ಮಡಿಕೇರಿ, ಮೇ ೧೧: ಆಕೆ ಬದುಕಿ, ಬಾಳಬೇಕಾದ ಹುಡುಗಿ.. ಅರಳುವ ಮುನ್ನವೇ ಹುಚ್ಚುಪ್ರೇಮಿಯ ಮಚ್ಚಿನೇಟಿಗೆ ಬಲಿಯಾಗಿ ಇದೀಗ ಎಂದೂ ಬಾರದ ಲೋಕಕ್ಕೆ ಪಯಣಿಸಿದ್ದಾಳೆ. ಸೂರ್ಲಬ್ಬಿ ಬಳಿಯ ಕುಂಬಾರಗಡಿಗೆಯಲ್ಲಿ ನಡೆದ ಹೈಸ್ಕೂಲ್ ಬಾಲಕಿಯ ಬರ್ಬರ ಕೊಲೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ೨ ದಿನಗಳ ಹಿಂದಿನ ಈ ಘಟನೆ ಜನರನ್ನು ಇಂದಿಗೂ ತೀವ್ರವಾಗಿ ಕಾಡುತ್ತಿದೆ. ಎಲ್ಲೆಡೆ ಈ ವಿಚಾರ ಚರ್ಚೆಗೆ ಗ್ರಾಸವಾಗಿ ಅಮಾಯಕಿ ಬಾಲಕಿಯ ಸಾವಿಗೆ ನಾಡು ಮರುಗುತ್ತಿದೆ. ಪೈಶಾಚಿಕ ಕೃತ್ಯವೆಸಗಿದ ಕೊಲೆಗಾರನ ವಿರುದ್ಧ ಆಕ್ರೋಶವೂ ಭುಗಿಲೆದ್ದಿದೆ. ತಪ್ಪಿತಸ್ಥನಿಗೆ ತಕ್ಕ ಶಿಕ್ಷೆಯಾಗಬೇಕೆಂಬ ಕೂಗು ಎದ್ದಿದೆ. ಇವೆಲ್ಲದರ ನಡುವೆ ಬಾಲಕಿಯನ್ನು ಕೊಲೆಗೈದ ಹಂತಕನನ್ನು ಪೊಲೀಸರು ಬಂಧಿಸಿ ಕಾನೂನು ಕುಣಿಕೆಗೆ ಒಪ್ಪಿಸಿದ್ದಾರೆ.
ತಾ. ೯ ರಂದು ಸೂರ್ಲಬ್ಬಿ ಸಮೀಪದ ಕುಂಬಾರಗಡಿಗೆಯಲ್ಲಿ ಸುಬ್ರಮಣಿ-ಜಾನಕಿ ಎಂಬವರ ಪುತ್ರಿ ೧೬ ವರ್ಷದ ಮೀನಾಳನ್ನು ಹಮ್ಮಿಯಾಲ ಗ್ರಾಮದ ಓಂಕಾರಪ್ಪ (ಪ್ರಕಾಶ್-೩೪) ಅಮಾನವೀಯವಾಗಿ ಕೊಲೆಗೈದು ರುಂಡ-ಮುAಡ ಬೇರ್ಪಡಿಸಿ ತಲೆಯನ್ನು ಹೊತ್ತೊಯ್ದು ತಲೆಮರೆಸಿಕೊಂಡಿದ್ದ. ಈತನನ್ನು ಪೊಲೀಸರು ಶನಿವಾರದಂದು ಗರ್ವಾಲೆ ಸಮೀಪ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆತನನ್ನು ಘಟನೆ ನಡೆದ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೊಲೆಗಾರ ಪ್ರಕಾಶ್ ಬಾಲಕಿಯ ದೇಹದಿಂದ ಬೇರ್ಪಟ್ಟ ತಲೆಯನ್ನು ಹೊತ್ತೊಯ್ದು ಘಟನಾ ಸ್ಥಳದಿಂದ ಕೆಲ ಅಂತರದ ದೂರದ ಪೊದೆಯೊಂದರಲ್ಲಿ ಬಚ್ಚಿಟ್ಟಿದ್ದ. ತಲೆಯನ್ನು ವಶಪಡಿಸಿಕೊಂಡಿರುವ ಪೊಲೀಸರು ಕೋವಿಯೊಂದರ ಸಹಿತ ಸ್ವಾಧೀನಪಡಿಸಿಕೊಂಡಿದ್ದಾರೆ.
