ಮಡಿಕೇರಿ, ಮೇ ೧೪: ಜಾನಪದ ಬ್ರಹ್ಮ ನಡಿಕೇರಿಯಂಡ ಚಿಣ್ಣಪ್ಪ ಅವರ ೧೫೦ನೇ ಜನ್ಮದಿನದ ಅಂಗವಾಗಿ ಮುಂದಿನ ವರ್ಷ ಏಪ್ರಿಲ್ನಲ್ಲಿ ನಡೆಯುವ ಕೊಡವ ಜಾನಪದ ನಮ್ಮೆಗೆ ಪೂರ್ವಭಾವಿಯಾಗಿ ಹಮ್ಮಿಕೊಳ್ಳ ಲಾಗುತ್ತಿರುವ ಕಾರ್ಯಕ್ರಮಕ್ಕೆ ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು ನಡಿಕೇರಿಯಂಡ ಐನ್ಮನೆ, ನೆಲ್ಲಕ್ಕಿ ನಡುಬಾಡೆಯಲ್ಲಿ ಒಕ್ಕಣೆ ಕಟ್ಟುವ ಮೂಲಕ ಅಧಿಕೃತ ಚಾಲನೆ ನೀಡಿದರು.
ಕೊಡವಾಮೆರ ಕೊಂಡಾಟ ಸಂಘಟನೆಯ ನೇತೃತ್ವದಲ್ಲಿ ನಡೆಯುವ ಕೊಡವ ಜಾನಪದ ನಮ್ಮೆಗೆ ಕರಡ ಗ್ರಾಮದ ನಡಿಕೇರಿಯಂಡ ಐನ್ಮನೆ ಯಲ್ಲಿ ಚಾಲನೆ ನೀಡಲಾಯಿತು. ಇಂದು ಪೂರ್ವಾಹ್ನ, ಕೊಡವಾಮೆರ ಕೊಂಡಾಟ ಸಂಘಟನೆಯ ಪದಾಧಿಕಾರಿಗಳನ್ನು ನಡಿಕೇರಿಯಂಡ ಒಕ್ಕ ಪ್ರಮುಖರು ಕೊಡವ ಸಂಪ್ರದಾಯಿಕವಾಗಿ ಸ್ವಾಗತಿಸಿ ನಡಿಕೇರಿಯಂಡ ಒಕ್ಕ ಕೈಮಡಕ್ಕೆ ತೆರಳಿ ಗುರುಕಾರೋಣರನ್ನ ಪ್ರಾರ್ಥಿಸಿ, ನಂತರ ಬಲ್ಯಮನೆಯ ನೆಲ್ಲಕ್ಕಿ ನಡುಬಾಡೆಯಲ್ಲಿ ಒಕ್ಕಣೆ ಕಟ್ಟುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಸAಘಟನೆ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಕೊಡವ ಜಾನಪದ ನಮ್ಮೆಯ ಯಶಸ್ಸಿಗೆ ಪ್ರಾರ್ಥಿಸಿ ಒಕ್ಕಣೆ ಕಟ್ಟಿದರೆ ನೆರೆದಿದ್ದ ನಡಿಕೇರಿಯಂಡ ಒಕ್ಕ ಸದಸ್ಯರು ಧನಿಗೂಡಿಸಿದರು. ಅಕ್ಕಿ ಹಾಕುವ ಮೂಲಕ ಅಧಿಕೃತ ಚಾಲನೆ ದೊರೆಯಿತು. ಇದೇ ಸಂದರ್ಭದಲ್ಲಿ ಕೊಡವಾಮೆರ ಸಂಘಟನೆಯು ಕೊಡವ ಮೂಲ ಪದ್ದತಿಯಂತೆ ನಡಿಕೇರಿಯಂಡ ಒಕ್ಕಡ ಸಹಕಾರ ಕೋರಿದರು.
ನಂತರ ಕೊಡವಾಮೆರ ಕೊಂಡಾಟ ಮತ್ತು ನಡಿಕೇರಿಯಂಡ ಒಕ್ಕ ಸದಸ್ಯರು ಜಾನಪದ ನಮ್ಮೆಯ ಕುರಿತು ಪೂರ್ವಭಾವಿ ಸಭೆ ನಡೆಸಿದರು. ಚಾಮೆರ ದಿನೇಶ್ ಅವರು ಕಾರ್ಯಕ್ರಮದ ರೂಪುರೇಷೆ ಮತ್ತು ಉದ್ದೇಶದ ಕುರಿತು ಕೂಲಂಕುಶ ಮಾಹಿತಿ ನೀಡಿದರೆ, ನಡಿಕೇರಿಯಂಡ ಒಕ್ಕ ಸದಸ್ಯರು ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಸಹಕಾರ ಘೋಷಿಸಿದರು. ನಂತರ ನಡಿಕೇರಿಯಂಡ ಒಕ್ಕವು ಅದ್ದೂರಿ ಭೋಜನದೊಂದಿಗೆ ಕೊಡವಾಮೆರ ಕೊಂಡಾಟ ಸಂಘಟನೆ ಪದಾಧಿಕಾರಿಗಳನ್ನು ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆ ಉಪಾಧ್ಯಕ್ಷೆ ಕುಲ್ಲಚಂಡ ವಿನುತ ಕೇಸರಿ, ಕಾರ್ಯದರ್ಶಿ ಗಿರೀಶ್ ಭಿಮಯ್ಯ, ಸಹಕಾರ್ಯದರ್ಶಿ ಮಲ್ಲಂಡ ದರ್ಶನ್ ಮುತ್ತಪ್ಪ, ನಿರ್ದೇಶಕರಾದ ಅಜ್ಜಮಕ್ಕಡ ವಿನು ಕುಶಾಲಪ್ಪ, ಚಾಮೆರ ಪ್ರಿಯ ದಿನೇಶ್, ನಡಿಕೇರಿಯಂಡ ಒಕ್ಕ ಅಧ್ಯಕ್ಷ ನಡಿಕೇರಿಯಂಡ ಕಿಶೋರ್ ತಿಮ್ಮಯ್ಯ, ಪಟ್ಟೋಲೆಪಳಮೆ ಸಂಪಾದಕ ನಡಿಕೇರಿಯಂಡ ಚಿಣ್ಣಪ್ಪ ಅವರ ಮರಿಮಗ ನಡಿಕೇರಿಯಂಡ ನೀರಜ್ ಚಿಣ್ಣಪ್ಪ ಕುಟುಂಬ ಪ್ರಮುಖರಾದ ಸೋಮಯ್ಯ, ತಮ್ಮಯ್ಯ, ಬೋಸ್ ಮಂದಣ್ಣ, ಅಚ್ಚಯ್ಯ, ನಂದ, ಸುಬ್ಬಯ್ಯ, ಚಿಣ್ಣಪ್ಪ, ಮಾಚಯ್ಯ, ತಿಮ್ಮಯ್ಯ ಸೆರಿದಂತೆ ಕುಟುಂಬದ ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು.