ಮಡಿಕೇರಿ, ಮೇ ೧೧: ಪ್ರಸ್ತುತ ಶಾಲಾ ಮಕ್ಕಳಿಗೆ ರಜಾದಿನಗಳು. ಈ ಹಿಂದಿನ ಕಾಲದಲ್ಲಿ ರಜೆ ಅವಧಿ ಬಂತೆAದರೆ ಬಂಧು ಬಳಗದವರ ಮನೆಗಳಿಗೆ ತೆರಳುವ, ಹಬ್ಬ ಹರಿದಿನಗಳಲ್ಲಿ ಪರಸ್ಪರ ಭಾಗಿಯಾಗುವ ಮೂಲಕ ಹಾಗೂ ಇನ್ನಿತರ ಸಮಾರಂಭಗಳ ಸಂಭ್ರಮದ ನಡುವೆ ರಜಾದಿನಗಳು ಮುಗಿದು ಮತ್ತೆ ಶಾಲೆಗಳತ್ತ ಮಕ್ಕಳು ಮುಖಮಾಡುತ್ತಿದ್ದರು. ಆದರೆ ಕಾಲ ಬದಲಾದಂತೆ ಈಗಿನ ಸನ್ನಿವೇಶದಲ್ಲಿ ಎಲ್ಲರೂ ಅವರವರ ಪಾಡಿಗೆ, ತಮ್ಮತಮ್ಮ ಮನೆಗಳಲ್ಲಿ ಕಾಲ ಕಳೆಯುವಂತಾಗಿದೆ. ನೆಂಟರಿಷ್ಟರ ಮನೆಗೆ ತೆರಳುವುದು ಬಹುತೇಕ ಇಲ್ಲ ಎನ್ನುವಂತಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳು ಒಂದೋ ಈಗಿನ ಆಧುನೀಕತೆಯ ಭರಾಟೆಯ ನಡುವೆ ಮೊಬೈಲ್ನಲ್ಲೇ ಕಾಲಕಳೆಯುವುದು, ಟಿ.ವಿ ನೋಡುವುದು ಇಂತಹ ವಿಚಾರಗಳಲ್ಲೇ ಮುಳುಗಿರುತ್ತಾರೆ. ಆದರೆ ಕ್ರೀಡಾ ಜಿಲ್ಲೆ ಖ್ಯಾತಿಯ ಕೊಡಗಿನ ಚಿತ್ರಣ ಇದಕ್ಕೆ ಹೊರತಾಗಿದೆ. ಕೆಲವಾರು ವರ್ಷಗಳಿಂದ ಜಿಲ್ಲೆಯಾದ್ಯಂತ ಜನಾಂಗೀಯ ಕ್ರೀಡಾಕೂಟಗಳು, ಇನ್ನಿತರ ಕ್ರೀಡಾಕೂಟಗಳು ಹೆಚ್ಚಾಗಿ ನಡೆಯುತ್ತಿರುವುದು ಮುಂದುವರಿಯುತ್ತಿದೆ. ಇಂತಹ ಕ್ರೀಡಾಕೂಟಗಳು ಇದೀಗ ಮಕ್ಕಳು ಮಾತ್ರವಲ್ಲ, ಪೋಷಕರುಗಳು ಕೂಡ ತಮ್ಮ ಮಕ್ಕಳನ್ನು ಕ್ರೀಡಾಮೈದಾನಗಳತ್ತ ಸೆಳೆಯುವಂತೆ ಮಾಡುತ್ತಿದೆ. ಇದಕ್ಕೆ ಪೂರಕ ಎಂಬAತೆ ಬೇಸಿಗೆ ಬಂದರೆ ಸಾಕು.. ಬಹುತೇಕ ಕಡೆಗಳಲ್ಲಿ ಕ್ರೀಡಾ ಶಿಬಿರಗಳ ಕಲರವವೂ ಆರಂಭವಾಗುತ್ತವೆ. ಹಾಕಿ, ಕ್ರಿಕೆಟ್, ಶಟಲ್, ಫುಟ್ಬಾಲ್, ಈಜು, ಟೇಬಲ್ ಟೆನ್ನಿಸ್, ಅಥ್ಲೆಟಿಕ್ಸ್ ನಂತಹ ಬಗೆಬಗೆಯ ಕ್ರೀಡಾ ಶಿಬಿರಗಳು ಹಲವಾರು ಕಡೆಗಳಲ್ಲಿ ನಡೆಯುವಂತಾಗಿದ್ದು, ಬೆಳಿಗ್ಗೆ-ಸಂಜೆ ವೇಳೆ ಮಕ್ಕಳು ಇಂತಹ ಶಿಬಿರಗಳಲ್ಲಿ ತರಬೇತಿ ಪಡೆಯುವುದು ಕ್ರೀಡಾ ಸಾಧನೆಗೂ ನೆರವಾಗುತ್ತಿವೆ. ನಗರ-ಪಟ್ಟಣಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲ್ಪಡುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಹಿಡಿದು ಗ್ರಾಮೀಣ ಪ್ರದೇಶವಾದ ಹುದಿಕೇರಿ-ಬಿರುನಾಣಿಯಂತಹ ಪ್ರದೇಶಗಳಲ್ಲೂ ಕ್ರೀಡಾ ಶಿಬಿರಗಳು ಆಯೋಜಿಸಲ್ಪಡುತ್ತಿವೆ.
