ಕಣಿವೆ, ಮೇ ೧೨: ಈ ಬಾರಿ ನೀರಿನ ಕೊರತೆಯ ನಡುವೆಯೂ ರೈತರು ಬೆಳೆದಿರುವ ಹಣದ ಬೆಳೆ ಶುಂಠಿಗೆ ಇದೀಗ ಸುರಿಯುತ್ತಿರುವ ಮಳೆ ನವಚೈತನ್ಯ ನೀಡಿದೆ.
ನೀರಿನ ಸೆಲೆ ವ್ಯಾಪಕವಾಗಿರುವ ಕೊಳವೆ ಬಾವಿಗಳಲ್ಲಿ ನೀರನ್ನು ಮೇಲೆತ್ತಿ ಅದೆಷ್ಟೇ ಹರಿಸಿದರೂ ಕೂಡ ವರುಣನ ಒಂದೇ ಒಂದು ಸಿಂಚನಕ್ಕೆ ಅದು ಸಮವಿಲ್ಲ.
ಸ್ವಾಭಾವಿಕವಾದ ಮಳೆಯ ನೀರಿನಲ್ಲಿ ವ್ಯಾಪಕವಾದ ನೈಟ್ರೋಜನ್ ಇರುವ ಕಾರಣ ಅನೇಕ ಬೆಳೆಗಳಿಗೆ ಈ ಮಳೆ ಹೊಸ ಜೀವ ಕಳೆ ನೀಡುತ್ತದೆ. ಹಾಗಾಗಿ ಇದೀಗ ಸುರಿದ ಮಳೆಗೆ ಶುಂಠಿ ಬೆಳೆಗಾರರು ಸಂತಸಗೊAಡಿದ್ದಾರೆ. ವಾಡಿಕೆಯ ಮಳೆ ಈ ಸಾಲಿನಲ್ಲಿ ಕೈಕೊಟ್ಟ ಕಾರಣ ಈ ಸಾಲಿನಲ್ಲಿ ಶುಂಠಿ ಬೆಳೆಯ ಮೇಲೆ ಮಾರಕವಾದ ದುಷ್ಪರಿಣಾಮ ಬೀರಿದೆ.
ಅಂದರೆ ಕಳೆದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ವಾಡಿಕೆಯ ಒಂದೇ ಒಂದು ಮಳೆ ಸುರಿಯದ ಕಾರಣ ಪ್ರಮುಖ ತೋಟಗಾರಿಕಾ ಬೆಳೆ ಶುಂಠಿ ಬೆಳೆಗಾರರಿಗೆ ಅಪಾರ ಪ್ರಮಾಣದ ಹಿನ್ನಡೆ ಉಂಟು ಮಾಡಿತ್ತು.
ಶುಂಠಿ ಬೀಜ ಬಿತ್ತನೆಯ ಹೊತ್ತಲ್ಲಿಯೇ ಕೊಳವೆ ಬಾವಿಗಳು ಅನೇಕ ಕಡೆಗಳಲ್ಲಿ ಕೈ ಕೊಟ್ಟ ಕಾರಣ ಬೀಜ ಬಿತ್ತನೆಗೆ ಹಿನ್ನಡೆಯಾಯಿತು.
ಅದೆಷ್ಟೋ ಮಂದಿ ಬಿತ್ತಿದ ಬೀಜದ ಹೊಲ ಗದ್ದೆಗಳಿಗೆ ನೀರು ಹರಿಸಲಾಗದೇ ಮರಳಿ ಬಿತ್ತನೆ ಬೀಜವನ್ನು ಉಳುಮೆ ಮಾಡಿ ಆರಿಸಿಕೊಂಡು ಬಂದಷ್ಟು ಬರಲೆಂದು ಮಾರುಕಟ್ಟೆಗೆ ಒಯ್ದು ಮಾರಾಟ ಮಾಡಿ ನಷ್ಟದಿಂದ ಬೇಸತ್ತು ಮಕಾಡೆ ಮಲಗಿದ ಉದಾಹರಣೆಗಳೂ ಸಾಕಷ್ಟಿವೆ.
ಅತ್ತ ಮಳೆಯೂ ಬರಲಿಲ್ಲ. ಇತ್ತ ಕಾವೇರಿ ನದಿಯೂ ಪೂರ್ಣ ಪ್ರಮಾಣದಲ್ಲಿ ಬತ್ತಿದ ಪರಿಣಾಮ ಶುಂಠಿ ಬೆಳೆಗಾರರು ಮಳೆಯನ್ನೇ ಕಾದು ಕೂರುವಂತಹ ಸ್ಥಿತಿ ನಿರ್ಮಾಣವಾಯಿತು.
ಇತ್ತ ಬೀಜೋಪಚಾರಕ್ಕೆ ಸಿದ್ದಪಡಿಸಿದ್ದ ಶುಂಠಿ ಇಟ್ಟಲ್ಲಿಯೇ ಮೊಳಕೆಯೊಡೆದು ಹಾನಿಯಾಗುತ್ತಿದ್ದರೂ ಕೂಡ ಅದನ್ನು ಬಿತ್ತನೆ ಮಾಡುವಲ್ಲಿ ಬಿಸಿಲ ಝಳ ಹಾಗೂ ನೀರಿನ ಕೊರತೆ ರೈತರ ಕೈಗಳನ್ನು ಕಟ್ಟಿ ಹಾಕಿತ್ತು.
ರೈತರು ಮತ್ತು ಭಕ್ತರಾಶಿಯ ಅಪಾರ ಶ್ರದ್ಧೆ ಹಾಗೂ ನಂಬಿಕೆಯ ಮಹಾಶಿವರಾತ್ರಿ ಹಾಗೂ ಯುಗಾದಿ ಕಳೆದ ಬಳಿಕವಾದರೂ ಮಳೆ ಬರುತ್ತೆ ಎಂಬ ನಂಬಿಕೆ ಈ ಬಾರಿ ಹಸಿಯಾಯಿತು.
ಆದರೆ ಬಸವ ಜಯಂತಿಯAದಾದರೂ ಮಳೆ ಬಂದೇ ಬರುತ್ತೆ ಎಂಬ ನಂಬಿಕೆ ಮಾತ್ರ ಹುಸಿಯಾಗಲಿಲ್ಲ. ಬಸವ ಜಯಂತಿಯ ಆಸು ಪಾಸಿನ ದಿನಗಳಲ್ಲಿ ವ್ಯಾಪಕವಾದ ಮಳೆಯ ಆರ್ಭಟ ನೋವಿನ ಮೇಲೆ ನೋವುಂಡ ರೈತರಿಗೆ ನವಚೈತನ್ಯ ತಂದAತಾಗಿದೆ.
ಬೆಳೆಗೆ ನೀರು ಹರಿಸು ಎಂದು ಬೇಡುತ್ತಿದ್ದ ರೈತನ ಹೊಲ ಗದ್ದೆಗಳ ಮಣ್ಣು ಕೊಚ್ಚಿ ಹೋಗುವಷ್ಟು ಪ್ರಮಾಣದಲ್ಲಿ ಮಳೆ ಸುರಿಯಲಾರಂಭಿಸಿದೆ.
- ಕೆ.ಎಸ್. ಮೂರ್ತಿ, ಕಣಿವೆ