ಗುಡ್ಡೆಹೊಸೂರು, ಮೇ ೧೧: ತಾ. ೭ ರಂದು ಇಲ್ಲಿನ ಬೊಳ್ಳೂರು ಗ್ರಾಮದ ಗ್ರಾಮದೇವತೆ ಶ್ರೀ ಚೌಡೇಶ್ವರಿ ಅಮ್ಮನವರ ವಾರ್ಷಿಕ ಪೂಜೆ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.

ಭಕ್ತರು ಬೇಡುವ ಇಷ್ಟಾರ್ಥಗಳನ್ನು ಕರುಣಿಸುವ ಈ ದೇವಿಯ ಪೂಜೆಗೆ ವಿವಿಧ ಗ್ರಾಮಗಳಿಂದ ಅಲ್ಲದೆ ಹೊರ ಜಿಲ್ಲೆಗಳಿಂದ ಭಕ್ತಾದಿಗಳು ಬಂದು ಹರಕೆ ಪೂಜೆಗಳನ್ನು ಮಾಡುತ್ತಾರೆ. ಅಲ್ಲದೆ ವಾರದ ಶುಕ್ರವಾರ ಮತ್ತು ಮಂಗಳವಾರದAದು ಗ್ರಾಮಸ್ಥರು ಇಲ್ಲಿ ದೇವಿಗೆ ವಿಶೇಷ ಪೂಜೆ ನಡೆಸುತ್ತಾರೆ. ಇಲ್ಲಿನ ದೇವಸ್ಥಾನದಲ್ಲಿ ಪ್ರತಿವರ್ಷ ವಾರ್ಷಿಕ ಪೂಜೆ ನಡೆದ ದಿನ ಮಳೆಬರುವುದು ವಾಡಿಕೆ. ಅದರಂತೆ ತಾ. ೭ ರಂದು ನಡೆದ ಪೂಜೆಯ ಸಮಯದಲ್ಲಿ ಗುಡ್ಡೆಹೊಸೂರು ಸುತ್ತಮುತ್ತ ಮಳೆ ಸುರಿದು ಭೂಮಿ ತಂಪಾದ ಪ್ರಸಂಗ ನಡೆಯಿತು.

ದೇವಿಯ ಪ್ರತಿಷ್ಠಾಪನೆ ಮಾಡಿದ ದಿನದಿಂದ ಇಲ್ಲಿನ ಕಾವೇರಿ ನದಿಯಲ್ಲಿ ಗಂಗಾಪೂಜೆ ನಡೆಸಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಸುವ ಪದ್ಧತಿ ಇದೆ. ಆದರೆ ಕಾವೇರಿ ನದಿ ಬರಿದಾಗಿದ್ದು, ಕಾವೇರಿ ನದಿ ತಟದಲ್ಲಿ ಡ್ರಮ್‌ಗಳಲ್ಲಿ ನೀರು ತುಂಬಿಸಿ ಗಂಗಾ ಪೂಜೆ ಮಾಡಲಾಯಿತು.

ಪೂಜಾ ಕಾರ್ಯವನ್ನು ದೇವಸ್ಥಾನದ ಅರ್ಚಕ ನಡುಮನೆ ಸತ್ಯ ಅವರು ನಡೆಸಿದರು. ಈ ಸಂದರ್ಭ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಬಿ.ಸಿ. ಮಲ್ಲಿಕಾರ್ಜುನ ಮತ್ತು ಕಳಂಜನ ದಾದಪ್ಪ, ಸಮಿತಿಯ ಸದಸ್ಯರು ಭಾಗವಹಿಸಿ ಪೂಜಾ ಕಾರ್ಯವನ್ನು ಯಶಸ್ವಿಗೊಳಿಸಿದರು. ರಾತ್ರಿ ೮ ಗಂಟೆಯ ತನಕ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಮಂದಿ ಭಕ್ತರು ಪ್ರಸಾದ ಸ್ವೀಕರಿಸಿದರು.