ಮಡಿಕೇರಿ/ ಸೋಮವಾರಪೇಟೆ ಮೇ ೧೦: ನಿನ್ನೆ ದಿನ ಸೂರ್ಲಬ್ಬಿ ಬಳಿಯ ಕುಂಬಾರಗಡಿಗೆಯಲ್ಲಿ ಅಪ್ರಾಪ್ತೆ ಬಾಲಕಿಯೊಬ್ಬಳ ದಾರುಣ ಹತ್ಯೆಯ ಹಿನ್ನೆಲೆಯ ಚಿತ್ರಣಗಳು ವಿಚಿತ್ರ ತಿರುವು ಪಡೆದುಕೊಂಡಿದೆ. ಬಾಲಕಿಯೊಂದಿಗೆ ಆಕೆಯ ಪೋಷಕರ ಸಹಮತದಿಂದಲೇ ನಿಶ್ಚಿತಾರ್ಥ ನೆರವೇರಿದ ಬಳಿಕ ವರನ ಸ್ಥಾನದಲ್ಲಿದ್ದ ಯುವಕನು ಆ ಬಾಲಕಿಗೆ ರಕ್ಷಕನಾಗುವ ಬದಲು ಹಂತಕನಾಗಿ ಪರಿವರ್ತಿತನಾದ ಭೀಕರ ಘಟನೆ ಕೊಡಗು ಜಿಲ್ಲೆಯ ಜನತೆಯಲ್ಲಿ ತಲ್ಲಣ ಮೂಡಿಸಿದೆ.
ಸೂರ್ಲಬ್ಬಿ ಸರಕಾರಿ ಶಾಲೆಯಲ್ಲಿ ಏಕೈಕ ವಿದ್ಯಾರ್ಥಿನಿಯಾಗಿ ಗುರುವಾರ ತೇರ್ಗಡೆಗೊಂಡು ಆ ಶಾಲೆಗೆ ಶೇ. ೧೦೦ ಫಲಿತಾಂಶದ ಗರಿ ಮೂಡಿಸಿದ್ದ ವಿದ್ಯಾರ್ಥಿನಿ ಯು.ಎಸ್.ಮೀನಾ (೧೬) ಹರ್ಷದಲ್ಲಿ ತೇಲಾಡಿದ ಅವಧಿ ಕೆಲವೇ ತಾಸುಗಳಲ್ಲಿ ಭಗ್ನಗೊಂಡು ೩೨ ವರ್ಷದ ಯುವಕ ಪ್ರಕಾಶ್ನ ಕ್ರೌರ್ಯಕ್ಕೆ ಬಲಿಯಾಗಿ ಛಿದ್ರಗೊಂಡ ತನುವಿನೊಂದಿಗೆ ಧರಾಶಾಯಿಯಾದುದು ನಿಜಕ್ಕೂ÷ ದೌರ್ಭಾಗ್ಯವೇ ಸರಿ. ಬಾಲ್ಯವಿವಾಹ ಪದ್ಧತಿ ವಿರೋಧಿ ಕಾನೂನಿನಂತೆ ವಿವಾಹವಾಗುವ ಸಂದರ್ಭ ಬಾಲಕಿಗೆ ೧೮ ತುಂಬಿರಬೇಕು ಎಂದು ಸಮಾಜ ಕಲ್ಯಾಣ ಇಲಾಖಾ ಪ್ರಮುಖರು ನಿನ್ನೆ ದಿನ ಸ್ಥಳಕ್ಕೆ ತೆರಳಿ ಎರಡು ಕಡೆಯ ಕುಟುಂಬದವರಿಗೂ ಸೂಚನೆ ನೀಡಿದ್ದಾರೆ. ಆದರೆ, ಸಂಜೆ ವೇಳೆ ಆಗಬಾರದ ದುರ್ಘಟನೆ ನಡೆದುಹೋಗಿದೆ.
