ಇಂದು ವಿಶ್ವ ತಾಯಂದಿರ ದಿನ

ಅಮ್ಮಾ ಎಂದರೆ ಮೈ ಮನವೆಲ್ಲಾ, ಹೂವಾಗುವುದಮ್ಮಾ... ಆ... ಎರಡಕ್ಷರದಲಿ ಏನಿದೆ ಶಕ್ತಿ, ಹೇಳುವರಾರಮ್ಮಾ...! ಹೇಳುವರಾರಮ್ಮಾ...!

ಅಮ್ಮನ ಬಗೆಗಿನ ಹಾಡನ್ನು ಕೇಳುವಾಗ ಮನಮುಟ್ಟುವ ಸಾಲುಗಳ ರಿಂಗಣ ಹೃದಯದಲ್ಲಿ ನಾದ ಹೊಮ್ಮಿಸಿ ಅಮ್ಮನ ಮೇಲಿರುವ ಪ್ರೀತಿ ದ್ವಿಗುಣವಾಗಿ ಕಣ್ಣಾಲಿಗಳು ತುಂಬುವುದAತೂ ಖಚಿತ. ಹೌದು ಅಮ್ಮನ ಹಿರಿಮೆಯ ಬಗ್ಗೆ ಹಲವು ಕವಿಗಳು ತಮ್ಮದೇ ಸಾಲುಗಳಲ್ಲಿ ಕಟ್ಟಿಡುವಂತಹ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಯಾವುದೇ ಪದಗಳಿಗೂ ನಿಲುಕದೆ ಬಗೆದಷ್ಟು ಆಳ ಆಕೆಯ ಪ್ರೀತಿ. ತಾಯಿಯನ್ನು ಅಬ್ಬೆ, ಅವ್ವ, ಅಮ್ಮಾ, ಮಮ್ಮಿ, ಮಾಯಿ, ಆಯಿ ಹೀಗೆ ಬೇರೆ ಬೇರೆ ಪದಗಳನ್ನು ಬಳಸಿ ಕರೆಯಲಾಗುತ್ತದೆ. ‘ಅಮ್ಮಾ’ ಎಂಬ ಎರಡಕ್ಷರದಲ್ಲಿ ಇರುವ ಶಕ್ತಿ ಅದು ವರ್ಣಿಸಲಸದಳ... ಹೀಗೆ ಒಮ್ಮೆ ತುಂಬಿದ ಬಸ್‌ನಲ್ಲಿ ಪುಟಾಣಿ ಮಗುವನ್ನೆತ್ತಿಕೊಂಡು ಹತ್ತಿದ ಮಹಿಳೆಗೆ ಕುಳಿತುಕೊಳ್ಳಲು ಸ್ಥಳವಿಲ್ಲದೆ ಸಂಕಟಪಡುತ್ತಿದ್ದಾಗ ಮಗುವನ್ನು ಎತ್ತಿಕೊಳ್ಳುವ ಮೂಲಕ ಆಕೆಗೆ ಸಹಾಯ ಮಾಡಲು ಪ್ರಯತ್ನಿಸಿದೆ. ಆದರೆ ಮಗು ನನ್ನ ಮಡಿಲಿಗೆ ಬಂದಾಗ ನನ್ನನ್ನು ಒಮ್ಮೆ ನೋಡಿ ಜೋರಾಗಿ ಅಳತೊಡಗಿತು. ಸಮಾಧಾನ ಮಾಡಲು ಪ್ರಯತ್ನಿಸಿದರೂ ಅಳು ನಿಲ್ಲಲೇ ಇಲ್ಲ. ಕೊನೆಗೆ ಕಂದಮ್ಮನನ್ನು ತಾಯಿ ಎತ್ತಿಕೊಂಡಾಗ ಅಳು ನಿಲ್ಲಿಸಿ ನಗಲು ಪ್ರಾರಂಭಿಸಿತು. ಪ್ರಪಂಚದ ಬಗ್ಗೆ ಏನೂ ಅರಿಯದ ಕಂದಮ್ಮ ಮೊದಲು ಗುರುತಿಸುವುದು ತನ್ನ ತಾಯಿಯನ್ನ. ಇಡೀ ಜಗತ್ತಿನಲ್ಲಿ ತಾಯಿಯ ಸ್ಪರ್ಶಕ್ಕೆ ಇರುವ ಶಕ್ತಿ ಅದಮ್ಯ ಹಾಗೂ ವಿಶೇಷ.

