ಮಡಿಕೇರಿ, ಮೇ ೧೨: ಸಿಡಿಲು ಬಡಿದ ಪರಿಣಾಮ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಮನೆ ಹಾಗೂ ಗೃಹೋಪಯೋಗಿ ವಸ್ತುಗಳು ಹಾನಿಯಾಗಿರುವ ಘಟನೆ ಕಾಲೂರು ಸಮೀಪದ ಬಾರಿಕೆಮೊಟ್ಟೆ ಎಂಬಲ್ಲಿ ನಡೆದಿದೆ.

ಗ್ರಾಮದ ಲಿಂಗಮ್ಮ ಎಂಬವರ ಮನೆಯಲ್ಲಿ ಶನಿವಾರ ಸಂಜೆ ೬.೩೦ ರ ಸುಮಾರಿಗೆ ಘಟನೆ ಸಂಭವಿಸಿದ್ದು, ಸಿಡಿಲು ಬಡಿದ ರಭಸಕ್ಕೆ ವಿದ್ಯುತ್ ಮೀಟರ್ ಸುಟ್ಟು ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ.

ಟಿ.ವಿ. ಸೇರಿದಂತೆ ಗೃಹೋಪಯೋಗಿ ವಸ್ತುಗಳು ಸುಟ್ಟುಹೋಗಿವೆ. ವಿದ್ಯುತ್ ಮೀಟರ್, ಮನೆಯ ಹಿಂಭಾಗ ಕುಸಿದು ಬಿದ್ದಿದೆ. ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ವಿದ್ಯುತ್ ಅವಘಡದಿಂದ ಗೋಡೆಗಳು ಬಿರುಕು ಬಿಟ್ಟು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಗಾಳಿಬೀಡು ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ತೆರಳಿ ಪರಿಶೀಲಿಸಿ ಟಾರ್ಪಲ್ ವಿತರಣೆ ಮಾಡಿದ್ದಾರೆ.

ಲಿಂಗಮ್ಮ ಅವರ ಮನೆಗೆ ಸಿಡಿಲು ಬಡಿದು ಸಂಪೂರ್ಣ ಹಾನಿಯಾಗಿರುವ ವಿಷಯ ತಿಳಿದು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಸ್ಥಳಕ್ಕೆ ಭೇಟಿ ನೀಡಿ, ಸರಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವ ಭರವಸೆಯಿತ್ತರು.