ಈ ನಡುವೆ, ಆರೋಪಿ ಹಮ್ಮಿಯಾಲ ಗ್ರಾಮದ ಎಂ. ಪ್ರಕಾಶ್ ಬಾಲಕಿಯ ರುಂಡದೊAದಿಗೆ ತಲೆಮರೆಸಿಕೊಂಡಿದ್ದಾನೆ. ಸೂರ್ಲಬ್ಬಿ ಸುತ್ತ ಮುತ್ತ ಕಾಡಿನ ನಡುವೆ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಪೊಲೀಸರಿಂದ ತಪಾಸಣೆ ಚುರುಕುಗೊಂಡಿದೆ. ಏತನ್ಮಧ್ಯೆ ಆರೋಪಿ ಪ್ರಕಾಶ್ ವನ್ಯ ಪ್ರದೇಶದಲ್ಲಿ ಸಾವಿಗೀಡಾಗಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬುತ್ತಿದ್ದಂತೆ ಎಸ್ ಪಿ ರಾಮರಾಜನ್ ಅವರು ಅದನ್ನು ಸುಳ್ಳು ಸುದ್ದಿ ಎಂದು ಅಲ್ಲಗಳೆದಿದ್ದು ಆರೋಪಿಯ ಪತ್ತೆ ಕಾರ್ಯವನ್ನು ತೀವ್ರಗೊಳಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ಒಳ ಹೂರಣ ಗಮನಿಸುವಾಗ ಅಮಾಯಕಿ ಬಾಲಕಿಯ ತಂದೆ “ಶಕ್ತಿ” ಗೆ ನೀಡಿರುವ ಹೇಳಿಕೆಯೊಂದರಲ್ಲಿ ತನ್ನ ಮಗಳಿಗೆ ಆರೋಪಿ ಹೊಡೆಯುತ್ತಿದ್ದಾಗ “ಯಾರು ಕಂಪ್ಲೇAಟ್ ಕೊಟ್ಟಿದ್ದು ಹೇಳು” ಎನ್ನುತ್ತಿದ್ದುದು ಪ್ರಕರಣದ ಹಿನ್ನೆಲೆಯ ಸಂಶಯಕ್ಕೆ ಎಡೆ ಮಾಡಿದ ಅಂಶವಾಗಿ ಮೇಲ್ನೋಟಕ್ಕೆ ಕಂಡುಬರುತ್ತಿದೆ.
ದುರಂತಕ್ಕೆ ಸಾಕ್ಷಿಯಾದ ಹಮ್ಮಿಯಾಲ
ಸ್ವಾತಂತ್ರö್ಯ ಬಂದು ಏಳೂವರೆ ದಶಕ ಕಳೆದರೂ ಹಮ್ಮಿಯಾಲ ಒಂದು ಕುಗ್ರಾಮವೇ. ಮೂಲಭೂತ ಸೌಕರ್ಯಗಳು ಹೇಳಿಕೊಳ್ಳುವಷ್ಟಿದ್ದರೂ ಇಂದಿಗೂ ಆಧುನಿಕ ಪ್ರಪಂಚದಿAದ ಒಂದಿಷ್ಟು ದೂರವೇ ಉಳಿದು, ತಮ್ಮಷ್ಟಕ್ಕೇ ತಾವಿರುವ ತಾಣ.
