ಮಡಿಕೇರಿ, ಮೇ ೧೦ : ಖಾಸಗಿ ಜಮೀನಿನಲ್ಲಿರುವ ಸರಕಾರಿ ಮರಗಳ ಸರ್ವೆ ಕಾರ್ಯವನ್ನು ತಕ್ಷಣ ಸ್ಥಗಿತಗೊಳಿಸಬೇಕೆನ್ನುವ ಒತ್ತಾಯವಿದ್ದರೂ ಅರಣ್ಯ ಅಧಿಕಾರಿಗಳು ಸರ್ವೆಯನ್ನು ಮುಂದುವರೆಸಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮಗುವನ್ನು ಚಿವುಟಿ ತೊಟ್ಟಿಲು ತೂಗುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸುಬ್ಮಮಣ್ಯ ಉಪಾಧ್ಯಾಯ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅರಣ್ಯ ಇಲಾಖೆಯ ನಡೆ ಜಿಲ್ಲೆಯ ಕೃಷಿಕ ವರ್ಗದಲ್ಲಿ ಆತಂಕವನ್ನು ಸೃಷ್ಟಿಸಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರ ಮಾತಿಗೆ ಅಧಿಕಾರಿಗಳು ಬೆಲೆ ನೀಡಿದಂತೆ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮರಗಳ ಸರ್ವೆ ಕಾರ್ಯಕ್ಕೆ ಬೆಳೆಗಾರರ ತೀವ್ರ ವಿರೋಧವಿರುವ ಕಾರಣ ಬೆಳೆಗಾರರಿಗೆ ಬೆಂಬಲವಾಗಿ ನಿಂತ ಬಿಜೆಪಿ ಹೋರಾಟದ ಎಚ್ಚರಿಕೆ ನೀಡಿದ ನಂತರ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಭರವಸೆಯ ಮಾತುಗಳನ್ನಾಡಿದ್ದರು. ಯಾರೂ ಆತಂಕ ಪಡುವ ಅಗತ್ಯವಿಲ್ಲ, ಬೆಳೆಗಾರರಿಗೆ ವಿರುದ್ಧವಾಗಿ ಸರಕಾರ ನಡೆದುಕೊಳ್ಳುವುದಿಲ್ಲ, ಚುನಾವಣೆಯ ನಂತರ ಎಲ್ಲವನ್ನೂ ಸರಿ ಮಾಡುವುದಾಗಿ ತಿಳಿಸಿದ್ದರು.

ಆದರೆ ಅರಣ್ಯ ಅಧಿಕಾರಿಗಳು ಬೆಳೆಗಾರರ ಆಕ್ಷೇಪಕ್ಕೆ ವಿರುದ್ಧವಾಗಿ ಮರಗಳ ಸರ್ವೆ ಕಾರ್ಯ ಮುಂದುವರೆಸಿದ್ದಾರೆ. ಸಂಪಾಜೆ, ಚೆಂಬು ಮತ್ತಿತರ ಭಾಗಗಳಲ್ಲಿ ತೋಟಗಳಿಗೆ ಭೇಟಿ ನೀಡಿರುವ ಅರಣ್ಯ ಸಿಬ್ಬಂದಿ ಮರಗಳನ್ನು ಲೆಕ್ಕ ಮಾಡಿದ್ದಾರೆ. ಈ ಬೆಳವಣಿಗೆಯನ್ನು ಗಮನಿಸಿದರೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು “ಮಗುವನ್ನು ಚಿವುಟಿ ತೊಟ್ಟಿಲು ತೂಗಿ” ಸಮಾಧಾನ ಪಡಿಸುವ ನಾಟಕವಾಡುತ್ತಿದ್ದಾರೆ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದ್ದಾರೆ.