ಐಗೂರು, ಮೇ ೧೧ : ಕೇಂದ್ರ ಸರಕಾರದಿಂದ ಶುದ್ಧ ಕುಡಿಯುವ ನೀರಿನ ಜಲಜೀವನ್ ಮಿಷನ್ ಯೋಜನೆಯು ಐಗೂರು ಗ್ರಾಮದಲ್ಲಿ ಅಸಮರ್ಪಕವಾಗಿ ಅನುಷ್ಠಾನಗೊಂಡಿದೆ. ಕಳೆದ ವಿಧಾನಸಭಾ ಚುನಾವಣೆಗಿಂತ ಮೊದಲೇ ೫೦,೦೦೦ ಲೀಟರಿನ ಸಾಮರ್ಥ್ಯವುಳ್ಳ ಬೃಹದಾಕಾರದ ನೀರಿನ ಟ್ಯಾಂಕಿನ ಕೆಲಸ ಸಂಪೂರ್ಣ ಮುಗಿದಿದ್ದು ಇನ್ನೂ ಉದ್ಘಾಟನೆ ಆಗದ ಬಗ್ಗೆ ಐಗೂರು ವ್ಯಾಪ್ತಿಯ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಕಾಲಕ್ಕೆ ಮಳೆ ಬೀಳದೆ ಇಲ್ಲಿಯ ಚೋರನ ಹೊಳೆಯು ಬತ್ತಿ ಹೋಗಿದ್ದು ಗ್ರಾಮಸ್ಥರಿಗೆ ಹೊಳೆಯಿಂದ ನೀರಿನ ಪ್ರಯೋಜನವೂ ಸಿಗುತ್ತಿಲ್ಲ. ಬಿಸಿಲಿನ ತಾಪ ಅಧಿಕವಾಗಿದ್ದು ಜಲಮೂಲಗಳು ಬತ್ತಿ ಹೋಗಿದ್ದು ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಯ ಸರಬರಾಜು ಸಮರ್ಪಕವಾಗಿ ಕಂಡುಬರುತ್ತಿಲ್ಲ . ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಗ್ರಾಮದ ಎಲ್ಲಾ ಭಾಗಗಳಲ್ಲೂ ಭೂಮಿಯೊಳಗೆ ಅಳವಡಿಸಿರುವ ನೀರಿನ ಪ್ಲಾಸ್ಟಿಕ್ ಪೈಪುಗಳು ಒಡೆದು ಹೋಗಿ ಈ ಬಗ್ಗೆ ಗ್ರಾಮಸ್ಥರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

(ಮೊದಲ ಪುಟದಿಂದ) ಈ ಭೂಮಿ ಒಳಗೆ ಅಳವಡಿಸಿರುವ ಪೈಪುಗಳು ಸುಮಾರು ೪೦ ವರ್ಷಗಳ ಹಳೆಯ ಕಾಲದ ಪೈಪುಗಳಾಗಿದ್ದು, ಕಳಪೆಯ ಈ ಪೈಪುಗಳು ಗುಣಮಟ್ಟವನ್ನು ಕಳೆದುಕೊಂಡು ಪದೇ ಪದೇ ಒಡೆದು ಹೋಗುತ್ತಿವೆ. ವರ್ಷವಿಡಿ ನೀರು ಗಂಟಿ (ವಾಟರ್ ಮ್ಯಾನ್)ಗಳು ಪೈಪುಗಳಿಗೆ ಗಮ್ ಅಂಟಿಸುವ ಕೆಲಸದಲ್ಲಿ ನಿರತರಾಗಿರುತ್ತಾರೆ ಎಂದು ಗ್ರಾಮಸ್ಥರಾದ ಎನ್.ಆರ್. ಹರೀಶ್ ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಜೂರು ಭಾಗದಲ್ಲಿ ಮನೆಗಳಿಗೆ ನೀರಿನ ಮೀಟರ್ ಅಳವಡಿಸಲಾಗಿದ್ದು ಕಳೆದ ಎರಡು ವರ್ಷದಿಂದ ಮೀಟರಿನ ಚಾಲನೆಯ ಕೆಲಸಕ್ಕೆ ಯಾರೂ ಬಂದಿರುವುದಿಲ್ಲ ಎಂದು ಗ್ರಾಮಸ್ಥರಾದ ಕೆ.