ಇಂತಹ ಊರಿನಲ್ಲೊಂದು ಸರ್ಕಾರಿ ಶಾಲೆ. ಆ ಶಾಲೆಯ ೧೦ನೇ ತರಗತಿ ಕಲಿಯುತ್ತಿದ್ದವಳು ಓರ್ವಳು ಮಾತ್ರ. ನಿನ್ನೆಯಷ್ಟೇ ಬಂದ ಫಲಿತಾಂಶದಲ್ಲಿ ಆಕೆ ತೇರ್ಗಡೆ, ಶಾಲಾ ಶಿಕ್ಷಕರು ಮಾತ್ರವಲ್ಲದೇ ಇಡೀ ಗ್ರಾಮವೇ ಸಂಭ್ರಮದಲ್ಲಿತ್ತು. ಈ ಸಂಭ್ರಮ ಹೆಚ್ಚು ಸಮಯ ಇರಲಿಲ್ಲ. ಕಾರಣ ಯುವ ಪ್ರೇಮಿಯೊಬ್ಬನ ಮಚ್ಚಿನೇಟಿಗೆ ಹತ್ತನೇ ತರಗತಿ ಪಾಸಾಗಿದ್ದ ಬಾಲಕಿಯ ರುಂಡ ಮುಂಡ ಬೇರ್ಪಟ್ಟು ಮನೆಯ ಅನತಿ ದೂರದಲ್ಲಿ ಶವವಾಗಿದ್ದಳು. ಇದೊಂದು ದಾರುಣ ಕೃತ್ಯವೇ ಸರಿ! ನಿಶ್ಚಿತಾರ್ಥ ಮಾಡಿಕೊಂಡು ಕೈಬೆರಳಿಗೆ ಉಂಗುರ ತೊಡಿಸಿದವನೇ ಅರೋಪಿ ಎಂಬುದು ನಗ್ನ ಸತ್ಯ. ಇದು ಸ್ಥಳೀಯರ ವಾದವೂ ಹೌದು. ಆರೋಪಿ ಇದೀಗ ಬಾಲಕಿಯ ರುಂಡದ ಸಹಿತ ನಾಪತ್ತೆಯಾಗಿದ್ದಾನೆ. ನಾಪತ್ತೆಯಾಗಿರುವವನಿಗಾಗಿ ಆತನ ಕೈಯಲ್ಲಿರುವ ಮೀನಾಳ ರುಂಡಕ್ಕಾಗಿ ಪೊಲೀಸರು ಕಾಡುಮೇಡು ಅಲೆಯುತ್ತಿದ್ದಾರೆ.
ಏನಿದು ಪ್ರಕರಣ: ಸೂರ್ಲಬ್ಬಿ ನಾಡು ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದ ಸುಬ್ರಮಣಿ ಮತ್ತು ಜಾನಕಿ ದಂಪತಿಯ ಪುತ್ರಿ, ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಯು.ಎಸ್.ಮೀನಾ (೧೬) ನಿನ್ನೆ ಬಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಈ ಸಂಭ್ರಮದ ನಡುವೆಯೇ ನಿಶ್ಚಿತಾರ್ಥವನ್ನೂ ಮುಗಿಸಿಕೊಂಡಿದ್ದಾಳೆ. ಒಂದೆಡೆ ಪರೀಕ್ಷೆಯಲ್ಲಿ ಪಾಸಾದ ಖುಷಿ, ಮತ್ತೊಂದೆಡೆ ಮದುವೆಗೆ ತಯಾರಾಗಿದ್ದ ಅಪ್ರಾಪ್ತೆ, ಕೆಲವೇ ಗಂಟೆಗಳ
(ಮೊದಲ ಪುಟದಿಂದ) ಅಂತರದಲ್ಲಿ ಭೀಭತ್ಸ ಕೃತ್ಯಕ್ಕೊಳಗಾಗಿ ಸಾವನ್ನಪ್ಪಿದ್ದಾಳೆ. ಈಕೆಯ ಕೈ ಬೆರಳಿಗೆ ಉಂಗುರ ತೊಡಿಸಿ, ಕುಟುಂಬಸ್ಥರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಅಲಿಯಾಸ್ ಓಂಕಾರಪ್ಪ (೩೨) ವಿಕೃತ ಪ್ರೀತಿಯಲ್ಲಿ ಅಮಾನವೀಯ ಕೃತ್ಯವೆಸಗಿದ್ದಾನೆ. ಇದೊಂದು ಅಪ್ರಾಪ್ತೆಯನ್ನು ಮದುವೆಯಾಗಲು ಹೊರಟು ಕಾನೂನಿನ ಕಟ್ಟಳೆಗಳಿಂದ ಹತಾಶನಾಗಿ ಅಂತಿಮವಾಗಿ ನಡೆಸಿದ ದುಷ್ಕೃತ್ಯ ಎಂಬುದು ಮೇಲ್ನೋಟಕ್ಕೆ ಕಂಡುಬAದರೂ, ಅಷ್ಟೊಂದು ಕ್ರೂರತ್ವಕ್ಕೆ ಯಾವ ಶಿಕ್ಷೆ ಎಂಬುದು ಪ್ರಶ್ನೆಯಾಗಿದೆ.
