ಕಾಲ ಮಿಂಚಿದೆ. ಯಾರು ಅತ್ತರೂ, ತಪ್ಪು ಯಾರದೆಂದು ಬೊಟ್ಟು ಮಾಡಿದರೂ, ಊರಿನಲ್ಲಿ ಪೊಲೀಸ್ ಸಿಬ್ಬಂದಿ ಠಿಕಾಣಿ ಹೂಡಿದರೂ ಮುರುಟಿಹೋದ ವಿದ್ಯಾರ್ಥಿನಿ ಮೀನಾ ಜೀವ ಮರಳಿಬಾರದು.
ಇದೊಂದು ಬರ್ಬರ ಹತ್ಯೆ. ನಿಶ್ಚಿತಾರ್ಥವನ್ನು ಊರವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ ಮೃಗೀಯ ಜೊತೆಗಾರನೇ ಕತ್ತಲಾಗುವದರೊಳಗೆ ಸಂಗಾತಿಯ ರುಂಡ - ಮುಂಡ ಬೇರ್ಪಡಿಸಿ, ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ,. ಆಪಾದಿತ ಪ್ರಕಾಶ. ಆತನಿಗೆ ಅತ್ಯಂತ ಕಠಿಣ ಶಿಕ್ಷೆ ಆಗಬೇಕೆಂದು ಎಲ್ಲೆಡೆಯಿಂದ ಕೂಗು ಕೇಳಿಬರುತ್ತಿದೆ. ಆತ ‘‘ಎನ್‌ಕೌಂಟರ್’’ ಆಗಿದ್ದರೂ ಜನ ಮೆಚ್ಚುತ್ತಿದ್ದರು. ಆದರೆ ಅಂತಹ ಎದೆಗಾರಿಕೆಗೆ ಬೇಕಾದ ಹಿನ್ನೆಲೆಯ ವ್ಯವಸ್ಥೆ ನಮ್ಮಲ್ಲಿಲ್ಲ.
ತಪ್ಪು ಕೊಲೆಗಾರನೊಬ್ಬನದೇ? ಮೊನ್ನೆ ಮಚ್ಚು ಬಳಸಿ ಜೀವ ಚೆಂಡಾಡಿದ ವ್ಯಕ್ತಿ ಪ್ರತ್ಯಕ್ಷ ತಪ್ಪಿತಸ್ಥ. ಆದರೆ ಒಬ್ಬ ಅಪ್ರಾಪ್ತೆಗೆ ತಾಳಿಕಟ್ಟಲು ಒಪ್ಪಿದ, ಪ್ರೇರೇಪಿಸಿದ ಇಬ್ಬರು ಪೋಷಕರೂ ದಿವ್ಯ ಬೇಜವಾಬ್ದಾರಿ ಮೆರೆದಿದ್ದಾರೆ. ಕಾನೂನಿನ ಅರಿವಿರುವ ನೆಂಟರು, ಆಪ್ತರು ಅಪ್ರಾಪ್ತೆಯ ನಿಶ್ಚಿತಾರ್ಥದಲ್ಲಿ ಭಾಗವಹಿಸಿ, ಉಂಡು ಮೌನವಾಗಿ ಮರಳಿದ್ದಾರೆ.
ಮೀನಾ ಮತ್ತು ಪ್ರಕಾಶ್ ಒಬ್ಬೊಬ್ಬರೇ ಮನೆಯಲ್ಲಿ ಇದ್ದರೂ, ಊರಿಡೀ ಜೊತೆ ಅಡ್ಡಾಡಿದರೂ ಗಮನಿಸದಂತೆ ಇದ್ದವರು ನಿಶ್ಚಿತಾರ್ಥ ಆದ ಬಳಿಕ ಸಹಾಯವಾಣಿಗೆ ದೂರು ನೀಡಿದ್ದಾರೆ. ಅತ್ಯಂತ ಜವಾಬ್ದಾರಿಯಿಂದ ನಾಳಿನ ಪರಿಣಾಮ ಊಹಿಸಿ ಮಾತನಾಡಬೇಕಿದ್ದ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿಗಳು ಗಿಳಿಪಾಠದಂತೆ, ಸಂವೇದನಾ ರಹಿತವಾಗಿ ಕಾನೂನು ವಿಚಾರ ತಿಳಿಸಿ ‘‘ಕರ್ತವ್ಯ’’ ಮುಗಿಸಿದ್ದಾರೆ. ಇವರುಗಳೆಲ್ಲ ಜವಾಬ್ದಾರಿ ಮರೆದಿದ್ದರೆ, ಪ್ರೀತಿಸಿದ ಜೋಡಿಯನ್ನು ಹದ್ದುಬಸ್ತಿನಲ್ಲಿ ಇರಿಸಿದ್ದರೆ, ಇಲಾಖೆಯವರು ಕೆಲದಿನದ ಮಟ್ಟಿಗೆ ಯುವತಿಯನ್ನು ರಕ್ಷಣೆಯಲ್ಲಿ ಇರಿಸಿಕೊಂಡಿದ್ದರೆ ಈ ದುರಂತ ತಡೆಯಬಹುದಿತ್ತು. ನ್ಯಾಯಾಲಯಕ್ಕೆ ಒಯ್ಯಲಾಗದ ಪರೋಕ್ಷ ತಪ್ಪುಗಳು ಇವರಲ್ಲಡಗಿದೆ.
ರಾಮ, ಕೃಷ್ಣ, ಅಲ್ಲಾ, ಕ್ರಿಸ್ತ ಎಂದು ಪ್ರಾರ್ಥಿಸುವ ಮಂದಿ ಅನೇಕ ಸಂದರ್ಭ ಧರ್ಮದ ಹೆಸರಿನಲ್ಲಿ ಪರಸ್ಪರ ಸಮರ ಸಾರುವುದನ್ನು ನಾವು ನೋಡುತ್ತೇವೆ. ಇದರಿಂದ ಧರ್ಮವು ಸುಖೀ ಜೀವನ, ಸುಖೀ ಸಮಾಜ ನಿರ್ಮಾಣ ಮಾಡುವ ಗುರಿತಪ್ಪಿ ವ್ಯತಿರಿಕ್ತ ಹಾದಿಯಲ್ಲಿ ಸಾಗುವುದನ್ನು ಕೂಡ ಗಮನಿಸುತ್ತೇವೆ.
ಧರ್ಮಗಳು ಬೋಧಿಸುವ ಸಂಸಾರ ನೀತಿ, ಕಾನೂನಿನ ಮಿತಿ, ಮಾನವೀಯತೆ, ಒಗ್ಗಟ್ಟು ದೂರದ ಮಾತಾಗಿದೆ. ಧರ್ಮ, ರಾಷ್ಟç, ಸಾಮಾಜಿಕ ಜಾಲತಾಣ, ವಿಶ್ವದ ವಿಚಾರ ಅರಿತರೆ ಜೀವನ ಪಾವನ ಎಂದು ಭ್ರಮಿಸುತ್ತಿರುವ ಸಮಾಜದ ಅನೇಕ ಮಂದಿಗೆ ಆಪ್ತವಲಯಗಳಲ್ಲಿ, ಕುಟುಂಬದಲ್ಲಿ ದುರ್ಬಲತೆ, ಅಸಹಾಯಕತೆ, ಅಸಮಾನತೆ, ಕ್ರೌರ್ಯ ಲಾವಾರಸದಂತೆ ತಳದಿಂದ ಮೇಲೇಳುತ್ತಿರುವುದು ಕಾಣದಾಗಿದೆ.
ಪರಿಸ್ಥಿತಿ ಬದಲಾಗಬೇಕು
ಸಮಾಜದ ಚಿಂತನಾ ವೈಖರಿ ಬದಲಾಗಬೇಕು. ಈ ಹಿಂದೆ ಕುಟುಂಬದ ಹಿರಿಯನ ಮಾತು ಮೀರದೆ ಬದುಕುತ್ತಿದ್ದ ಕ್ರಮ ಮರಳಿ ಬರಬೇಕು. ಹಿರಿಯರೂ ಖುದ್ದಾಗಿ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಕಾಟಾಚಾರಕ್ಕೆ ಕರ್ತವ್ಯ ಮೆರೆಯುವ ಕೆಲವು ಇಲಾಖಾ ಅಧಿಕಾರಿಗಳು, ಇಲಾಖೆಗಳು ಸುಖೀಸಮಾಜ ಕಟ್ಟುವಲ್ಲಿ ಶ್ರಮಿಸಬೇಕು.
