ಸೋಮವಾರಪೇಟೆ, ಮೇ ೧೩: ರಾಜ್ಯ ಹೆದ್ದಾರಿಯ ತಣ್ಣೀರುಹಳ್ಳ ಗ್ರಾಮದ ತಿರುವಿನಲ್ಲಿ ಪಿಕ್‌ಅಪ್ ಮತ್ತು ದ್ವಿಚಕ್ರ ವಾಹನದ ನಡುವೆ ಅವಘಡ ಸಂಭವಿಸಿ, ಸಹೋದರಿಯ ಮದುವೆ ಸಂಭ್ರಮದಲ್ಲಿದ್ದ ಯುವಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋರಿಕಲ್ಲು ಬಸವನಹಳ್ಳಿ ಗ್ರಾಮದ ವಿಷ್ಣು ಚಾಲಿಸುತ್ತಿದ್ದ ದ್ವಿಚಕ್ರ ವಾಹನ ಹಾಗೂ ಬಳಗುಂದ ಗ್ರಾಮದ ಯೋಗೇಶ್ ಎಂಬಾತ ಚಾಲಿಸುತ್ತಿದ್ದ ಪಿಕ್‌ಅಪ್ ನಡುವೆ ತಣ್ಣೀರುಹಳ್ಳ ಗ್ರಾಮದ ತಿರುವಿನಲ್ಲಿ ಡಿಕ್ಕಿ ಸಂಭವಿಸಿದ್ದು, ದ್ವಿಚಕ್ರ ವಾಹನ ಚಾಲಕನ ತಲೆ, ಕಾಲಿನ ಭಾಗಕ್ಕೆ ಗಂಭೀರ ಗಾಯವಾಗಿದೆ.

ತಕ್ಷಣ ಸ್ಥಳೀಯರು ಗಾಯಾಳುವನ್ನು ಸೋಮವಾರಪೇಟೆ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.

ಗಾಯಾಳು ವಿಷ್ಣು ಅವರ ಸಹೋದರಿಯ ಮದುವೆ ಕಾರ್ಯ ಪಟ್ಟಣದ ಕಲ್ಯಾಣ ಮಂಟಪವೊAದರಲ್ಲಿ ನಿಗದಿಯಾಗಿದ್ದು, ಬೆಳಿಗ್ಗೆ ಮಂಟಪಕ್ಕೆ ಆಗಮಿಸಿ ಕೆಲವೊಂದು ವಸ್ತುಗಳನ್ನು ತರಲೆಂದು ಮತ್ತೆ ಮನೆಗೆ ತೆರಳುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ.

ಈ ಬಗ್ಗೆ ಗಾಯಾಳುವಿನ ಸಂಬAಧಿ ಸಿ.ಹೆಚ್. ರದೀಶ್ ಎಂಬವರು ನೀಡಿದ ದೂರಿನ ಮೇಲೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಸಂಬAಧಿಕರು ಮಾಹಿತಿ ನೀಡಿದ್ದಾರೆ.