ಶಾಲೆಗೆ ೧೦೦ರ ಫಲಿತಾಂಶ ತಂದಿದ್ದಳು: ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯಲ್ಲಿ ಯು.ಎಸ್. ಮೀನಾ ಓರ್ವಳೇ ವಿದ್ಯಾರ್ಥಿಯಾಗಿದ್ದು, ಮುಟ್ಲು ಗ್ರಾಮದಿಂದ ಪ್ರತಿದಿನ ೫ ಕಿ.ಮೀ. ನಡೆದುಕೊಂಡು ಶಾಲೆಗೆ ಆಗಮಿಸುತ್ತಿದ್ದಳು. ಪರೀಕ್ಷೆಯಲ್ಲಿ ೩೧೪ ಅಂಕ ಗಳಿಸಿ ತೇರ್ಗಡೆಯಾಗಿದ್ದಳು. ಆಗಾಗ್ಗೆ ತರಗತಿಗಳಿಗೆ ಗೈರು ಹಾಜರಾಗುತ್ತಿದ್ದ ಸಂದರ್ಭ, ಶಿಕ್ಷಕರೇ ಮನೆಗೆ ತೆರಳಿ ಪೋಷಕರ ಮನವೊಲಿಸಿ ಶಾಲೆಗೆ ಆಗಮಿಸುವಂತೆ ಮಾಡಿದ್ದರು. ಅಂತಿಮವಾಗಿ ಹತ್ತನೇ ತರಗತಿ ಪಾಸಾಗಿದ್ದಳು.
ಮತ್ತೊಂದೆಡೆ ಹಮ್ಮಿಯಾಲ ಗ್ರಾಮದ ಪ್ರಕಾಶ್ ಕಳೆದ ಒಂದು ವರ್ಷಗಳಿಂದ ಈಕೆಯನ್ನು ಪ್ರೀತಿಸುತ್ತಿದ್ದು, ಈ ವಿಷಯ ಮನೆಯವರಿಗೂ ತಿಳಿದಿತ್ತು ಎನ್ನಲಾಗಿದೆ. ಹತ್ತನೇ ತರಗತಿ ಮುಗಿದ ನಂತರ ವಿವಾಹಕ್ಕೆ ಪ್ರಕಾಶ್ ಸಿದ್ಧತೆ ಮಾಡಿಕೊಂಡಿದ್ದ. ಅದರಂತೆ ನಿನ್ನೆ ಫಲಿತಾಂಶ ಬಂದಿದ್ದು, ಮೀನಾ ಉತ್ತೀರ್ಣಳಾಗಿದ್ದಳು. ಇದೇ ಖುಷಿಯ ನಡುವೆ ಮನೆಯಲ್ಲಿ ಪ್ರಕಾಶ್ನೊಂದಿಗೆ ನಿಶ್ಚಿತಾರ್ಥ ಮಾಡಿಸಿದ್ದರು. ಮನೆಯ ಎದುರೇ ಬಂಧು ಬಳಗದವರೊಂದಿಗೆ ಕೇಕ್ ಕತ್ತರಿಸಿ, ಉಂಗುರ ಬದಲಿಸಿಕೊಂಡಿದ್ದರು.
