ಗೋಣಿಕೊಪ್ಪಲು.ಮೇ.೧೩: ಒಕ್ಕಲಿಗರ ಯುವ ವೇದಿಕೆ ಪೊನ್ನಂಪೇಟೆ, ವೀರಾಜಪೇಟೆ ತಾಲೂಕು ಸಮಿತಿ ವತಿಯಿಂದ ೩ ದಿನಗಳ ಕಾಲ ನಡೆದ ಒಕ್ಕಲಿಗರ ಸಾಂಸ್ಕೃತಿಕ ಮತ್ತು ಕ್ರೀಡಾ ಸಮ್ಮಿಲನವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಹಾತೂರು ಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರಿಕೆಟ್, ಹಗ್ಗ ಜಗ್ಗಾಟ, ಶಾಟ್‌ಪುಟ್, ರಂಗೋಲಿ ಸ್ಪರ್ಧೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸಮಿತಿಯ ವಿ.ಪಿ. ಡಾಲು ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಗ್ರಾಮ ಲೆಕ್ಕಿಗ ವಿ.ಜಿ. ಗೋಪಾಲಕೃಷ್ಣ, ವಕೀಲ ಡಿ.ಎ. ಚಂದ್ರಶೇಖರ್, ಕಾರ್ಮಾಡು ಬೆಳೆಗಾರÀ ವಿ.ಎಸ್. ಸುಬ್ರಮಣಿ, ಕೋಟೆಕೊಪ್ಪ ಬೆಳೆಗಾರ ವಿ.ಎಲ್.ಸುರೇಶ್, ಉದ್ಯಮಿ ವಿ.ಜೆ. ದಿನೇಶ್, ಬೆಳೆಗಾರ ಡಿ.ಎಸ್. ಕೀರ್ತೀ, ವಿ.ಕೆ. ಪ್ರದೀಪ್, ಹೆಚ್.ಜಿ. ಭವಿನ್, ವಿ. ಮಹೇಶ್,ಒಕ್ಕಲಿಗರ ಯುವ ವೇದಿಕೆಯ ಗೌರವ ಅಧ್ಯಕ್ಷ ವಿ.ಪಿ. ಲೋಹಿತ್ ಗೌಡ, ಉಪಾಧ್ಯಕ್ಷ ಕೆ.ಪಿ. ಅಜಿತ್, ಕಾರ್ಯದರ್ಶಿ ವಿ.ಟಿ. ಶ್ರೇಯಸ್, ಹಾರಂಗಿ ಜಲಾಶಯದ ಸಲಹಾ ಸಮಿತಿ ಸದಸ್ಯ ಕೆ.ಎಸ್.ಗೋಪಾಲಕೃಷ್ಣ, ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಣ್ಣಂಗಾಲ ಹಾಗೂ ಕೋಟೆಕೊಪ್ಪ ತಂಡಗಳ ನಡುವೆ ನಡೆದ ಅಂತಿಮ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಣ್ಣಂಗಾಲ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಕೋಟೆಕೊಪ್ಪ ತಂಡ ಗಳಿಸಿತು. ಹಾತೂರು ತಂಡ ತೃತೀಯ ಹಾಗೂ ಕೈಕೇರಿ ತಂಡ ನಾಲ್ಕನೆ ಸ್ಥಾನ ಹಂಚಿಕೊAಡವು.