ಹತಾಶನಾಗಿ ಹತ್ಯೆ
ಆರೋಪಿಗೆ ಮದುವೆ ವಯಸ್ಸು ಕಳೆದಿದ್ದು, ನಿಗದಿಯಾಗಿದ್ದ ನಿಶ್ಚಿತಾರ್ಥ ಮುರಿದುಬಿದ್ದ ಕಾರಣದಿಂದ ಹತಾಶನಾಗಿ ದುಷ್ಕೃತ್ಯ ಎಸಗಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಮ್ಮ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಕೆಂದರೆ ಆತನಿಗೆ ಈಗಾಗಲೇ ೩೪ ವರ್ಷ. ಇನ್ನೂ ಎರಡು ವರ್ಷ ವಿವಾಹಕ್ಕೆ ಕಾಯುವಂತಹ ಸಹನೆಯನ್ನು ಆತ ಕಳೆದುಕೊಂಡಿದ್ದ.
ಕೊಲೆಯಾದ ಬಾಲಕಿ ಮೀನಾಳ ತಂದೆ-ತಾಯಿಯನ್ನು ಮದುವೆಗೆ ಒಪ್ಪಿಸಿದ್ದ ಪ್ರಕಾಶ್ ತಾ. ೯ ರಂದು ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದ. ಕುಟುಂಬಸ್ಥರು ಅನಕ್ಷರಸ್ಥರು ಹಾಗೂ ಕಾನೂನಿನ ತಿಳುವಳಿಕೆ ಇಲ್ಲದ ಕಾರಣಕ್ಕೆ ಅಪ್ರಾಪ್ತೆ ಮಗಳನ್ನು ಮದುವೆ ಮಾಡಿಕೊಡಲು ಒಪ್ಪಿದ್ದರು. ನಿಶ್ಚಿತಾರ್ಥವೇನೋ ನಿರಾಳವಾಗಿ ನೆರವೇರಿತು. ಬಳಿಕ ಮಕ್ಕಳ ಸಹಾಯವಾಣಿಗೆ ದೂರು ಹೋದ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ದೌಡಾಯಿಸಿ ಉಭಯ ಕುಟುಂಬಗಳಿಗೆ ಬುದ್ಧಿವಾದ ಹೇಳಿ ೧೮ ವರ್ಷದ ನಂತರ ಮದುವೆ ಮಾಡಿಕೊಳ್ಳುವಂತೆ ಸಮಾಲೋಚನೆ ಮೂಲಕ ಮನವೊಲಿಸಿ ಪ್ರಕರಣ ಇತ್ಯರ್ಥಗೊಳಿಸಿ ಮುಚ್ಚಳಿಕೆ ಬರೆಸಿಕೊಂಡು ತೆರಳಿದ್ದರು ಎಂದು ವಿವರಿಸಿದರು.
ಆ ಕ್ಷಣದಲ್ಲಿ ಒಪ್ಪಿಗೆ ನೀಡಿದ ಓಂಕಾರಪ್ಪ ಕೆಲ ಸಮಯ ಕಳೆದು ಬಾಲಕಿಯ ಮನೆಗೆ ಬಂದು ಮದುವೆ ಮಾಡಿಸಿಕೊಡುವಂತೆ ಒತ್ತಡ ಹಾಕಿದ್ದಾನೆ. ಇದಕ್ಕೆ ಕುಟುಂಬಸ್ಥರು ನಿರಾಕರಿಸಿದ್ದು, ಖುದ್ದು ಮೀನಾಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾಗಿದ್ದ ಕಾರಣ ಸದ್ಯ ಮದುವೆ ಬೇಡ ಎಂಬ ಮನಸ್ಥಿತಿ ಹೊಂದಿದ್ದಳು. ಇದರಿಂದ ವಾಗ್ವಾದ ಉಂಟಾಗಿದೆ. ಕಾನೂನಿನ ಪ್ರಕಾರ ಮದುವೆ ವಯಸ್ಸು ಪೂರ್ಣಗೊಂಡ ನಂತರ ವಿವಾಹ ಮಾಡಿಸಿಕೊಡುವುದಾಗಿ ಕುಟುಂಬಸ್ಥರು ಹೇಳಿದ್ದಾರೆ. ಇದರಿಂದ ಕುಪಿತಗೊಂಡು ಅವರ ಮೇಲೆ ಹಲ್ಲೆ ಮಾಡಿ ಬಾಲಕಿಯ ಮನೆಯಲ್ಲಿದ್ದ ಕತ್ತಿಯನ್ನು ಹುಡುಕಿ ತೆಗೆದು ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿದ್ದಾನೆ. ಈ ಸಂದರ್ಭ ಪೋಷಕರಿಗೂ ಗಾಯಗಳಾಗಿವೆ ಎಂದು ಮಾಹಿತಿ ನೀಡಿದರು.