ಯು. ಸೊಮೇಶ್ ಅವರು ದೂರಿದ್ದಾರೆ. ನೀರು ಗಂಟಿಗಳಿಗೆ ಪೈಪಿನ ದುರಸ್ತಿ ಕೆಲಸಕ್ಕೆ ಬೇಕಾದ ವಸ್ತುಗಳ ಶೇಖರಣೆಯು ಪಂಚಾಯಿತಿಯಲ್ಲಿ ಇರುವುದಿಲ್ಲ. ಆದ್ದರಿಂದ ಕೆಲಸಗಳಲ್ಲಿ ವಿಳಂಬವಾಗುತ್ತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ನೀರುಗಂಟಿಗಳಿಗೆ ಸಿಗುವ ಸಂಬಳವವು ಕಡಿಮೆಯಾಗಿದ್ದು ನೀರು ಗಂಟಿಗಳು ಪದೇ ಪದೇ ಬದಲಾಗುತ್ತಿದ್ದಾರೆ. ಐಗೂರಿನಲ್ಲಿ ನೀರಿನ ಸಮಸ್ಯೆ ಹೇಳಿಕೊಳ್ಳಲು ಪಂಚಾಯಿತಿಯ ಪಿ.ಡಿ.ಓ. ಅವರು ಜನರ ಕೈಗೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಐಗೂರು ವ್ಯಾಪ್ತಿಯ ವಿಜಯನಗರ ಮತ್ತು ನರ್ಸರಿ ರಸ್ತೆಯ ನಿವಾಸಿಗಳಿಗೆ ಕೆಲವು ಸಂದರ್ಭದಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ೪ ರಿಂದ ೬ ದಿನ ಕಾಯುವ ಸ್ಥಿತಿ ಉಂಟಾಗಿದೆ . ನಿಯಮದ ಪ್ರಕಾರ ಜಲಜೀವನ್ ಮಿಷನ್ ಅಡಿಯಲ್ಲಿ ಕೆಲಸ ಪ್ರಾರಂಭಿಸುವಾಗ ಗ್ರಾಮದಲ್ಲಿ ಭೂಮಿಯ ಅಡಿಯಲ್ಲಿ ಹುದುಗಿರುವ ಎಲ್ಲಾ ಹಳೆಯ ನೀರಿನ ಪೈಪುಗಳನ್ನು ತೆಗೆದು ಹೊಸ ಪೈಪುಗಳನ್ನು ಅಳವಡಿಸಬೇಕೆಂಬ ನಿಯಮವಿದ್ದರೂ ಈ ನಿಯಮವನ್ನು ಗಾಳಿಗೆ ತೂರಿ ಹಳೆಯ ಪೈಪುಗಳನ್ನೇ ಬಳಸಿಕೊಂಡು ವರ್ಷವಿಡೀ ಆಯುಷ್ಯ ಕಳೆದುಕೊಂಡಿರುವ ಸ್ಥಿತಿಯಲ್ಲಿರುವ ಈ ಹಳೇ ಪೈಪುಗಳು ಪದೇ ಪದೇ ಒಡೆದು ಹೋಗಿ ಕೆಲಸದ ವೆಚ್ಚ ಅಧಿಕವಾಗುತ್ತಿದೆ. ಬೇಸಿಗೆ ಸಮಯದಲ್ಲಿ ಗ್ರಾಮಸ್ಥರಿಗೆ ದಿನನಿತ್ಯದ ಕೆಲಸಗಳಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇದ್ದು ಪಂಚಾಯಿತಿಯ ಟ್ಯಾಂಕಿ ನಲ್ಲಿ ಶೇಖರಣೆಗೊಂಡ ನೀರು ಪೋಲಾಗದಂತೆ ಇರಬೇಕಾದರೆ ಭೂಮಿಯ ಒಳಗೆ ಹುದುಗಿರುವ ಹಳೆಯ ಕಾಲದ ನೀರಿನ ಪೈಪುಗಳನ್ನು ಬದಲಾಯಿಸುವುದು ಸೂಕ್ತ ವಾಗಿದೆ. ಇಲ್ಲದಿದ್ದರೆ ನೀರು ಗಂಟಿ (ವಾಟರ್ ಮ್ಯಾನ್)ಗಳು ವರ್ಷವಿಡೀ ಈ ಹಳೇ ಪೈಪುಗಳ ದುರಸ್ತಿ ಕೆಲಸ ಮಾಡಿಕೊಂಡು ಕಾಲ ಕಳೆಯಬೇಕಾಗುತ್ತದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. -ಸುಕುಮಾರ