ಸೋಮವಾರಪೇಟೆ, ಮೇ ೧೩: ಸರ್ಕಾರ ಬದಲಾದರೂ ಸೋಮವಾರಪೇಟೆಯ ಸಮಸ್ಯೆಗಳು ಮಾತ್ರ ಬದಲಾಗಿಲ್ಲ. ಇದ್ದ ವ್ಯವಸ್ಥೆಗಳು ಇತ್ತೀಚೆಗಂತೂ ಇನ್ನಷ್ಟು ಅವ್ಯವಸ್ಥೆಗೆ ಇಳಿದಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಪಟ್ಟಣದಲ್ಲಿ ಮಿತಿಮೀರಿದ ಸಂಚಾರ ಅವ್ಯವಸ್ಥೆ, ಪಾರ್ಕಿಂಗ್ ಸಮಸ್ಯೆ, ಶೌಚಾಲಯಗಳ ನಿರ್ವಹಣೆ ಕೊರತೆ, ತ್ಯಾಜ್ಯ ವಿಲೇವಾರಿ, ಕಂದಾಯ ಇಲಾಖೆಯಲ್ಲಿ ಹತ್ತಾರು ಸಮಸ್ಯೆಗಳು ಜೀವಂತವಾಗಿದ್ದು, ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಮೂಲಕ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಲಾಯಿತು.
ಕಂದಾಯ ಇಲಾಖೆಯ ಸಮಸ್ಯೆಗಳ ಬಗ್ಗೆ ಕಳೆದ ೨ ತಿಂಗಳ ಹಿಂದೆಯೇ ತಹಶೀಲ್ದಾರ್ಗೆ ಮನವಿ ಸಲ್ಲಿಸಿ, ವ್ಯವಸ್ಥೆಗಳ ಸುಧಾರಣೆಗೆ ಮನವಿ ಮಾಡಿದ್ದರೂ ಈವರೆಗೆ ಯಾವೊಂದು ಸಮಸ್ಯೆಯೂ ಇತ್ಯರ್ಥವಾಗದ ಬಗ್ಗೆ ಸಮಿತಿಯ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ನೇತೃತ್ವದಲ್ಲಿ ಕಂದಾಯ ಇಲಾಖೆ, ಪೊಲೀಸ್ ಠಾಣೆ, ಪಟ್ಟಣ ಪಂಚಾಯಿತಿಗೆ ತೆರಳಿ ಪ್ರತ್ಯೇಕ ಮನವಿಗಳನ್ನು ಸಲ್ಲಿಸಿ, ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಪಟ್ಟಣದಲ್ಲಿ ದಿನನಿತ್ಯ ವಾಹನಗಳ ಸಂಚಾರ ಅವ್ಯವಸ್ಥೆಯಿಂದ ಕೂಡಿದೆ. ಪಾರ್ಕಿಂಗ್ ಸಮಸ್ಯೆ ಬಿಗಡಾಯಿಸಿದೆ. ಎಲ್ಲೆಂದರಲ್ಲಿ ವಾಹನ ನಿಲುಗಡೆಯಿಂದ ಕಿರಿಕಿರಿಯಾಗುತ್ತಿದೆ. ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡಿಂಗ್, ಹೆಲ್ಮೆಟ್ ರಹಿತ ಪ್ರಯಾಣ, ಮದ್ಯಪಾನ ಮಾಡಿ ವಾಹನ ಚಾಲನೆ, ಅಪ್ರಾಪ್ತರಿಂದ ಬೈಕ್ ಚಾಲನೆ, ಬೀಟ್ ಪೊಲೀಸರ ನಿರ್ಲಕ್ಷö್ಯ ಬಗ್ಗೆ ಪೊಲೀಸ್ ಠಾಣಾಧಿಕಾರಿ ರಮೇಶ್ಕುಮಾರ್ ಅವರೊಂದಿಗೆ ಚರ್ಚೆ ನಡೆಸಲಾಯಿತು.
ಇದರೊಂದಿಗೆ ಪಟ್ಟಣದ ಎಲ್ಲೆಂದರಲ್ಲಿ ಧೂಮಪಾನ, ಗಾಂಜಾ ಸೇರಿದಂತೆ ಡ್ರಗ್ಸ್ ಮಾರಾಟ, ಸೇವನೆಗಳು ಹೆಚ್ಚುತ್ತಿದ್ದು, ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತಿದೆ. ಪೊಲೀಸ್ ಇನ್ಸ್ಪೆಕ್ಟರ್ ಜನತೆಗೆ ಲಭ್ಯವಾಗುತ್ತಿಲ್ಲ. ಠಾಣೆ ಮೇಲ್ದರ್ಜೆಗೇರಿದರೂ ವ್ಯವಸ್ಥೆಗಳಲ್ಲಿ ಯಾವುದೇ ಸುಧಾರಣೆ ಆಗುತ್ತಿಲ್ಲ ಎಂದು ಅರುಣ್ ಆರೋಪಿಸಿದರು.