ಪೊದೆಯಲ್ಲಿ ಬಚ್ಚಿಟ್ಟಿದ್ದ ರುಂಡ ಪತ್ತೆ
ಕೊಲೆ ಮಾಡಿ ರುಂಡವನ್ನು ಹೊತ್ತೊಯ್ದ ಕೊಲೆಗಾರ ದಟ್ಟಾರಣ್ಯದಲ್ಲಿ ಮರೆಯಾಗಿದ್ದಾನೆ. ಪ್ರಕರಣದ ಕುರಿತು ಪೊಲೀಸರಿಗೆ ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿ ರುಂಡ ಹಾಗೂ ಆರೋಪಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕೃತ್ಯವೆಸಗಿದ ಆರೋಪಿ ಹಮ್ಮಿಯಾಲದ ತನ್ನ ಮನೆಗೆ ತೆರಳಿ ಬಂದೂಕು ಹಾಗೂ ತೋಟದೊಂದಿಗೆ ಪರಾರಿಯಾಗಿ ಕಾಡಿನೊಳಗೆ ಓಡಾಡುತ್ತಿದ್ದ ಎಂಬ ನಿಖರ ಮಾಹಿತಿ ಆಧಾರದಲ್ಲಿ ನಿರಂತರ ಹುಡುಕಾಟ ನಡೆಸಿ ಶನಿವಾರ ಗರ್ವಾಲೆ ಬಳಿ ಈತನನ್ನು ಬಂಧಿಸಲಾಯಿತು ಎಂದು ಎಸ್.ಪಿ. ರಾಮರಾಜನ್ ಹೇಳಿದರು.
ರುಂಡ ಸಹಿತ ಪರಾರಿಯಾಗಿದ್ದ ಹಿನ್ನೆಲೆ ಕುಂಬಾರಗಡಿಗೆಯಲ್ಲಿ ಸೂಕ್ತ ಕಟ್ಟೆಚ್ಚರ ವಹಿಸಲಾಗಿತ್ತು. ಪೊಲೀಸ್ ಪಹರೆ ಹಾಕಿ ಆರೋಪಿ ಬಂಧನಕ್ಕೆ ಮುಂದಾಗಿದ್ದೆವು. ೨ ದಿನ ಶ್ವಾನದಳದ ಮೂಲಕ ರುಂಡವನ್ನು ಪತ್ತೆಹಚ್ಚುವ ಕೆಲಸ ಮಾಡಿದ್ದೆವು. ಆದರೆ, ಸಿಕ್ಕಿರಲಿಲ್ಲ. ಇಂದು ಪೊಲೀಸರು ಕಾರ್ಯಾಚರಣೆ ನಡೆಸಿ ಘಟನೆ ನಡೆದ ಸ್ಥಳದಿಂದ ೫೦-೧೦೦ ಮೀಟರ್
(ಮೊದಲ ಪುಟದಿಂದ) ಅಂತರದ ದಟ್ಟ ಪೊದೆಯಲ್ಲಿ ಬಚ್ಚಿಟ್ಟಿದ್ದ ರುಂಡವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಬೆಳಿಗ್ಗೆ ಗರ್ವಾಲೆಯಲ್ಲಿ ಆರೋಪಿಯನ್ನು ಬಂಧಿಸಲಾಯಿತು ಎಂದು ವಿವರ ನೀಡಿದರು.
ಅಕ್ಕನ ಹತ್ಯೆಗೆ ‘ಸ್ಕೆಚ್’
ನಿಶ್ಚಿತಾರ್ಥ ನಿಲ್ಲುವಂತೆ ಮಾಡಿರುವುದು ಮೀನಾಳ ಅಕ್ಕ ಎಂದು ಅನುಮಾನಗೊಂಡ ಆರೋಪಿ ಪ್ರಕಾಶ್ ಆಕೆಯ ಹತ್ಯೆಗೂ ತೀರ್ಮಾನಿಸಿದ್ದ ಎಂಬ ಆಘಾತಕಾರಿ ವಿಚಾರವನ್ನು ವರಿಷ್ಠಾಧಿಕಾರಿ ರಾಮರಾಜನ್ ಬಿಚ್ಚಿಟ್ಟರು.
