ಸಿದ್ದಾಪುರ, ಮೇ ೧೩ : ಅಪರಿಚಿತರಿಗೆ ಓಟಿಪಿ, ಎಟಿಎಂ ಸಂಖ್ಯೆ ನೀಡುವುದು ಅಥವಾ ಮೊಬೈಲ್ ಫೋನಿಗೆ ಬರುವ ಅನಾಮಿಕ ಲಿಂಕ್‌ಗಳನ್ನು ಒತ್ತಿ ಹಣ ಕಳೆದುಕೊಳ್ಳುವ ಆನ್‌ಲೈನ್ ವಂಚನೆಗಳು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಬ್ಯಾಂಕ್ ಖಾತೆದಾರನ ಮೊಬೈಲ್ ಫೋನಿಗೆ ಯಾವುದೇ ಸಂದೇಶ ಬಂದಿಲ್ಲ, ಓಟಿಪಿ ಕೇಳಿಲ್ಲ. ಆದರೂ ಖಾತೆಯಲ್ಲಿದ್ದ ರೂ ೭೯,೯೦೦ ಹಣ ಖಾತೆದಾರರ ಗಮನಕ್ಕೆ ಬಾರದೆ ವರ್ಗಾವಣೆಯಾಗಿದೆ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಲ್ದಾರೆಯ ಬಾಡಗ ಬಾಣಂಗಾಲ ನಿವಾಸಿ ಎಂ.ಎ ಶಮೀರ್ ಎಂಬವರ ಸಿದ್ದಾಪುರದ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಿಂದ ತಾ. ೭ ರಂದು ಹಂತ ಹಂತವಾಗಿ ರೂ ೫೦ ಸಾವಿರ, ರೂ ೨೫ ಸಾವಿರ ಮತ್ತು ರೂ ೪,೯೦೦ ಹಣ ಆನ್‌ಲೈನ್ ಮೂಲಕ ಅಪರಿಚಿತರ ಖಾತೆಗೆ ವರ್ಗಾವಣೆಯಾಗಿದೆ. ವಿಷಯ ತಿಳಿದ ತಕ್ಷಣ ಖಾತೆದಾರ ಸಿದ್ದಾಪುರ ಕೆನರಾ ಬ್ಯಾಂಕಿನ ವ್ಯವಸ್ಥಾಪಕರ ಗಮನಕ್ಕೆ ತಂದು, ಅವರ ಸೂಚನೆಯಂತೆ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಾ. ೭ ರಂದು ಬೆಳಿಗ್ಗೆ ೮.೩೦ ಸುಮಾರಿಗೆ ಶಮೀರ್ ಮೊಬೈಲ್ ಫೋನಿನಿಂದ ವ್ಯಾಟ್ಸಾö್ಯಪ್ ಅಪ್ಲಿಕೇಶನ್ ಮಾಯವಾಗಿತ್ತು. ಬಳಿಕ ೩ ಗಂಟೆಗಳ ನಂತರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗಿರುವ ಸಂದೇಶಗಳು ಬರಲಾರಂಭಿಸಿದ್ದವು. ಆದರೆ ಯಾವುದೇ ಕರೆಗಳಾಗಲಿ, ಓಟಿಪಿ ಸಂದೇಶಗಳು ಬಂದಿರಲಿಲ್ಲ. ದಿಢೀರ್ ಹಣ ವರ್ಗಾವಣೆಯಿಂದ ಆತಂಕಕ್ಕೀಡಾದ ಶಮೀರ್ ಬ್ಯಾಂಕ್ ಗಮನಕ್ಕೆ ತಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅತ್ಯಂತ ಸುರಕ್ಷಿತವಾಗಿರುವ ಬ್ಯಾಂಕ್ ಅಪ್ಲಿಕೇಶನ್‌ನಿಂದ ಈ ರೀತಿ ಹಣ ವರ್ಗಾವಣೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ ಹಾಗೂ ಕಷ್ಟಪಟ್ಟು ಸಂಪಾದನೆ ಮಾಡಿದ ಹಣ ಕಳೆದುಕೊಂಡಿರುವುದರ ಬಗ್ಗೆ ಶಮೀರ್ ‘ಶಕಿ’್ತಯೊಂದಿಗೆ ಅಳಲನ್ನು ತೋಡಿಕೊಂಡಿದ್ದಾರೆ.
ಅನಾಮಿಕ ಲಿಂಕ್‌ಗಳನ್ನು ಒತ್ತುವುದು, ಓಟಿಪಿ ನೀಡುವುದು ಅಥವಾ ಬೇರೆಯವರಿಗೆ ಮೊಬೈಲ್ ನೀಡಿದರೆ ಈ ರೀತಿಯಾಗಿ ಸಂಭವಿಸಲು ಸಾಧ್ಯವಿದೆ. ಆದರೆ ಈ ರೀತಿ ಯಾವುದೂ ಮಾಡದೆ ಹಣ ವರ್ಗಾವಣೆ ಆಗಿರುವುದು ಹೊಸ ದೋಖ ಎನಿಸಿಕೊಂಡಿದೆ. ಈ ಬಗ್ಗೆ ಹಣ ಕಳೆದು ಕೊಂಡಿರುವವರಿAದ ಲಿಖಿತ ಮನವಿಯನ್ನು ಪಡೆದು ಮುಖ್ಯ ಕಚೇರಿಗೆ ರವಾನಿಸಲಾಗಿದೆ ಎಂದು ಬ್ಯಾಂಕ್ ವ್ಯವಸ್ಥಾಪಕರು ಮಾಹಿತಿ ನೀಡಿದರು.
-ಎ.ಎಸ್, ಮುಸ್ತಫ, ಸಿದ್ದಾಪುರ