ಶಾಲಾ ಕಾಲೇಜು ಆರಂಭ ಹಾಗೂ ಮುಗಿಯುವ ಸಂದರ್ಭ ಬೇಕಾಬಿಟ್ಟಿ ಬೈಕ್ ಚಾಲನೆ, ಸೈಲೆನ್ಸರ್ ಮೋಡಿಫೈ ಮಾಡಿಕೊಂಡು ಕರ್ಕಶ ಶಬ್ದ ಹೊರಸೂಸುತ್ತಾ ತೆರಳುವ ಪುಂಡರ ಆಟಕ್ಕೆ ಬ್ರೇಕ್ ಹಾಕಬೇಕು. ಪಿಕ್ಅಪ್ಗಳಲ್ಲಿ ಕಾರ್ಮಿಕರನ್ನು ಕೃತ್ಯಗಳನ್ನು ತಡೆಗಟ್ಟಲು ಸಾರ್ವಜನಿಕರೂ ಸಹ ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ನಂತರ ಕಂದಾಯ ಇಲಾಖೆಗೆ ತೆರಳಿದ ಪದಾಧಿಕಾರಿಗಳು, ಇಲಾಖೆಯ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ೨ ತಿಂಗಳ ಹಿಂದೆಯೇ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದರೂ ಈವರೆಗೆ ಸುಧಾರಣೆಯಾಗಿಲ್ಲ. ಪೋಡಿ, ದುರಸ್ತಿ, ಪೌತಿ ಖಾತೆ, ಒನ್ ಟು ಫೈ, ಹಕ್ಕುಪತ್ರ ವಿತರಣೆ ಸೇರಿದಂತೆ ಯಾವ ಕೆಲಸ ಕಾರ್ಯಗಳೂ ತಾಲೂಕು ಕಚೇರಿಯಿಂದ ಆಗುತ್ತಿಲ್ಲ ಎಂದು ಶಿರಸ್ತೇದಾರ್ ಎದುರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ರೀತಿಯ ನಿರ್ಲಕ್ಷö್ಯ ಮುಂದುವರೆದರೆ ಹೋರಾಟದ ಹಾದಿ ಹಿಡಿದು, ಆಹೋರಾತ್ರಿ ಧರಣಿ ನಡೆಸಲಾಗುವುದು. ರೈತರ ಶೋಷಣೆಗೆ ಮುಕ್ತಿ ನೀಡಿ, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಆದ್ಯತೆಯ ಮೇಲೆ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ನಂತರ ಪಟ್ಟಣ ಪಂಚಾಯಿತಿಗೆ ತೆರಳಿದ ಪದಾಧಿಕಾರಿಗಳು, ಪಟ್ಟಣದ ಸಾರ್ವಜನಿಕ ಶೌಚಾಲಯದ ಅವ್ಯವಸ್ಥೆ, ನಿರ್ವಹಣೆ ಇಲ್ಲದೇ ಹದಗೆಟ್ಟಿರುವ ಶುಚಿತ್ವದ ವಿರುದ್ಧ ಮುಖ್ಯಾಧಿಕಾರಿ ಲೋಕ್ಯ ನಾಯ್ಕ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಇಲ್ಲಿನ ತಾಲೂಕು ಪಂಚಾಯಿತಿ ಮುಂಭಾಗದ ರಸ್ತೆಯ ಬದಿಯಲ್ಲಿ ಕಲ್ಲು, ಮಣ್ಣು ಸುರಿಯಲಾಗಿದ್ದು, ತೆರವುಗೊಳಿಸುವಂತೆ ಮನವಿ ಮಾಡಿದ್ದರೂ ಈವರೆಗೆ ತೆರವುಗೊಳಿಸಿಲ್ಲ. ಈ ಸ್ಥಳದಲ್ಲಿ ನೂರಾರು ವಾಹನಗಳ ಪಾರ್ಕಿಂಗ್ಗೆ ಅವಕಾಶ ನೀಡಬಹುದಾಗಿದ್ದರೂ ಪ.ಪಂ. ಕೈಕಟ್ಟಿ ಕುಳಿತಿದೆ. ತಕ್ಷಣ ಕಲ್ಲು, ಮಣ್ಣು ತೆರವುಗೊಳಿಸಬೇಕೆಂದು ಒತ್ತಾಯಿಸಲಾಯಿತು. ಮುಂದಿನ ಒಂದು ವಾರದೊಳಗೆ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಅಧಿಕಾರಿ ಭರವಸೆ ನೀಡದರು.
ಈ ಸಂದರ್ಭ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಖಜಾಂಚಿ ಕೆ.ಎನ್.ದೀಪಕ್, ರಕ್ಷಿತ್, ಹೂವಯ್ಯ ಮಾಸ್ಟರ್, ಮುಂಜುನಾಥ್, ಕೆ.ಎ. ಪ್ರಕಾಶ್, ಗೌತಮ್ ಕಿರಗಂದೂರು, ಕೂಗೂರು ಸಂದೀಪ್, ಪ್ರೀತಮ್ ಪುರಂದರ ಸೇರಿದಂತೆ ಇತರರು ಉಪಸ್ಥಿತರಿದ್ದರು.