ಅಪ್ರಾಪ್ತೆ ಮದುವೆಗೆ ಕಾನೂನು ಅಡ್ಡಿ: ನಿಶ್ಚಿತಾರ್ಥದ ತರುವಾಯ ಶಾಲೆಯ ಕಡೆಗೆ ಆಗಮಿಸಿದ ಮೀನಾ, ತನಗೆ ನಿಶ್ಚಿತಾರ್ಥ ಆಗಿರುವ ವಿಷಯವನ್ನು ಕೆಲವರಿಗೆ ತಿಳಿಸಿದ್ದಾಳೆ. ಅಪ್ರಾಪ್ತೆಯ ವಿವಾಹ ಮನಗಂಡ ಕೆಲವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಸ್ಥಳಕ್ಕೆ ತೆರಳಿದ ಅಧಿಕಾರಿಗಳು, ಮೀನಾಳಿಗೆ ಬುದ್ದಿವಾದ ಹೇಳಿದ್ದಾಳೆ. ಅಪ್ರಾಪ್ತೆಯಾಗಿರುವ ಕಾರಣಕ್ಕೆ ಈಗಲೇ ಮದುವೆಯಾಗುವಂತಿಲ್ಲ. ಇನ್ನೂ ಎರಡು ವರ್ಷ ಕಳೆದ ನಂತರ ಮದುವೆಯಾಗು. ಅಲ್ಲಿಯವರೆಗೆ ವಿದ್ಯಾಭ್ಯಾಸ ಮುಂದುವರೆಸುವAತೆ ತಿಳಿಹೇಳಿದ್ದರು.
ಇಷ್ಟಕ್ಕೇ ಸುಮ್ಮನಾಗದೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಕಾಶ್ನನ್ನೂ ಕರೆಸಿ ಕಾನೂನು ಪಾಠ ಮಾಡಿದ್ದರು. ಇದಕ್ಕೆ ಸಮ್ಮತಿ ಸೂಚಿಸಿದ್ದ ಉಭಯ ಕಡೆಯವರು ತಮ್ಮ ಪಾಡಿಗೆ ತಾವು ತೆರಳಿದ್ದರು. ಇದಾದ ಕೆಲವೇ ಸಮಯಗಳಲ್ಲಿ ಮನೆಗೆ ತೆರಳಿದ ಪ್ರಕಾಶ್ ಕತ್ತಿಯೊಂದಿಗೆ ಮತ್ತೆ ಬಾಲಕಿಯ ಮನೆಗೆ ಬಂದು ಗಲಾಟೆ ಶುರು ಮಾಡಿದ್ದಾನೆ. ನನ್ನ ಹಾಗೂ ಮೀನಾಳ ಮದುವೆ ನಿಲ್ಲಿಸಲು ನೀವೇ ಪ್ರಯತ್ನ ಮಾಡುತ್ತಿದ್ದೀರಿ ಎಂದು ಕುಪಿತನಾಗಿದ್ದಾನೆ.
