ಸೋಮವಾರಪೇಟೆ, ಮೇ ೧೦: ಕುಸುಬೂರು ಸಮೀಪದ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಅರಣ್ಯ ಇಲಾಖೆ ಯಾವುದೇ ಕ್ರಮವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ೨೦ ದಿನಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ ಕಾಡಾನೆಗಳು, ನಾಲ್ಕು ದಿನಗಳಿಂದ ಇಲ್ಲೇ ಬೀಡುಬಿಟ್ಟಿವೆ. ಜನವಸತಿ ಹಾಗೂ ಕೃಷಿ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದು, ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ರಸ್ತೆಯಲ್ಲಿ ತೆರಳಲು ಭಯಪಡುವಂತಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಕಾಡಾನೆಗಳ ಹಾವಳಿಯಿಂದ ನೆಮ್ಮದಿ ಇಲ್ಲದಂತಾಗಿದೆ. ಕಾಜೂರು, ಯಡವಾರೆ ಅರಣ್ಯ ಭಾಗದಲ್ಲಿದ್ದ ಆನೆಗಳು ಇದೀಗ ಕುಸುಬೂರು, ಕಾಟ್ನಮನೆ ವ್ಯಾಪ್ತಿಯಲ್ಲಿ ಬೀಡುಬಿಟ್ಟಿವೆ. ತಕ್ಷಣ ಇವುಗಳನ್ನು ಅರಣ್ಯಕ್ಕೆ ಅಟ್ಟಬೇಕೆಂದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖಾಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.