ಶನಿವಾರಸಂತೆ, ಮೇ ೧೧: ಸಮೀಪದ ಕೊಡ್ಲಿಪೇಟೆಯಲ್ಲಿ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಜನ್ಮ ದಿನವನ್ನು ಸರಳವಾಗಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಯಿತು.

ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಜೆ.ಎಲ್. ಜನಾರ್ಧನ್ ಮಾತನಾಡಿ, ಸಾರ್ವಜನಿಕ ರಜೆ ಘೋಷಿಸಿ ವರ್ಷಕ್ಕೊಮ್ಮೆ ಬಸವಣ್ಣನವರ ಜನ್ಮ ದಿನವನ್ನು ಆಚರಿಸಿ, ಸ್ಮರಿಸಿ, ನಮನ ಸಲ್ಲಿಸಿದರೆ ಸಾಲದು ಸಮಾನತೆಯನ್ನು ಸಾರಿದ ವಚನ ಕ್ರಾಂತಿಯ ನೇತಾರ, ಕಾಯಕ ಯೋಗಿ ಬಸವಣ್ಣನವರು ವಿಶ್ವಕ್ಕೆ ಸಾರಿದ ಕಾಯವೇ ಕೈಲಾಸ ಎಂಬ ಕಾಯಕ ತತ್ವವನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.

ದಲಿತ ಸಂಘಟನೆಗಳ ಮುಖಂಡರಾದ ಡಿ.ಸಿ. ಸೋಮು, ವೀರಭದ್ರ, ಎಸ್.ಪಿ. ವಸಂತ್, ವಿಜಯ್, ವಸಂತ್, ಗೋವಿಂದ್, ಗ್ರಾಮ ಪ್ರಮುಖರು, ಇತರರು ಹಾಜರಿದ್ದರು.