ಮುಳ್ಳೂರು, ಮೇ ೧೦: ಸಮೀಪದ ಹಂಡ್ಲಿ ಗ್ರಾ.ಪಂ.ಗೆ ಸೇರಿದ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನ ಬಳಿಯಲ್ಲಿ ನಡೆದಾಡುವ ದೇವರು ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀಗಳಾದ ಡಾ. ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ನಿರ್ಮಾಣದ ಕಾಮಗಾರಿ ಕಳೆದ ೨ ವರ್ಷಗಳ ಹಿಂದೆ ನಡೆಯುತ್ತಿದ್ದು, ಪುತ್ಥಳಿ ನಿರ್ಮಾಣದ ಕಾಮಗಾರಿಯನ್ನು ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಮುಗಿಸಿ ಪುತ್ಥಳಿಯನ್ನು ಅನಾವರಣಗೊಳಿಸುವ ಉದ್ದೇಶದ ಹಿನ್ನೆಲೆಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಪುತ್ಥಳಿ ನಿರ್ಮಾಣ ಸಮಿತಿ ಪದಾಧಿಕಾರಿಗಳು ಶನಿವಾರಸಂತೆ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಗೋಷ್ಠಿಯಲ್ಲಿ ಶಿವಕುಮಾರ ಸ್ವಾಮೀಜಿ ಪುತ್ಥಳಿ ಸಮಿತಿ ಗೌರವಾಧ್ಯಕ್ಷ ಮತ್ತು ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ದಾಸೋಹಿ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳ ಪುತ್ಥಳಿಯನ್ನು ಈ ಭಾಗದ ಎಲ್ಲಾ ಗ್ರಾ.ಪಂ.ಗಳ, ದಾನಿಗಳ ಸಹಕಾರದಿಂದ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಹಂಡ್ಲಿ ಗ್ರಾ.ಪಂ.ಗೆ ಸೇರಿದ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಬಳಿಯಲ್ಲಿ ಕಳೆದ ೨ ವರ್ಷಗಳಿಂದ ಪುತ್ಥಳಿ ನಿರ್ಮಾಣದ ಕಾಮಗಾರಿಯನ್ನು ನಡೆಸಲಾಗುತ್ತಿದೆ, ಶಿವಕುಮಾರ ಸ್ವಾಮೀಜಿ ಪುತ್ಥಳಿ ನಿರ್ಮಾಣ ಸಮಿತಿಯ ಮುಂದಾಳತ್ವದಲ್ಲಿ ಪುತ್ಥಳಿ ಕಾಮಗಾರಿ ನಡೆಯುತ್ತಿದೆ ಎಂದರು. ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಅವರು ಧರ್ಮ, ಜಾತಿ-ಜನಾಂಗವನ್ನು ಮೀರಿದ ತ್ರೀವಿಧ ದಾಸೋಹಿಗಳಾಗಿದ್ದು, ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಅವರ ಪುತ್ಥಳಿಯನ್ನು ನಿರ್ಮಾಣ ಮಾಡುವ ಅಗತ್ಯ ಇದ್ದ ಹಿನ್ನೆಲೆಯಲ್ಲಿ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ. ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಜಾತಿ, ಧರ್ಮ ಮರೆತು ಎಲ್ಲರೂ ಸಹಕಾರ ನೀಡಬೇಕು, ೧೬ ವರ್ಷಗಳ ಹಿಂದೆ ಡಾ. ಶಿವಕುಮಾರ ಸ್ವಾಮೀಜಿಗಳು ಗುಡುಗಳಲೆ ಜಾತ್ರಾ ಮೈದಾನಕ್ಕೆ ಬಂದಿದ್ದರು ಭಕ್ತಾದಿಗಳಿಗೆ ಉಪನ್ಯಾಸ ನೀಡಿದ್ದರು ಎಂದು ಸ್ಮರಿಸಿದ ಸ್ವಾಮೀಜಿ, ಪುತ್ಥಳಿ ನಿರ್ಮಾಣ ಕಾಮಗಾರಿಯನ್ನು ಅಕ್ಟೋಬರ್ ತಿಂಗಳ ಕೊನೆಯಲ್ಲಿ ಮುಗಿಸಿ ಪುತ್ಥಳಿಯ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಉದ್ದೇಶ ಇದೆ ಎಂದರು.
ಶಿವಕುಮಾರ ಸ್ವಾಮೀಜಿ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಎಂ.ಬಿ. ಮಂಜುನಾಥ್ ಮಾತನಾಡಿ, ದಾಸೋಹಿ ಡಾ. ಶಿವಕುಮಾರ್ ಸ್ವಾಮೀಜಿ ಅವರ ಪುತ್ಥಳಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಮಿತಿ ಸಂಘಟನಾ ಕಾರ್ಯದರ್ಶಿ ಬಿ.ಕೆ. ಮೂರ್ತಿ ಬೆಟ್ಟದಳ್ಳಿ, ಕಾರ್ಯದರ್ಶಿ ಸಂದೀಪ್ ಹೆಬ್ಬುಲುಸೆ, ಸದಸ್ಯ ರಮೇಶ್ ವಿಕ್ಕಿ ಹಾಜರಿದ್ದರು.