ಸೋಮವಾರಪೇಟೆ, ಮೇ ೧೦: ತಾಲೂಕಿನ ಪುಷ್ಪಗಿರಿ ಶ್ರೇಣಿ ಪ್ರದೇಶದಲ್ಲಿರುವ ಕುಮಾರಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಏ. ೨೭ ರಿಂದಲೇ ಗ್ರಾಮದ ಸುಗ್ಗಿ ಕಟ್ಟೆಯಲ್ಲಿ ಸುಗ್ಗಿ ಸಾರು ಹಾಕುವ ಮೂಲಕ ಸುಗ್ಗಿ ಹಬ್ಬಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗಿತ್ತು. ನಂತರ ಸುಗ್ಗಿ ಕಂಬಕ್ಕೆ ಊಲು ಏರಿಸುವ ಮೂಲಕ ಬೆಟ್ಟದ ದೇವರಲ್ಲಿ ಮಳೆ ಬೆಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ರಾತ್ರಿ ಸಣ್ಣ ಸುಗ್ಗಿ ಆಚರಿಸಲಾಯಿತು.

ನಂತರ ಹಬ್ಬದ ಸಂಪ್ರದಾಯದAತೆ ಹಸಿ ಮರಗಳನ್ನು ಕಡಿಯದೆ, ಒಣ ಕಡ್ಡಿಗಳನ್ನು ಮುರಿಯದೆ, ಮಣ್ಣಿನ ಕೆಲಸ ಮಾಡದೇ ಸುಗ್ಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಎಂಟು ದಿನಗಳ ನಂತರ ಮತ್ತೆ ಸುಗ್ಗಿ ಕಟ್ಟೆಗೆ ಅಲಂಕಾರ ಮಾಡಿ ರಾತ್ರಿ ವಾದ್ಯಗೋಷ್ಠಿಯೊಂದಿಗೆ ಸುಗ್ಗಿ ಕುಣಿತ, ಮಲ್ಲು ಬೆಳಗುವುದು, ಕೋಲಾಟ, ಕಾರ್ಯಕ್ರಮಗಳು ಬೆಳಗಿನ ಜಾವದವರೆಗೆ ನಡೆದವು.

ಹೊರ ಊರಿನಿಂದ ಹಬ್ಬಕ್ಕೆ ಬಂದ ನೆಂಟರು ರಾತ್ರಿ ಬೆಂಗಲು ಸಾರುವವರೆಗೆ ಮನೆಯನ್ನು ಮುಟ್ಟುವಂತಿಲ್ಲ, ಬೆಂಗಲು ಸಾರಿದ ನಂತರವೇ ಸುಗ್ಗಿ ಕಟ್ಟೆ ಒಳಗೆ ಮತ್ತು ಮನೆಯ ಒಳಗೆ ಪ್ರವೇಶಿಸಬಹುದೆಂಬ ನಿಯಮವನ್ನು ಪಾಲಿಸಿ ಸುಗ್ಗಿ ಆಚರಿಸಲಾಯಿತು.

ಸುಗ್ಗಿ ಕಟ್ಟೆಯಲ್ಲಿರುವ ಶ್ರೀ ಸಬ್ಬಮ್ಮ ದೇವಿಗೆ ಬೆಳ್ಳಿ ಮುಖದ ಕವಚ ಧರಿಸಿ, ಕುರ್ಜು ಕಟ್ಟಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಮಾರನೆ ದಿನ ಹೆದ್ದೇವರ ಗುಡಿಗೆ ತೆರಳಿ ಉದ್ಬವ ಮೂರ್ತಿಗೆ ಪೂಜೆ ಸಲ್ಲಿಸಿದ ಭಕ್ತಾದಿಗಳು ಕೆಂಡವನ್ನು ಸ್ಪರ್ಶಿಸಿ ಸುಗ್ಗಿ ಕಟ್ಟೆಗೆ ತೆರಳಿದರು.

ನಂತರ ಸುಗ್ಗಿ ಕಟ್ಟೆಯಲ್ಲಿ ಕಡವೆ ಹೊಡೆಯುವುದು, ಹುಲಿಭಂಗಿ, ಕೋಲಾಟ, ಬಿಲ್ಲು ಪ್ರದರ್ಶನ, ಸುಗ್ಗಿ ಕುಣಿತ, ಸೊಡ್ಲು ಪೂಜೆಗಳು ಶ್ರದ್ಧಾಭಕ್ತಿಯಿಂದ ನಡೆದವು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು.

ಮಾರನೆ ದಿನ ಬೆಳಿಗ್ಗೆ ಪುಷ್ಪಗಿರಿ ಬೆಟ್ಟಶ್ರೇಣಿ ತಟದಲ್ಲಿರುವ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯಕ್ಕೆ ತೆರಳಿ ಮಳೆ ಬೆಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಪ್ರಸಕ್ತ ಸಾಲಿನ ಸುಗ್ಗಿ ಸಂಪನ್ನಗೊAಡಿತು.

ಕುಮಾರಳ್ಳಿ ಗ್ರಾಮದ ಸಬ್ಬಮ್ಮ ದೇವಿ ಸುಗ್ಗಿ ಉತ್ಸವವನ್ನು ಗ್ರಾಮದ ಅಧ್ಯಕ್ಷ ಯು.ಕೆ. ದೇಶರಾಜ್, ಉಪಾಧ್ಯಕ್ಷ ಎಂ.ಎಸ್. ತಮ್ಮಯ್ಯ, ಕಾರ್ಯದರ್ಶಿ ಕಿರಣ್, ಖಜಾಂಚಿ ನವೀನ್, ಸಹ ಖಜಾಂಚಿ ಕಾರ್ಯಪ್ಪ, ಹಂಚಿನಳ್ಳಿ ನಿತಿನ್ ತಮ್ಮಯ್ಯ ಹಾಗೂ ಸಮಿತಿಯ ಸದಸ್ಯರುಗಳು, ದೇವರ ಒಡೆಕಾರರಾದ ತಮ್ಮಯ್ಯ, ಮನೋಹರ, ಈರಪ್ಪ, ಉದಯ ಕುಮಾರ್, ಗಣೇಶ, ನಾಗರಾಜು ಸೇರಿದಂತೆ ಇತರರು ಪೂಜಾ ಕಾರ್ಯ ನಿರ್ವಹಿಸಿದರು.