ಈ ಸಂದರ್ಭ ಎದುರು ಬಂದ ಮೀನಾಳ ಕೆನ್ನೆಗೆ ಹಲ್ಲೆ ಮಾಡಿದ್ದಾನೆ. ನನ್ನ ಮಗಳನ್ನು ನಾವೇ ಹೊಡೆದಿಲ್ಲ ನೀನ್ಯಾರು ಹೊಡೆಯೋಕೆ? ಎಂದು ತಾಯಿ ಜಾನಕಿ ಪ್ರಶ್ನಿಸಿದ ಸಂದರ್ಭ ತನ್ನ ಬಳಿಯಿದ್ದ ಕತ್ತಿಯಿಂದ ಬಾಲಕಿಯ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಹೊರ ಹೋಗಿದ್ದ ತಂದೆ ಸುಬ್ರಮಣಿಯೂ ಅಷ್ಟೊತ್ತಿಗೆ ಬಂದಿದ್ದು, ಅವರ ಮೇಲೆಯೂ ಹಲ್ಲೆ ಮಾಡಿದ್ದಾನೆ; ಎರಡೂ ಕೈಗಳಿಗೆ ಗಾಯವಾಗಿದೆ. ಸ್ಥಳದಲ್ಲಿದ್ದವರು ಗಾಯಾಳುವನ್ನು ಉಪಚರಿಸಲು ಮುಂದಾಗುತ್ತಿದ್ದAತೆ, ಮೀನಾಳನ್ನು ಎಳೆದೊಯ್ದ ಪ್ರಕಾಶ್ ಮನೆಯಿಂದ ೧೫೦ ಮೀಟರ್ ದೂರದಲ್ಲಿ ರುಂಡ ಮುಂಡ ಬೇರ್ಪಡಿಸಿ ರುಂಡದೊAದಿಗೆ ಸ್ಥಳದಿಂದ ತೆರಳಿದ್ದಾನೆ.
ಸಂಜೆಯ ವೇಳೆಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ರುಂಡ ರಹಿತ ದೇಹವನ್ನು ಮಡಿಕೇರಿಯ ಶವಾಗಾರಕ್ಕೆ ಸಾಗಿಸಿ, ಆರೋಪಿಯ ಪತ್ತೆಗೆ ಮುಂದಾಗಿದ್ದರು. ಇಂದು ಸಂಜೆಯ ವೇಳೆಗೆ ಆರೋಪಿ ಪ್ರಕಾಶ್ ತನ್ನ ಮನೆಯ ಸಮೀಪವಿರುವ ಅರಣ್ಯ ಪ್ರದೇಶದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾತುಗಳು ಕೇಳಿಬಂದಿದ್ದು, ಪೊಲೀಸರು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಡಿವೈಎಸ್ಪಿ ಗಂಗಾಧರಪ್ಪ, ಇನ್ಸ್ಪೆಕ್ಟರ್ ವಸಂತ್ಕುಮಾರ್, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ರಮೇಶ್ಕುಮಾರ್, ಪ್ರಹ್ಲಾದ್ ಸೇರಿದಂತೆ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಒಟ್ಟಾರೆ ಅಪ್ರಾಪ್ತೆಯನ್ನು ಪ್ರೀತಿಸಿ, ಕಾನೂನು ಕಟ್ಟಳೆಗಳನ್ನು ಮೀರಿ ವಿವಾಹವಾಗಲು ಪ್ರಯತ್ನಿಸಿ, ಅದಕ್ಕೆ ಅಡ್ಡಿ ಆತಂಕ ಬಂದಾಗ ಹತಾಶನಾಗಿ ಇಂತಹ ದುಷ್ಕೃತ್ಯ ನಡೆಸಿದ ಪ್ರಕಾಶ್ನಿಗೆ ಯಾವ ಶಿಕ್ಷೆಯಾದರೂ ಕಮ್ಮಿಯೇ ಎಂಬ ವಾದ ಬಲವಾಗುತ್ತಿದೆ. ಜೊತೆಗೆ ಹತ್ತನೇ ತರಗತಿಯಲ್ಲಿ ತೇರ್ಗಡೆಯಾಗಿ, ಗ್ರಾಮ ಹಾಗೂ ಶಾಲೆಯಲ್ಲಿ ಸಂಭ್ರಮಕ್ಕೆ ಕಾರಣಳಾಗಿದ್ದ ಮೀನಾಳ ದುರಂತ ಅಂತ್ಯಕ್ಕೆ ಮರುಗುತ್ತಿರುವ ಮನಸ್ಸುಗಳ ಸಂಖ್ಯೆಗೆ ಲೆಕ್ಕವಿಲ್ಲದಂತಾಗಿದೆ! - ವಿಜಯ್ ಹಾನಗಲ್