ಅದರಲ್ಲೂ ವಿಶೇಷವಾಗಿ ಹಾಕಿ ಶಿಬಿರಗಳಿಗೆ ಈಗಿನ ದಿನಗಳಲ್ಲಿ ಹೆಚ್ಚಿನ ಒತ್ತು ಕಂಡುಬರುತ್ತಿದೆ. ಖ್ಯಾತ ತರಬೇತುದಾರರೂ ಶಿಬಿರಗಳಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ. ಮಡಿಕೇರಿ, ನಾಪೋಕ್ಲು, ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪಲು, ಹುದಿಕೇರಿ, ಬಿರುನಾಣೆ, ಸೋಮವಾರಪೇಟೆ ಈ ರೀತಿಯಾಗಿ ಹೆಚ್ಚಿನ ಕಡೆಗಳಲ್ಲಿ ನೂರಾರು ಮಕ್ಕಳು ಹಾಕಿ ಸ್ಟಿಕ್ ಹಿಡಿದು ಮೈದಾನದಲ್ಲಿ ಕಂಡುಬರುತ್ತಾರೆ. ಹಾಕಿಯೊಂದಿಗೆ ಈಗೀಗ ಕ್ರಿಕೆಟ್, ಫುಟ್ಬಾಲ್, ಶಟಲ್ ಬ್ಯಾಡ್ಮಿಂಟನ್, ಈಜು ತರಬೇತಿ ಶಿಬಿರಗಳ ಸಂಖ್ಯೆಯೂ ಹೆಚ್ಚುತ್ತಿವೆ. ಪೋಷಕರಿಗೆ ಈ ಶಿಬಿರಗಳಲ್ಲಿ ಮಕ್ಕಳನ್ನು ಸೇರಿಸಲು ಒಂದಷ್ಟು ಹೊರೆ ಎನಿಸಿದರೂ ಬಹುತೇಕ ಕಡೆಗಳಲ್ಲಿ ಶಿಬಿರಗಳು ಉಚಿತವಾಗಿರುತ್ತವೆ. ಕ್ರೀಡಾ ಶುಲ್ಕ ಇದ್ದರೂ ಹಲವಾರು ಮಂದಿ ಅಗತ್ಯತೆಗಳನ್ನು ಪ್ರಾಯೋಜಕತ್ವದ ಮೂಲಕವೂ ನೀಡಿ ಹುರಿದುಂಬಿಸುತ್ತಿದ್ದಾರೆ. ಮಕ್ಕಳು ಮೊಬೈಲ್ ಬಳಕೆಯಲ್ಲೇ ನಿರತ ರಾಗುವುದು, ಟಿ.ವಿ. ವೀಕ್ಷಣೆಯಲ್ಲೇ ಮುಳುಗುವ ಪರಿಸ್ಥಿತಿ ಇಂತಹ ಕ್ರೀಡಾ ಶಿಬಿರಗಳಿಂದ ತಪ್ಪುತ್ತಿವೆ. ಕೊಡಗಿನಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಕೂಡ ಇರುವುದು ಮಕ್ಕಳಿಗೆ ಎಳೆ ವಯಸ್ಸಿನಲ್ಲೇ ಕ್ರೀಡೆಯತ್ತ ಆಸಕ್ತಿ ಮೂಡಿಸಿ ಕೊಳ್ಳುವತ್ತಲೂ ಕಾರಣವಾಗುತ್ತಿವೆ. ಕೆಲವಾರು ಶಿಬಿರಗಳು ಈಗಾಗಲೇ ಮುಕ್ತಾಯವೂ ಆಗಿವೆ. ಇಂತಹ ಶಿಬಿರಗಳ ಮೂಲಕ ಉತ್ತಮ ಕ್ರೀಡಾಪಟುಗಳು ರೂಪು ಗೊಳ್ಳುವಂತಾಗಲಿ ಎಂಬುದು ಆಶಯ.
- ಶಶಿ ಸೋಮಯ್ಯ