ಗೋಣಿಕೊಪ್ಪಲು, ಮೇ ೧೧: ಕುಟ್ಟ ಭಾಗದ ಸುಂದರ ಪರಿಸರದ ನಡುವೆ ಅತಿ ಎತ್ತರದ ಪ್ರದೇಶದಲ್ಲಿ ನಿರ್ಮಾಣವಾಗಿರುವ ಗರುಡಗಿರಿಯ ಶ್ರೀಕೃಷ್ಣನ ದೇವಾಲಯದಲ್ಲಿ ೪೮ ದಿನಗಳ ನಂತರ ಶುದ್ಧ ಪೂಜೆ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಶ್ರೀ ಕೃಷ್ಣ ದೇವಾಲಯದಲ್ಲಿ ಚಂಡಿಕಾ ಹೋಮ ನಡೆಸಲಾಯಿತು.

ಕಳೆದ ೪೮ ದಿನಗಳ ಹಿಂದೆ ಈ ದೇವಾಲಯದಲ್ಲಿ ಶ್ರೀ ಕೃಷ್ಣನ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ಜರುಗಿತ್ತು.

ದೇವಾಲಯ ಆವರಣದಲ್ಲಿ ನಮಸ್ಕಾರ ಮಂಟಪ, ನಾಗನ ಪ್ರತಿಷ್ಠೆ, ಗಣಪತಿ ದೇವಾಲಯ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ದೇವಾಲಯಕ್ಕೆ ಆಗಮಿಸಲು ಉತ್ತಮವಾದ ರಸ್ತೆಯು ಈ ಭಾಗದ ಜನರು, ದಾನಿಗಳು, ಜನಪ್ರತಿನಿಧಿಗಳ ಸಹಾಯದಿಂದ ನಿರ್ಮಾಣವಾಗಿದೆ. ಪ್ರತಿನಿತ್ಯ ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.

೪೦ ವರ್ಷ ಇತಿಹಾಸವಿರುವ ಶ್ರೀ ಕೃಷ್ಣನ ದೇವಾಲಯ ೩.೬೦ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಸುಮಾರು ೧ ಎಕರೆ ವಿಸ್ತಿçÃರ್ಣದ ಎತ್ತರದ ಪ್ರದೇಶದಲ್ಲಿ ನೆಲೆ ನಿಂತಿದೆ.

ಶ್ರೀಕೃಷ್ಣನ ದೇವಾಲಯದ ಆವರಣದಲ್ಲಿ ಗಣಪತಿ ಗುಡಿಯನ್ನು ನಿರ್ಮಿಸಲು ಸಹಕರಿಸಿದ ದಾನಿಗಳಾದ ತೀತಿರ ರೋಶನ್ ಅಪ್ಪಚ್ಚು ಮಾತನಾಡಿ ಗಡಿಭಾಗದಲ್ಲಿ ಇಷ್ಟು ದೊಡ್ಡ ದೇವಾಲಯವು ನಿರ್ಮಾಣ ವಾಗಿರುವುದು ಸುತ್ತಮುತ್ತಲಿನ ಗ್ರಾಮದ ಜನತೆಗೆ ಶ್ರೀಕೃಷ್ಣನ ದರ್ಶನ ಮಾಡಲು ಅವಕಾಶವಾಗಿದೆ ಎಂದರು.

ದೇವಾಲಯ ಸಮಿತಿ ವತಿಯಿಂದ ಪ್ರತಿದಿನ ನಿತ್ಯ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ದೇವಾಲಯದ ಆವರಣದಲ್ಲಿ ಅರ್ಚಕರಿಗೆ ವಸತಿ ಸೌಕರ್ಯ ದೇವಾಲಯದ ಸುತ್ತಲು ತಡೆಗೋಡೆ ನಿರ್ಮಾಣ ಸೇರಿದಂತೆ ನೆಲ ಹಾಸು ಕಾಮಗಾರಿಗಳು ಮುಂದುವರೆಯಬೇಕಾಗಿದೆ. ಈ ನಿಟ್ಟಿನಲ್ಲಿ ಭಕ್ತರ,ದಾನಿಗಳ ಸಹಕಾರ ವನ್ನು ದೇವಾಲಯ ಸಮಿತಿಯು ನಿರೀಕ್ಷಿಸುತ್ತಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದರು.

ಕುಶಾಲನಗರದ ಗಿರೀಶ್ ಭಟ್ ಮುಂದಾಳತ್ವದಲ್ಲಿ ನುರಿತ ಅರ್ಚಕರು ಚಂಡಿಕಾ ಹೋಮ ಕಾರ್ಯದಲ್ಲಿ ಭಾಗಿಗಳಾಗಿದ್ದರು. ಹೋಮದ ನಂತರ ಪ್ರಸಾದ ವಿನಿಯೋಗ ನಡೆಯಿತು.