಿಂದ ಎಳೆದುಕೊಂಡು ಹೋಗಿ ಕಡಿದು ಕೊಂದು ಹಾಕಿದ..’
ಹೀಗೆಂದು ನಿನ್ನೆ ಸೂರ್ಲಬ್ಬಿ ಬಳಿಯ ಕುಂಬಾರಗಡಿಗೆಯಲ್ಲಿ ನಡೆದ ವಿದ್ಯಾರ್ಥಿನಿ ಮೀನಾಳ ಭೀಕರ ಹತ್ಯೆ ಘಟನೆಯನ್ನು ಆಕೆಯ ತಂದೆ ಸುಬ್ರಮಣಿ ತೆರೆದಿಟ್ಟರು. ಮಗಳು ಮೀನಾಳನ್ನು ಪ್ರೀತಿಸುತ್ತಿದ್ದ ಪ್ರಕಾಶ್ ಎಂಬಾತನಿಗೆ ಆಕೆಯನ್ನು ಮದುವೆ ಮಾಡಿಕೊಡುವ ಸಂಬAಧ ನಿನ್ನೆ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು. ನೂರಾರು ಮಂದಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಲಗ್ನ ಪತ್ರಿಕೆ ಶಾಸ್ತçದೊಂದಿಗೆ ಪರಸ್ಪರ ಉಂಗುರ ಕೂಡ ಬದಲಾಯಿಸಿಕೊಂಡಿದ್ದರು. ಊಟೋಪಚಾರದ ಬಳಿಕ ಎಲ್ಲರೂ ಅವರವರ ಮನೆಗಳಿಗೆ ಹೊರಟು ಹೋದರು. ಪ್ರಕಾಶನೂ ಹೋಗಿದ್ದ. ನಾನು ದನ, ಕರುಗಳನ್ನು ಮೇಯಿಸಲೆಂದು ಗದ್ದೆಗೆ ಹೋಗಿದ್ದೆ. ಮನೆಯಲ್ಲಿ ಪತ್ನಿ ಜಾನಕಿ ಹಾಗೂ ಮಗಳು ಮೀನಾ ಮಾತ್ರ ಇದ್ದರು. ಸಂಜೆ ಐದು ಗಂಟೆ ಹೊತ್ತಿಗೆ ಮನೆಯಲ್ಲಿ ಹೆಂಡತಿ, ಮಗಳು ಬೊಬ್ಬೆ ಹೊಡೆಯುತ್ತಿರುವದು ಕೇಳಿಸಿತು. ಕೂಡಲೇ ಓಡಿ ಹೋಗಿ ನೋಡುವಾಗ ಮನೆಗೆ ನುಗ್ಗಿದ್ದ ಪ್ರಕಾಶ್ ಮಗಳನ್ನ ಹೊಡೆಯುತ್ತಿದ್ದ. ‘ಏಕೆ ಹೊಡೆಯುತ್ತೀಯಾ’ ಎಂದು ಬಿಡಿಸಲು ಹೋದ ನನ್ನ ಸೊಂಟಕ್ಕೆ ಒದ್ದ. ಸೊಂಟ ಉಳುಕಿದ್ದರಿಂದ ನಾನು ಅಲ್ಲೇ ಕುಸಿದು ಬಿದ್ದೆ. ಅವನ ಕೈಯಲ್ಲಿ ಕತ್ತಿ ಇರುವುದು ಗೊತ್ತಿರಲಿಲ್ಲ, ಹೆಂಡತಿ ಜಾನಕಿ ಬಿಡಿಸಲು ಹೋದಾಗ ಆಕೆಗೂ ಹೊಡೆದು, ಕತ್ತಿಯಿಂದ ಕೈಗೆ ಕಡಿದುದರಿಂದ ಆಕೆಯೂ ಬಿದ್ದು ಹೋದಳು. ಮಗಳನ್ನು ಹೊರಗಡೆಗೆ ಎಳೆದುಕೊಂಡು ಹೋಗುವಾಗ ಪ್ರಕಾಶ್ ಜೊತೆ ಬಂದಿದ್ದ ಮುದ್ದಂಡ ಮಧು ಎಂಬಾತ ಎಷ್ಟು ತಡೆದರೂ ಅವನನ್ನು ತಡೆಯಲಾಗಲಿಲ್ಲ, ಇನ್ನೊಬ್ಬ ಕಾಶಿ ಕೂಡ ತಡೆದರೂ ಕೇಳದ ಪ್ರಕಾಶ್ ಎಳೆದುಕೊಂಡು ಹೋಗೇ ಬಿಟ್ಟ ಎಂದು ಕಣ್ಣಿರ‍್ಗರೆದರು.
‘ಅಪ್ಪ., ಅಪ್ಪ..!’
ನಾನು ಸೊಂಟ ಬಲವಿಲ್ಲದೆ ಬಿದ್ದಿದ್ದರೆ, ಹೆಂಡತಿ ರಕ್ತಸಿಕ್ತವಾಗಿ ಒದ್ದಾಡುತ್ತಿದ್ದಳು. ಅಷ್ಟರಲ್ಲಿ ಹೊರಗಡೆಯಿಂದ ಮಗಳು ‘ಅಪ್ಪಾ., ಅಪ್ಪ..’ ಅಂತ ಕಿರುಚಿಕೊಳ್ಳುತ್ತಾ ಕರೆಯುತ್ತಿರುವುದು ಕೇಳಿಸಿತು.
(ಮೊದಲ ಪುಟದಿಂದ) ಮತ್ತೆ ಸದ್ದೇ ಇರಲಿಲ್ಲ. ಸೊಂಟ ಬಲವಿಲ್ಲದಿದ್ದರೂ ತೆವಳಿಕೊಂಡು ಹೊರಗಡೆ ಓಡಿದೆ. ಸ್ವಲ್ಪ ದೂರದಲ್ಲಿ ಹೋಗಿ ನೋಡಿದಾಗ ಮಗಳ ದೇಹ ಬಿದ್ದಿರುವದು ಕಾಣಿಸಿತು. ಆ ಕ್ಷಣಕ್ಕೆ ತಲೆ ಇಲ್ಲದಿರುವದು ಗೊತ್ತಾಗಲಿಲ್ಲ. ಸರಿಯಾಗಿ ನೋಡುವಾಗ ದೇಹದಲ್ಲಿ ತಲೆ ಇರಲಿಲ್ಲ. ರಕ್ತ ಹರಿಯುತ್ತಿತ್ತು, ಅವನು ಮಗಳ ತಲೆ ಕಡಿದು ತಕೊಂಡೋಗಿದ್ದ ಎಂದು ಹೇಳುವಾಗ ಸುಬ್ರಮಣಿ ಅವರ ಧ್ವನಿಯಲ್ಲಿ ಏರಿಳಿತವಿತ್ತು..!
ಕಾರಣ ಗೊತ್ತಿಲ್ಲ..!
ಬೆಳಿಗ್ಗೆಯಿಂದ ಚೆನ್ನಾಗಿಯೇ ಇದ್ದ ಪ್ರಕಾಶ್ ಸಂಜೆ ವೇಳೆ ಗಲಾಟೆ ಮಾಡಲು ಕಾರಣ ಏನೆಂದೇ ಗೊತ್ತಿಲ್ಲ. ಮಗಳಿಗೆ ಹೊಡೆಯುವಾಗ ‘ಯಾರು ಕಂಪ್ಲೆAಟ್ ಕೊಟ್ಟಿದ್ದು., ಹೇಳು..’ ಅಂತ ಮಾತ್ರ ಕೇಳ್ತಿದ್ದ. ಅದು ಬಿಟ್ಟರೆ ಬೇರೇನೂ ಹೇಳುತ್ತಿರಲಿಲ್ಲ. ನಾನು ತಡೆಯಲು ಹೋದಾಗ ‘ನೀನು ಯಾರು ತಡೆಯಲು..?’ ಅಂತ ಹೇಳಿ ನನಗೂ ಒದ್ದ ಎಂದು ಸುಬ್ರಮಣಿ ಹೇಳಿದರು.
ಮದ್ಯ ಸೇವಿಸುತ್ತಿರಲಿಲ್ಲ..!
ಪ್ರಕಾಶ್ ಮದ್ಯ ಸೇವಿಸುತ್ತಿರಲಿಲ್ಲ. ಕುಡಿಯುವದನ್ನು ಬಿಟ್ಟು ಸುಮಾರು ವರ್ಷ ಆಗಿತ್ತು. ನಿನ್ನೆಯ ಕಾರ್ಯಕ್ರಮದಲ್ಲೂ ಕೂಡ ಕುಡಿದಿರಲಿಲ್ಲ. ಮನೆಗೆ ಹೋದ ಮೇಲೆ ಸಾಯಂಕಾಲ ಕುಡಿದಿರಬೇಕೇನೋ.? ಹಾಗಾಗಿ ಬಂದು ಗಲಾಟೆ ಮಾಡಿರಬೇಕು ಅಂತ ಅನಿಸ್ತಿದೆ ಎಂದು ಅವರು ಹೇಳಿದರು.
ಮದುವೆ ಬೇಡ ಎಂದು ಹೇಳಿದ್ದಳು..!
ಪ್ರಕಾಶ್ ಮತ್ತು ಮಗಳು ಮೀನಾ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ, ಕೆಲ ದಿನಗಳ ಹಿಂದೆ ಮೀನಾ ಅವಳ ಅಕ್ಕನ ಮನೆಗೆ ಹೋಗಿದ್ದಾಗ ಅಲ್ಲಿಂದ ಕರೆ ಮಾಡಿ ‘ನನಗೆ ಪ್ರಕಾಶ್ ಬೇಡ, ನಾನು ಅವನೊಂದಿಗೆ ಮದುವೆಯಾಗುವುದಿಲ್ಲ’ ಅಂತ ಹೇಳಿದ್ದಳು. ನಾನು ಅವಳನ್ನು ಮನೆಗೆ ಕರೆಸಿಕೊಂಡು ವಿಚಾರಿಸಿದಾಗ ‘ಯಾರೋ ಈಗಲೇ ಮದುವೆ ಬೇಡ ಅಂತ ಹೇಳಿದ್ದಾರೆ, ಅದಕ್ಕೆ ಹಾಗೇ ಹೇಳಿದ್ದು.’ ಅಂತ ಹೇಳಿದ್ದಳು. ‘ಒಂದು ವರ್ಷ ಜೊತೆಗಿದ್ದು ಇವಾಗ ಬೇಡ ಅಂತ ಹೇಳಿದರೆ ಸರಿಯಾಗದು.’ ಎಂದು ಅವಳಿಗೆ ಬುದ್ಧಿ ಹೇಳಿ ನಿಶ್ಚಿತಾರ್ಥಕ್ಕೆ ಏರ್ಪಾಡು ಮಾಡಲಾಗಿತ್ತು ಎಂದು ತಂದೆ ವಿವರಿಸಿದರು.
ಹೀಗೆ ಮಾಡುತ್ತಾನೆ ಅಂತ ಗೊತ್ತಿರಲಿಲ್ಲ..!
ಬೆಳಿಗ್ಗೆಯಿಂದ ಸಂಜೆಯವರೆಗೂ ಚೆನ್ನಾಗಿಯೇ ಇದ್ದ ಪ್ರಕಾಶ್ ಹೀಗೆ ಮಾಡುತ್ತಾನೆ ಅಂತ ಅಂದುಕೊAಡಿರಲಿಲ್ಲ. ಬಳಸು ದಾರಿಯಲ್ಲಿ ಮನೆಗೆ ಬಂದು ಗಲಾಟೆ ಮಾಡಿ, ಈ ರೀತಿ ಮಾಡಿ ಹೋಗಿದ್ದಾನೆ. ಏನು ಕಾರಣ ಅಂತ ಗೊತ್ತಿಲ್ಲ ಎಂದು ಹೇಳುತ್ತಿದ್ದ ಸುಬ್ರಮಣಿ ಅವರ ಮೊಗದಲ್ಲಿ ಭೀತಿಯೂ ಕಾಣುತ್ತಿತ್ತು..! ?ಕುಡೆಕಲ್ ಸಂತೋಷ್