ಉಡ್‌ಜಾಯೇಗಾ...
ಸಂತ ಕಬೀರ್ ಒಂದು ಹಾಡಿನಲ್ಲಿ ‘‘ಉಡ್‌ಜಾಯೇಗಾ ಹಂಸ ಅಖೇಲ, ಎ ಜಗ್ ದರ್‌ಶನ್‌ಕಾ ಮೇಲಾ’’ ಎಂದು ಜೀವನ ಸತ್ಯವನ್ನು ಸುಂದರವಾಗಿ ಬರೆದಿದ್ದಾನೆ. ಸಾಮ್ರಾಜ್ಯಗಳನ್ನು ಗೆದ್ದು - ಆಳಿದವರು ಇಂದು ಇಲ್ಲ, ಹಲವು ಮಿಲಿಯ ಸಂಪಾದಿಸಿದವನ ಆರೋಗ್ಯ ಸರಿಪಡಿಸಲು ಆಗುತ್ತಿಲ್ಲ. ‘‘ಅಪ್ಪಾ ಅಪ್ಪಾ’’ ಎಂದು ಆರ್ತನಾದಗೈಯ್ಯುತ್ತಾ, ಕೊಲೆಗೊಳಗಾಗುತ್ತಾ ಗೋಗರೆಯುತ್ತಿದ್ದ ಮೀನಾ - ಅಪ್ಪ, ಅಮ್ಮಂದಿರಿAದ ೧೫೦ ಅಡಿ ದೂರದಲ್ಲೇ ನರಳಾಡುತ್ತಾ ಕೊನೆಯುಸಿರೆಳೆದರೂ ಅಲ್ಲೇ ಇದ್ದ ಸ್ವಂತ ತಂದೆ, ತಾಯಿಗೂ ಆಕೆಯನ್ನು ರಕ್ಷಿಸಲಾಗಲಿಲ್ಲ!
ಈ ಜೀವನ ನೀರಗುಳ್ಳೆಯಂತೆ, ಯಾವುದೇ ಕ್ಷಣಕ್ಕೂ ಇಲ್ಲದಾಗುತ್ತದೆ. ಇದ್ದಷ್ಟು ದಿನ ಪ್ರೀತಿ, ಭಕ್ತಿ, ಗೌರವದಿಂದ ಬಾಳ್ವೆ ನಡೆಸಬೇಕು. ಮದುವೆಯೇ ಸರ್ವಸ್ವವಾಗಿದ್ದರೆ ಭಾರೀ ಕಲ್ಪನೆಗಳನ್ನು ಹೊತ್ತು ಮದುವೆಯಾಗುವ ಇಂದಿನ ಯುವಪೀಳಿಗೆ ಸಾಲುಸಾಲಾಗಿ ವಿಚ್ಛೇದನ ನೀಡುತ್ತಿರಲಿಲ್ಲ ಎಂಬ ಸತ್ಯವನ್ನು ಪೋಷಕರು, ಊರವರು, ಹಿರಿಯರು, ಕಿರಿಯರೊಂದಿಗೆ ಆಗಿಂದಾಗ್ಗೆ ಚರ್ಚಿಸುವ ಅಭ್ಯಾಸ, ಪ್ರಬುದ್ಧತೆ ಇದ್ದಿದ್ದಾರೆ ಮೀನಾ ನಾಳೆ ಪಿಯು ಪ್ರವೇಶಿಸುತ್ತಿದ್ದಳು.
ಸಮಾಜದಲ್ಲಿ ಅಜ್ಞಾನದ ಕೊರತೆ ಅಳಿಯಬೇಕು. ಎಲ್ಲಾ ಧರ್ಮಗಳೂ ಜೀವನದ ಮೌಲ್ಯ ಸಾರುವ, ಮಾನವೀಯತೆ ಗೌರವಿಸುವ, ಸಮಾನ ಪ್ರೀತಿ - ಪ್ರೇಮ ಬೆಳೆಸುವ ಅಧ್ಯಾತ್ಮಿಕ ಜ್ಞಾನವನ್ನು ಕಡ್ಡಾಯವಾಗಿ ಪ್ರಚುರÀಪಡಿಸಬೇಕು.
- ಬಿ.ಜಿ. ಅನಂತ ಶಯನ
ಸಲಹಾ ಸಂಪಾದಕ