ಸೋಮವಾರಪೇಟೆ, ಮೇ ೧೩: ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಮಾರಕವಾಗುವ ಆದೇಶಗಳನ್ನು ಹೊರಡಿಸಿ, ಜನರ ನೆಮ್ಮದಿ ಕೆಡಿಸುತ್ತಿದ್ದು ಇದನ್ನು ಖಂಡಿಸಿ, ಆದೇಶಗಳನ್ನು ಹಿಂಪಡೆಯುವAತೆ ಒತ್ತಾಯಿಸಿ ತಾ. ೧೭ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ತಿಳಿಸಿದರು.
ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನತೆಗೆ ಮಾರಕವಾಗುವ ಸರ್ಕಾರಿ ಆದೇಶಗಳನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿ ತಾ. ೧೭ರಂದು ಬೆಳಿಗ್ಗೆ ೧೦.೩೦ರಿಂದ ಮಡಿಕೇರಿಯ ಅರಣ್ಯ ಭವನದ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯ ನೇತೃತ್ವವನ್ನು ಬಿಜೆಪಿ ವಹಿಸಿದ್ದರೂ, ಇತರ ಪಕ್ಷಗಳ ಬೆಳೆಗಾರರು, ರೈತರು, ಸಂಘ ಸಂಸ್ಥೆಗಳ ಪ್ರಮುಖರು, ದೇವಾಲಯ ಸಮಿತಿ ಪದಾಧಿಕಾರಿಗಳು ರಾಜಕೀಯ ರಹಿತವಾಗಿ ಭಾಗಿಯಾಗಲಿದ್ದಾರೆ ಎಂದರು.
ಖಾಸಗಿ ಜಮೀನಿನಲ್ಲಿ ಬೆಳೆದಿರುವ ಮರಗಳನ್ನು ಗಣತಿ ಮಾಡಿ ಕಂದಾಯ ಇಲಾಖೆಗೆ ನೀಡಿ ದಾಖಲಾತಿ ಮಾಡಲು ಹೊರಡಿಸಿರುವ ಸರ್ಕಾರದ ಆದೇಶ, ಜಿಲ್ಲೆಯ ಜನರ ಅಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿದೆ. ಬೆಳೆಗಾರರು, ರೈತರು ತಮ್ಮ ಜಮೀನಿನಲ್ಲಿ ತಾವೇ ನೆಟ್ಟು ಬೆಳೆಸಿರುವ ಮರಗಳನ್ನು ಸರ್ಕಾರ ಇದೀಗ ತನ್ನ ವಶಕ್ಕೆ ಪಡೆಯಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಈಗಾಗಲೇ ಖಾಸಗಿ ಜಾಗದಲ್ಲಿ ಬೆಳೆದಿರುವ ಮರಗಳನ್ನು ಗುರುತು ಮಾಡಿ, ಮುಂದೆ ಜಿಯೋ ಟ್ಯಾಗ್ ಹಾಕುವ ಮುಖಾಂತರ ಮಾಲೀಕರ ಅಧಿಕಾರ ಕಸಿದುಕೊಳ್ಳಲು ಸರ್ಕಾರ ಯತ್ನಿಸುತ್ತಿದೆ. ಸ್ವಂತ ಉಪಯೋಗಕ್ಕೆ ಮರ ಕಡಿಯಲು ನಿರ್ಬಂಧ ವಿಧಿಸುವ ಸಾಧ್ಯತೆಯಿದೆ. ಈ ಮರಗಳು ಕಾಣೆ ಅಥವಾ ನಾಶವಾದರೆ ಮಾಲೀಕನನ್ನು ಹೊಣೆ ಮಾಡಿ ಕಿರುಕುಳ ನೀಡುವ ಸಂಭವವಿದೆ ಎಂದರು.
ಖಾಸಗಿ ಜಮೀನಿನಲ್ಲಿರುವ ಮರಗಳನ್ನು ಪಟ್ಟಿ ಮಾಡುವ ಬದಲು, ಕಾಯ್ದಿರಿಸಿದ ಅರಣ್ಯಗಳಲ್ಲಿ ಇರುವ ಮರಗಳನ್ನು ಪಟ್ಟಿ ಮಾಡಿ ಮರ ಕಳ್ಳಸಾಗಾಣಿಕೆ ತಡೆದು, ಅರಣ್ಯವನ್ನು ರಕ್ಷಿಸುವ ಕೆಲಸ ಮೊದಲು ಮಾಡಲಿ ಎಂದು ಆಗ್ರಹಿಸಿದರು.
ಇದರೊಂದಿಗೆ ಕೊಡಗಿನ ದೇವಾಲಯ, ಮನೆಗಳಲ್ಲಿ ಇಟ್ಟುಕೊಂಡಿರುವ, ಧಾರ್ಮಿಕ ಆಚರಣೆಗಳಲ್ಲಿ ಮಾತ್ರ ಬಳಕೆಯಾಗುವ, ಇಂದಿಗೂ ಪೂಜ್ಯ ಭಾವನೆಯಿಂದ ನೋಡಲಾಗುವ ಪ್ರಾಣಿಜನ್ಯ ವಸ್ತುಗಳನ್ನು ವಾಪಸ್ ನೀಡುವಂತೆ ಆದೇಶ ಹೊರಡಿಸಿರುವುದನ್ನು ವಾಪಸ್ ಪಡೆಯಬೇಕೆಂದು ಮೇದಪ್ಪ ಒತ್ತಾಯಿಸಿದರು.
ಸಿ ಮತ್ತು ಡಿ ಜಾಗದಲ್ಲಿ ಕೃಷಿ ಮಾಡಿರುವ, ಮನೆ ಕಟ್ಟಿಕೊಂಡಿರುವ ರೈತರಿಗೆ ಹಕ್ಕುಪತ್ರ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು, ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಸೋಮವಾರಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್, ಪ್ರಧಾನ ಕಾರ್ಯದರ್ಶಿ ದರ್ಶನ್ ಜೋಯಪ್ಪ, ವಕ್ತಾರ ಪವನ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ನಗರಾಧ್ಯಕ್ಷ ಎಸ್.ಆರ್. ಸೋಮೇಶ್ ಅವರುಗಳು ಉಪಸ್ಥಿತರಿದ್ದರು.