ಉತ್ತಮ ಬ್ಯಾಟ್ಸ್ಮನ್ ಆಗಿ ರವಿಕುಮಾರ್, ಮ್ಯಾನ್ ಆಫ್‌ದಿ ಸೀರಿಸ್ ಭರತ್‌ಗೌಡ, ಬೆಸ್ಟ್ ಬೌಲರ್ ಶಭರೀಶ್, ಎಮರ್ಜಿಂಗ್ ಪ್ಲೇಯರ್ ತೇಜಸ್ವಿ, ಬೆಸ್ಟ್ ವಿಕೆಟ್ ಕೀಪರ್ ಗೌರಿ ಶಂಕರ್, ಬೆಸ್ಟ್ ಕ್ಯಾಚರ್ ದಿಲನ್, ಹಿರಿಯ ಆಟಗಾರ ಹರೀಶ್‌ಗೌಡ ,ಹೆಚ್ಚು ಸಿಕ್ಸರ್ ಬಾರಿಸಿದ ಜೀವನ್ ಗೌಡ, ಹೆಚ್ಚು ಬೌಂಡರಿ ಬಾರಿಸಿದ ಅಲೋಕ್ ಗೌಡ ಹಾಗೂ ಉತ್ತಮ ಆಟಗಾರ ಭರತ್‌ಗೌಡ ಅವರಿಗೆ ಬಹುಮಾನ ನೀಡಲಾಯಿತು.
ರೋಚಕ ಹಗ್ಗ ಜಗ್ಗಾಟ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಹಾತೂರು ತಂಡವು ಕೋತೂರುವಿನ ಮಾರಮ್ಮ ತಂಡವನ್ನು ಸೋಲಿಸುವ ಮೂಲಕ ಈ ಬಾರಿಯ ಪ್ರಶಸ್ತಿ ವಿಜೇತರಾದರು. ದ್ವಿತೀಯ ಸ್ಥಾನವನ್ನು ಮಾರಮ್ಮ ತಂಡ ಪಡೆಯಿತು. ಮಹಿಳಾ ವಿಭಾಗದಲ್ಲಿ ಹಾತೂರು ತಂಡ ಜಯಗಳಿಸಿತು. ಕೋತೂರುವಿನ ಮಾರಮ್ಮ ದ್ವೀತಿಯ ಸ್ಥಾನ ಪಡೆದವು. ಮಹಿಳೆಯರ ಥ್ರೋಬಾಲ್‌ನಲ್ಲಿ ಕೋಟೆಕೊಪ್ಪ ತಂಡವು ಕಣ್ಣಂಗಾಲ ತಂಡವನ್ನು ಸೋಲಿಸಿ ಈ ಬಾರಿಯ ಪ್ರಶಸ್ತಿ ಪಡೆದರು. ದ್ವಿತೀಯ ಸ್ಥಾನವನ್ನು ಕಣ್ಣಂಗಾಲ ತಂಡ ಪಡೆಯಿತು.
(ಮೊದಲ ಪುಟದಿಂದ) ಮೂರು ದಿನಗಳ ಕಾಲ ನಡೆದ ಸಾಂಸ್ಕೃತಿಕ ಸಮ್ಮಿಲನದಲ್ಲಿ ತಾಲೂಕಿನ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯ ಬಾಂಧವರು ಪಾಲ್ಗೊಂಡಿದ್ದರು. ಯುವತಿಯರು, ಪುಟಾಣಿ ಮಕ್ಕಳು ಹಲವು ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಿ, ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ಹಾಗೂ ಯುವತಿಯರಿಗೆ ಉದ್ದ ಜಡೆಯ ಪೈಪೋಟಿ ನಡೆಸಲಾಯಿತು. ಹಲವು ಯುವತಿಯರು ಹಾಗೂ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.
ತೀರ್ಪುಗಾರರಾಗಿ ಆಶಿಕ್, ಹೇಮಂತ್, ಸತೀಶ್, ಸುಮಂತ್ ಹಾಗೂ ಶರೀಫ್ ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ವಿ.ಪಿ.ಡಾಲು ಮಾತನಾಡಿ ಸಮುದಾಯ ಬಾಂಧವರು ವಾರ್ಷಿಕ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ವೇದಿಕೆಯೊಂದಿಗೆ ಹಂಚಿಕೊಳ್ಳಬೇಕು. ಪ್ರತಿ ವರ್ಷವೂ ಸಾಂಸ್ಕೃತಿಕ ಹಾಗೂ ಕ್ರೀಡೋತ್ಸವ ಯಶಸ್ವಿಯಾಗಿ ಜರುಗುತ್ತಿದೆ ಎಂದರು.