ಪೊಲೀಸರಿಂದ ‘ಬಿ' ವರದಿ ಸಲ್ಲಿಕೆ
ಮಡಿಕೇರಿ, ಮೇ ೧೦: ಪೊನ್ನಂಪೇಟೆ ತಾಲೂಕಿನ ತಿತಿಮತಿ ಸಮೀಪದ ಭದ್ರಗೋಳ ಗ್ರಾಮದಲ್ಲಿ ೨೦೨೨ರ ಅಕ್ಟೋಬರ್ ತಿಂಗಳಲ್ಲಿ ನಡೆದ ಮೂಡಗದ್ದೆ ಯಶ್ವಂತ್ ಕುಮಾರ್ ಸಾವು ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯು ಯಶ್ವಂತ್ ಕುಮಾರ್‌ನನ್ನು ಕೊಲೆ ಮಾಡಿರುವುದನ್ನು ದೃಢೀಕರಿಸುವ ಯಾವುದೇ ಸಾಕ್ಷಾö್ಯಧಾರಗಳು ಲಭ್ಯವಾಗದಿರುವುದರಿಂದ ಈ ಪ್ರಕರಣವನ್ನು ಕೊಲೆ ಅಲ್ಲ ಎಂದು ನಿರ್ಧರಿಸಿರುವ ಪೊಲೀಸ್ ತನಿಖೆ ಪೊನ್ನಂಪೇಟೆಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ‘ಬಿ' ಅಂತಿಮ ವರದಿ ಸಲ್ಲಿಸಿದೆ.
ಘಟನೆಯ ವಿವರ: ನನ್ನ ಗಂಡನಾದ ಮೂಡಗದ್ದೆ ಯಶ್ವಂತ್ ಕುಮಾರ್ ದಿನಾಂಕ ೩.೧೦.೨೦೨೨ರಂದು ರಾತ್ರಿ ೧೦.೩೦ ಗಂಟೆಗೆ ಮೊಬೈಲ್ ನಲ್ಲಿ ಮಾತನಾಡಿಕೊಂಡಿದ್ದಾಗ ಪಕ್ಕದ ಮನೆಯ ಕಿರಣ್ ಚಿಣ್ಣಪ್ಪ ಎಂಬಾತ ಕತ್ತಲಿನಲ್ಲಿ ಬಂದು ನನ್ನ ಗಂಡನ ತಲೆಯ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಗಂಡನನ್ನು ಕತ್ತಲಿನಲ್ಲಿ ಎಳೆದೊಯ್ದಿದ್ದಾನೆ. ನಾನು ಮತ್ತು ಮಗಳು ಕತ್ತಲಿನಲ್ಲಿ ರಾತ್ರಿ ಎಷ್ಟೇ ಹುಡುಕಿದರೂ ಪತ್ತೆಯಾಗುವುದಿಲ್ಲ. ಅಲ್ಲದೆ ಮರು ದಿನ ತೋಟ ಮತ್ತು ಕೆರೆ ಕಡೆ ಹುಡುಕಾಡಿದರೂ ಗಂಡ ಪತ್ತೆಯಾಗಿಲ್ಲ ಎಂದು ಯಶ್ವಂತ್‌ಕುಮಾರ್ ಪತ್ನಿ ಮಲ್ಲಿಕಾ ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಗೋಣಿಕೊಪ್ಪಲು ಪೊಲೀಸ್ ಠಾಣೆಯ ಮೊಕದ್ದಮೆ ಸಂಖ್ಯೆ ೧೩೯/೨೦೨೨ರ ಐಪಿಸಿ ಕಲಂ ೩೨೪ ಮತ್ತು ೩೬೩ ರಂತೆ ದೂರು ದಾಖಲಾಯಿತು.
ದಿನಾಂಕ ೭.೧೦.೨೦೨೨ರಂದು ಬೆಳಿಗ್ಗೆ ಮತ್ತೆ ಠಾಣೆಗೆ ಬಂದ ಪಿರ್ಯಾದಿ ಮಲ್ಲಿಕಾ, ದಿ. ೦೭.೧೦.೨೦೨೨ ರಂದು ಬೆಳಿಗ್ಗೆ ಸಮಯ ೯.೩೦ ಗಂಟೆಗೆ ನನ್ನ ಗಂಡ ಯಶ್ವಂತ್ ಕುಮಾರ್ ಅವರ ಮೃತ ಶರೀರವು ಮನೆಗೆ ಸ್ವಲ್ಪ ದೂರವಿರುವ ಅಡಿಕೆ ತೋಟದಲ್ಲಿ ಪತ್ತೆ ಆಗಿರುತ್ತದೆ. ಕೆಲಸಗಾರರೊಬ್ಬರು ನೀಡಿದ ಮಾಹಿತಿಯ ಮೇರೆಗೆ ನಾನು ಮತ್ತು ಸಂಬAಧಿಕರು ಹೋಗಿ ನೋಡಿದಾಗ ಅದು ನನ್ನ ಗಂಡನ ಮೃತ ಶರೀರ ಎಂದು ಖಚಿತಗೊಂಡಿರುತ್ತದೆ. ಅದರಿಂದ ಈ ಕುರಿತು ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಲಾಗಿತ್ತು.
ಈ ಬಗ್ಗೆ ಅಂದಿನ ಗೋಣಿಕೊಪ್ಪಲು ವೃತ್ತನಿರೀಕ್ಷ ಎಂ.ವಿ. ಗೋವಿಂದರಾಜು ತನಿಖೆ ಆರಂಭಿಸಿದರು. ಆರೋಪಿ ಹಾಗೂ ದೂರುದಾರರೂ ಸೇರಿದಂತೆ ೬ ಜನರನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಯಿತು.
ದೀರ್ಘ ತನಿಖೆ ಹಾಗೂ ವಿಚಾರಣೆ ಬಳಿಕ ಆರೋಪಿಯೇ ಕೊಲೆ ಮಾಡಿರುವ ಬಗ್ಗೆ ಸೂಕ್ತ ಸಾಕ್ಷಾö್ಯಧಾರಗಳು ಇಲ್ಲವೆಂದು ಪೊಲೀಸರು ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದ್ದಾರೆ.