ಅಮ್ಮಾ ನನ್ನ ಯೂನಿಫಾರ್ಮ್ ಎಲ್ಲಿ? ಅಮ್ಮಾ ನನ್ನ ಲಂಚ್ ಬಾಕ್ಸ್ ಎಲ್ಲಿ? ಅಮ್ಮಾ ನನ್ನ ಸಾಕ್ಸ್ ಎಲ್ಲಿ? ನನ್ನ ಪೆನ್ ಎಲ್ಲಿ? ಹೀಗೆ ಅಮ್ಮನನ್ನು ಪ್ರತಿ ಬಾರಿಯೂ ಕರೆದಾಗಲೂ ಅಷ್ಟೇ ಸಹನೆಯಿಂದ ಎಲ್ಲವನ್ನೂ ಒದಗಿಸುವ ಆಕೆಯ ತಾಳ್ಮೆ ನಿಜಕ್ಕೂ ಅದ್ಭುತ. ಅಮ್ಮ... ಈ ಪದವೇ ಅಮೃತ... ಅಮ್ಮ ಎಂದರೆ ಸಂಜೀವಿನಿ, ಅಮ್ಮನ ಮಾತೇ ಜೇನಿಗಿಂತಲೂ ಸಿಹಿ... ಈ ಜಗತ್ತಿನಲ್ಲಿ ದೇವರಿಗಿಂತಲೂ ಮಿಗಿಲಾದ ಶಕ್ತಿ ಎಂದರೆ ಅದು ಅಮ್ಮ ಮಾತ್ರ... ತಾನು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೇ ದೇವರು ಅಮ್ಮನನ್ನು ಸೃಷ್ಟಿಸಿದ ಎಂಬುದು ಬರೀ ಮಾತಲ್ಲ, ಅದು ನಿಜ ಕೂಡಾ. ಆಕೆ ಜೊತೆಗಿದ್ದರೆ

ನೂರಾನೆಯ ಬಲ ಇದ್ದಂತೆ. ಪ್ರತೀ ಕ್ಷಣವೂ ಕುಟುಂಬಕ್ಕಾಗಿ ತನ್ನ ಬದುಕನ್ನು ತೇಯುವವಳು... ‘ಉಪ್ಪಿಗಿಂತ ರುಚಿಯಿಲ್ಲ-ತಾಯಿಗಿಂತ ಬಂಧು ಇಲ್ಲ’ ಎಂಬ ಅನುಭವಸ್ಥರ ನುಡಿಯಂತೆ ಇಡೀ ಜಗತ್ತೇ ನಮ್ಮಿಂದ ದೂರವಾದರೂ ತಾಯಿ ಸದಾ ನಮ್ಮ ಕಷ್ಟ ದುಃಖಗಳಲ್ಲಿ ನಮ್ಮೊಂದಿಗಿರುವಳು.

ಆಕೆಯ ಮಮತೆ, ವಾತ್ಸಲ್ಯ, ಪ್ರೀತಿ, ಕರುಣೆ, ತ್ಯಾಗ, ಸೇವೆಗೆ ಆಕೆಯೇ ಸಾಟಿ.. ಒಂಭತ್ತು ತಿಂಗಳು ತನ್ನ ಉದರದಲ್ಲಿ ಇರಿಸಿ ಹಲವಾರು ನೋವುಗಳನ್ನು ಸಹಿಸಿ ಒಂದು ಜೀವಕ್ಕೆ ಉಸಿರು ನೀಡಿ ತನ್ನ ಪ್ರಾಣವನ್ನು ಲೆಕ್ಕಿಸದೆ ಮರು ಹುಟ್ಟನ್ನು ಪಡೆಯುವ ಆಕೆ ತನ್ನ ಕರುಳ ಕುಡಿಯನ್ನು ನೋಡಿದಾಕ್ಷಣ ತನ್ನೆಲ್ಲಾ ನೋವನ್ನು ಮರೆತು ಸಂತೋಷ ಪಡುವಳು. ಅಮ್ಮನ ಬಗ್ಗೆ ಗುಣಗಾನ ಮಾಡುತ್ತಾ ಹೋದರೆ ಒಂದೇ ಎರಡೇ... ಮಕ್ಕಳ ಏಳಿಗೆಯನ್ನು ಸದಾ ಬಯಸುವವಳು ಅಮ್ಮ... ಪ್ರತೀ ನೋವಿಗೂ ಮಿಡಿಯುವ ಜೀವ ಅಮ್ಮ. ಎಡವಿ ಬಿದ್ದಾಗ ಚಡಪಡಿಸಿ ಕೈಕೊಟ್ಟು ಮೇಲೆತ್ತುವವಳು ಆಕೆಯೇ... ತಾನು ಹಸಿದಿದ್ದರೂ ಮಕ್ಕಳ ಹಸಿವನ್ನು ನೀಗಿಸುವವಳು ಅಮ್ಮ... ಸಾಧನೆಯ ಬೆನ್ನೆಲುಬಾಗಿ ನಿಂತು ಹಿರಿ ಹಿರಿ ಹಿಗ್ಗಿ ಸಂತೋಷಪಡುವವಳು ಅಮ್ಮ... ಕಣ್ಣೀರಿಟ್ಟಾಗ ಪ್ರೀತಿಯ ಮಳೆಗರೆದು ರಮಿಸುವವಳು ಅಮ್ಮ... ಮಕ್ಕಳ ಹಾದಿಗೆ ಕಾವಲಾಗಿ ರುವವಳು ಅಮ್ಮ. ಆಕೆಯ ಕೊನೆಯುಸಿರಿರುವ ತನಕ ಮಕ್ಕಳ ಹಿತವನ್ನೇ ಬಯಸುವ ಅಮ್ಮ ಎಂದರೇ ಎಲ್ಲಾ. ಅದನ್ನ ಕೇವಲ ನುಡಿಗಳಲ್ಲಿ ಎಷ್ಟು ಪೋಣಿಸಿದರೂ ಅದು ಕಡಿಮೆಯೇ. ತನ್ನ ಮಕ್ಕಳು ಹಾಗೂ ಕುಟುಂಬಕ್ಕಾಗಿ ರಜೆ, ಸಂಬಳವೇ ಇಲ್ಲದೆ ದುಡಿಯುವ ಜೀವ... ಪ್ರತಿಫಲಾಪೇಕ್ಷೆ ಇಲ್ಲದೆ ರಕ್ತವನ್ನೇ ಬೆವರಂತೆ ಬಸಿದು ಕುಟುಂಬವನ್ನು ಕಾಪಾಡುವ ಶಕ್ತಿ ಇರುವುದು ಆಕೆಗೆ ಮಾತ್ರ. ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿ ತಾಯಿಯಾದರೆ, ಆ ತಾಯಿಯ ಕನಸಿಗೆ, ಹೋರಾಟಕ್ಕೆ ಹೆಗಲು ಕೊಟ್ಟು, ಬೆಂಗಾವಲಾ ಗಿರುವುದು ತಂದೆ. ಇಷ್ಟೆಲ್ಲಾ ಅಮ್ಮನ ಬಗ್ಗೆ ಹೇಳುತ್ತಾ ಹೋದಂತೆ ಆಕೆಯ ಬಗ್ಗೆ ಚಿಂತಿಸುವ, ಆಕೆಯ ಋಣವನ್ನು ತೀರಿಸಲು ಇಡೀ ಜನುಮ ಸಾಲದು. ಆಕೆಯ ತ್ಯಾಗವನ್ನು ಸ್ಮರಿಸುವ ಒಂದು ಚಿಕ್ಕ ಅವಕಾಶ ನಮ್ಮ ನಿಮ್ಮೆಲ್ಲರಿಗಾಗಿ ಅದೇ ಅಮ್ಮಂದಿರ ದಿನ. ಇಂದು ಮೇ ೧೨ ವಿಶ್ವ ಅಮ್ಮಂದಿರ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ವರ್ಷದಲ್ಲಿ ದಿನಕ್ಕೊಂದು ವಿಶೇಷತೆಯನ್ನು ಆಚರಿಸುವ ನಾವು ನಮಗೆ ಉಸಿರು-ಜೀವನ ನೀಡಿದ ತಾಯಿಯ ಉದಾರತೆಯನ್ನು ನೆನೆದು ಆಕೆಯನ್ನು ಸಂತೋಷ ವಾಗಿರಿಸುವ ನಿಟ್ಟಿನಲ್ಲಿ ಅರ್ಥ ಗರ್ಭಿತವಾಗಿ ಈ ದಿನವನ್ನು ಆಚರಿಸ ಬಹುದಲ್ಲವೇ? ಅಮ್ಮನನ್ನು ಸಂತೋಷವಾಗಿರಿಸಲು ಯಾವುದೇ ಬೆಲೆಬಾಳುವ ವಸ್ತುವನ್ನು ಕೊಡುವ ಅವಶ್ಯಕತೆ ಇಲ್ಲ... ಬದಲಾಗಿ ಪ್ರೀತಿಯಿಂದ ಮಾತಾಡುತ್ತಾ ಆಕೆಯ ಕಷ್ಟ-ಸುಖಗಳನ್ನು ಅರಿತು ಸ್ಪಂದಿಸಿದರೆ ಸಾಕು ಆಕೆಯನ್ನು ಸಂತೋಷ ಪಡಿಸಲು. ತಮ್ಮ ಸುತ್ತಲಿನ ಜನರ ಜೀವನದಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ತಾಯಂದಿರಿಗೆ ವಿಶೇಷ ಕಾಳಜಿಯೊಂದಿಗೆ ಕೃತಜ್ಞತೆ ಸಲ್ಲಿಸಲು ಈ ದಿನವು ಒಂದು ಕಾರಣವಾಗ ಬಹುದಲ್ಲವೇ? ಇಂತಹ ಒಂದು ಶ್ರೇಷ್ಠವಾದ ದಿನದ ಆಚರಣೆ ಎಲ್ಲಿಂದ ಪ್ರಾರಂಭವಾಯಿತು ಎಂದು ನೋಡುವಾಗ ೧೯೦೮ರಲ್ಲಿ ಅಮೇರಿಕಾದಲ್ಲಿ ಶಾಂತಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅನಾ ಜಾರ್ವಿಸ್ ತಾಯಂದಿರ ದಿನವನ್ನು ಮೊದಲ ಬಾರಿಗೆ ಆಚರಿಸಲು ಮುನ್ನುಡಿ ಬರೆದಳು. ೧೯೦೫ ರಲ್ಲಿ ತಾಯಿ ದುರದೃಷ್ಟವಶಾತ್ ಸಾವನ್ನಪ್ಪಿದಾಗ ತನ್ನ ಜೀವವೇ ಆಗಿದ್ದ ತಾಯಿ ಯನ್ನು ಕಳೆದುಕೊಂಡಿದ್ದಳು. ೧೯೦೮ ರಲ್ಲಿ ವರ್ಜೀನಿಯಾದ ಗ್ರಾಪ್ಟನ್‌ನಲ್ಲಿರುವ ಸೈಂಟ್ ಆ್ಯಂಡ್ಯೂಸ್ ಮೆಥೋಡಿಸ್ಟ್ ಚರ್ಚ್ನಲ್ಲಿ ತಾಯಿಗಾಗಿ ಪ್ರಾರ್ಥನಾ ಸಭೆಯೊಂದನ್ನು ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿ-ತಾಯಿ ಆಯೋಜಿಸಿದ ಅನಾ ತಾಯಿಯ ಬಗ್ಗೆ ಮನದಾಳದ ಮಾತನ್ನು ಬಿಚ್ಚಿಡುತ್ತಾಳೆ. ಅದರೊಂದಿಗೆ ಅಮ್ಮನಿಗಾಗಿ ಒಂದು ದಿನವನ್ನು ಮೀಸಲಿಡುವ ಮಹದಾಸೆಯನ್ನು ವ್ಯಕ್ತಪಡಿಸಿ ಸರಕಾರಕ್ಕೆ ಮನವಿ ಮಾಡಿಕೊಂಡಳು. ಅಮೇರಿಕಾದಲ್ಲಿ ೧೯೧೪ ರಲ್ಲಿ ತಾಯಂದಿರ ದಿನದ ಸಂಬAಧ ಅಧಿಕೃತ ಘೋಷಣೆ ಹೊರಬಿತ್ತು. ಅಂದಿನಿAದ ಪ್ರತೀ ಮೇ ತಿಂಗಳ ಎರಡನೇ ಭಾನುವಾರ ಜಗತ್ತಿನೆಲ್ಲೆಡೆ ತಾಯಂದಿರ ದಿನವನ್ನು ಆಚರಿಸಲಾಗುತ್ತಿದೆ. ಅಂತಹ ತಾಯಿಗೆ ಬೆಳೆದು ದೊಡ್ಡವರಾದ ಮೇಲೆ ಯಾವ ಸ್ಥಾನವನ್ನು ನೀಡಿದ್ದೇವೆ? ಅವಳನ್ನು ಗೌರವಿಸುತಿದ್ದೇವೆಯೇ? ಪ್ರೀತಿಯಿಂದ ಆಕೆಯ ಸೇವೆ ಮಾಡುತ್ತಿದ್ದೇವೆಯೇ? ಪ್ರಶ್ನಿಸಿಕೊಳ್ಳಬೇಕಾಗಿದೆ. ಎಷ್ಟೋ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಐಷಾರಾಮಿ ಜೀವನ ಹಾಗೂ ಒಳ್ಳೆಯ ದುಡಿಮೆಗಾಗಿ ವಿದೇಶಕ್ಕೆ ತೆರಳಿ ತಮ್ಮ ವಯಸ್ಸಾದ ಹೆತ್ತವರನ್ನು ಅನಾಥರನ್ನಾಗಿ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ತಮ್ಮ ಮಕ್ಕಳು-ಮೊಮ್ಮಕ್ಕಳ ಕನಸು ಕಾಣುತ್ತಾ ಚಿಂತೆಯಲ್ಲೇ ಮುಳುಗಿ ಕೊನೆಯುಸಿರೆಳೆಯುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ನಿಜವಾಗಿ ಹೇಳಬೇಕೆಂದರೆ ಅಪ್ಪ-ಅಮ್ಮ ಇಲ್ಲದಿರುವವರು ಅನಾಥರಲ್ಲ ಬದಲಿಗೆ ಅವರ ಮೌಲ್ಯ ಅರಿಯದಿರುವವರೇ ನಿಜವಾದ ಅನಾಥರು.ಇಂದಿನ ದಿನದ ವಿಶೇಷವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಡಿಪಿ, ವಾಟ್ಸಾಪ್ ಮೂಲಕ ಶುಭಾಶಯಗಳನ್ನು ಕಳಿಸುವುದಕ್ಕೆ ಅಷ್ಟೇ ಸೀಮಿತಗೊಳಿಸದೆ ಅಮ್ಮಂದಿರ ಮೊಗದಲ್ಲಿ ಜೀವನದುದ್ದಕ್ಕೂ ನಗುವನ್ನು ಭರಿಸುವ ಆಕೆಯನ್ನು ಖುಷಿ ಖುಷಿಯಾಗಿಡುವ ಮಕ್ಕಳು ನಾವಾಗುತ್ತೇವೆಂಬ ಸಂಕಲ್ಪವನ್ನು ತೋಡುವ ಒಳ್ಳೆಯ ಮನಸ್ಸು ನಮ್ಮದಾಗಲಿ. ಅಮ್ಮನಿಗೆ ಉಡುಗೊರೆ ನೀಡುವುದಕ್ಕಿಂತ ಮುಖ್ಯವಾಗಿ ನಾವೇ ಅವರಿಗೆ ಬೆಲೆ ಕಟ್ಟಲಾಗದ ಉಡುಗೊರೆ ಎಂಬ ಅರಿವು ನಮ್ಮದಾಗಲಿ. ಸಮಾಜದ ಅಭಿವೃದ್ಧಿಗೆ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಮಾತೃ ಹೃದಯಿ ಮಹಿಳಾಮಣಿಗಳಿಗೆ ಹಾಗೂ ಪುರುಷ ಸ್ಥಾನ ತುಂಬಬಲ್ಲ ಪ್ರತಿ ಮಹಿಳೆಯ ನಿಸ್ವಾರ್ಥ ಸೇವೆ ಗುರುತಿಸಿ ಕೃತಜ್ಞತೆ ಸಲ್ಲಿಸುವವರಾಗೋಣ. ಅಮ್ಮನ ಮೊಗದಲ್ಲಿ ಸಂತೋಷ ಮೂಡಿಸುವ ಕಿರಣ ನಾವಾಗೋಣವೇ...?

- ಮೀರಾ ಸುಮನ್ ಕ್ಯಾಸ್ತಲಿನ್, ಸಹಶಿಕ್ಷಕಿ,

ಸರಕಾರಿ ಪ್ರೌಢಶಾಲೆ, ಹಂಡ್ಲಿ. sumಚಿಟಿಛಿಚಿsಣಚಿಟiಟಿo@gmಚಿiಟ.ಛಿom