ಮದುವೆಯಾಗಿ ಪತಿಯೊಂದಿಗೆ ಗರ್ವಾಲೆಯಲ್ಲಿ ವಾಸವಿರುವ ಮೀನಾಳ ಅಕ್ಕ ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿ ನಿಶ್ಚಿತಾರ್ಥ ನಿಲ್ಲಿಸುವಂತೆ ಮಾಡಿದ್ದಾಳೆ. ಜೊತೆಗೆ ಮೀನಾಳನ್ನು ಮದುವೆಗೆ ಒಪ್ಪದಂತೆ ಒತ್ತಡ ಹಾಕಿದ್ದಾಳೆ ಎಂಬ ಅನುಮಾನ ಈತನನ್ನು ಕಾಡಲಾರಂಭಿಸಿದೆ. ಕೊಲೆ ಮಾಡಿದ ನಂತರ ‘ಲೋಡೆಡ್ ಗನ್’ನಿಂದ ಅಕ್ಕಳ ಹತ್ಯೆ ಮಾಡುವ ಸಂಚು ಈತನದ್ದಾಗಿತ್ತು ಎಂಬ ಅಘಾತಕಾರಿ ಅಂಶವನ್ನು ತಿಳಿಸಿದ ಅವರು, ಗರ್ವಾಲೆ ದಟ್ಟಾರಣ್ಯದ ನಡುವೆ ಇರುವ ಗ್ರಾಮವಾಗಿರುವ ಕಾರಣ ಈತನಿಗೆ ಅರಣ್ಯದೊಳಗೆ ಓಡಾಡಿ ಅಭ್ಯಾಸವಿತ್ತು. ಈ ಹಿನ್ನೆಲೆ ಪೊಲೀಸರ ಕೈಗೆ ಸಿಗದೆ ಕಾಡಿನಲ್ಲಿ ಬಂದೂಕಿನೊAದಿಗೆ ಓಡಾಡುತ್ತ ತಲೆಮರೆಸಿಕೊಂಡು ಅಕ್ಕನನ್ನು ಕೊಲೆ ಮಾಡಬೇಕೆಂಬ ಉದ್ದೇಶ ಹೊಂದಿದ್ದ. ಈತನನ್ನು ಬಂಧಿಸುವ ಮೂಲಕ ಮುಂದಾಗಬೇಕಾಗಿದ್ದ ಹತ್ಯೆಯನ್ನು ತಪ್ಪಿಸಿದ್ದೇವೆ ಎಂದು ಹೇಳಿದರು.
ಇಂದು ಮೃತದೇಹ ಹಸ್ತಾಂತರ
ತಾ. ೧೨ ರಂದು (ಇಂದು) ಮರಣೋತ್ತರ ಪರೀಕ್ಷೆ ಸೇರಿದಂತೆ ಇನ್ನಿತರ ಪ್ರಕ್ರಿಯೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ ರಾಮರಾಜನ್, ಘಟನೆ ನಡೆದ ಸಂದರ್ಭ ಆರೋಪಿ ಪ್ರಕಾಶ್ ಜೊತೆಗಿದ್ದ ಇನ್ನಿಬ್ಬರು ಕೃತ್ಯದಲ್ಲಿ ಭಾಗಿಯಾಗಿಲ್ಲ. ಕೊಲೆ ಮಾಡುತ್ತಾನೆ ಎಂಬ ಸುಳಿವು ಇಲ್ಲದೆ ಇವರುಗಳು ಜೊತೆಗೆ ಬಂದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆರೋಪಿ ವಿರುದ್ಧ ೩೦೨, ೩೦೭, ಪೋಕ್ಸೊ, ಶಸ್ತಾçಸ್ತç ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದರು. ೧೬ ವರ್ಷದ ಬಾಲಕಿಯನ್ನು ವಿವಾಹಕ್ಕೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಪೋಕ್ಸೊ ಕಾಯ್ದೆಯನ್ನು ಅಳವಡಿಸಲಾಗಿದೆ ಎಂದರು.