ಪೊನ್ನಂಪೇಟೆ, ಮೇ ೧೩: ಸುಮಾರು ೮ ದಶಕಗಳ ಇತಿಹಾಸ ಹೊಂದಿರುವ ಕೆರೆಯ ದಂಡೆ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿ ಮಾಡಿತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ಬಾಳಲೆ ಹೋಬಳಿಯ ದೇವನೂರಿನಲ್ಲಿ ನಡೆದಿದೆ. ಬಾಳಲೆ ಗ್ರಾಮದ ದೇವನೂರಿನ ಬೆಟ್ಟತ್ತೂರು ಕೆರೆ ಎಂದೇ ಹೆಸರು ವಾಸಿಯಾಗಿರುವ ಪೈಸಾರಿ ಕೆರೆ ಅಂದಾಜು ೧೨.೫ ಎಕರೆ ವಿಸ್ತೀರ್ಣ ಹೊಂದಿದೆ. ಕೆರೆ ದಂಡೆಗೆ ಈ ವರ್ಷ ಸಣ್ಣ ನೀರಾವರಿ ಇಲಾಖೆ ಮೂಲಕ ೧ ಕೋಟಿ ೫೦ ಲಕ್ಷ ರೂಪಾಯಿಗಳ ತಡೆಗೋಡೆ ಕಾಮಗಾರಿ ನಡೆಸಲಾಗುತ್ತಿದ್ದು, ಈ ನಾಲೆಯಲ್ಲಿ ಸುಮಾರು ೫ - ೬ ವರ್ಷದಿಂದ ಬಿದಿರು ಹಾಗೂ ಇನ್ನಿತರ ಕುರುಚಲು ಕಾಡುಗಳು ಬೆಳೆದಿದ್ದು, ಇವುಗಳನ್ನು ಹಿಟಾಚಿ ಯಂತ್ರದ ಮೂಲಕ ತೆರವುಗೊಳಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ತಡೆಯೊಡ್ಡಿದ್ದರು. ಇದರಿಂದಾಗಿ ಕೆರೆಯ ತಡೆಗೋಡೆ ಕಾಮಗಾರಿಗೂ ತೊಡಕುಂಟಾಗಿತ್ತು. ಆದ್ದರಿಂದ ಅರಣ್ಯ ಇಲಾಖೆ ಧೋರಣೆ ಖಂಡಿಸಿ ಅಲ್ಲಿನ ಗ್ರಾಮಸ್ಥರು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳ ಗಮನ ಸೆಳೆದಿದ್ದರು. ರೈತ ಸಂಘದ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅರಣ್ಯ ಇಲಾಖೆಯ ಆನೆ ಚೌಕೂರು ವಿಭಾಗದ ಆರ್ಎಫ್ಓ ದೇವರಾಜು ಅವರನ್ನು ಸ್ಥಳಕ್ಕೆ ಬರಮಾಡಿಕೊಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೆರೆಯ ೧೦೦ ಮೀಟರ್ ದೂರದಲ್ಲಿ ಅರಣ್ಯ ಕಂದಕದ ಮೂಲಕ ಗಡಿ ಗುರುತಿಸಲಾಗಿದೆ. ನಾಲೆ ಹಾಗೂ ಕೆರೆ, ಕಂದಾಯ ಇಲಾಖೆಗೆ ಒಳಪಟ್ಟಿದ್ದು, ಅರಣ್ಯ ಇಲಾಖೆ ಅದರ ಮೇಲೆ ಹಕ್ಕು ಸ್ಥಾಪಿಸುತ್ತಿರುವುದು ಸರಿಯಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದರು. ಮಳೆಗಾಲ ಪ್ರಾರಂಭಕ್ಕೂ ಮುನ್ನ ಕಾಮಗಾರಿ ಮುಕ್ತಾಯವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಮಗಾರಿಗಳಿಗೆ ವಿನಾ ಕಾರಣ ಅಡ್ಡಿ ಮಾಡದೆ ಸಹಕರಿಸುವಂತೆ ಮನವಿ ಮಾಡಿದರು. ರೈತ ಸಂಘದ ಒತ್ತಾಯಕ್ಕೆ ಮಣಿದ ಅರಣ್ಯ ಅಧಿಕಾರಿಗಳು, ಕಾಮಗಾರಿ ನಡೆಸುವಂತೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಅರುಣ್ ಕುಮಾರ್ ಅವರಿಗೆ ಸೂಚಿಸಿದರು.
ಈ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಸ್ ಸುಬ್ಬಯ್ಯ, ಮಾಯಾಮುಡಿ ಗ್ರಾಮದ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಪುಚ್ಚಿಮಾಡ ಸಂತೋಷ್, ಬಾಳಲೆ ಹೋಬಳಿ ಅಧ್ಯಕ್ಷ ಮೇಚಮಾಡ ಕಿಸಾ ಮಾಚಯ್ಯ, ಸಂಚಾಲಕ ಲೆಹರ್ ಬಿದ್ದಪ್ಪ, ಗ್ರಾಮಸ್ಥರಾದ ರಾಜು, ಮುದ್ದಿಯಡ ಪಿ.ದಿನೇಶ್, ಎಂ.ಎನ್ ಮುತ್ತಪ್ಪ, ಕೆ.ಎಂ ಜಯ, ಕೆ.ಎಂ ಗಣಪತಿ ಹಾಗೂ ಗ್ರಾಮಸ್ಥರು ಹಾಜರಿದ್ದರು.