ಕಣಿವೆ, ಮೇ ೧೪: ಸತತವಾಗಿ ಕಳೆದ ಐದು ತಿಂಗಳಿನಿAದ ಸಮರ್ಪಕವಾದ ಮಳೆ ಸುರಿಯದ ಕಾರಣ ಭೂ ಒಡಲು ಕಾದು ಕಾದು ಹೈರಾಣಾಗಿತ್ತು.
ಇದೀಗ ಕಳೆದ ಐದಾರು ದಿನಗಳಿಂದ ಸುರಿದ ಮಳೆಯಿಂದಾಗಿ ಬಿಸಿಲಿಗೆ ಕಾದಿದ್ದ ಇಳೆಯ ತಾಪ ಒಂದಷ್ಟು ಕಡಿಮೆಯಾಗಲಾರಂಭಿಸಿದೆ.
ಜೀವ ನದಿ ಕಾವೇರಿ ಹರಿದಿರುವ ಪ್ರದೇಶದುದ್ದಕ್ಕೂ ಮಳೆ ಸುರಿದಿರುವುದು ಮತ್ತು ಸುರಿಯುತ್ತಲೇ ಇರುವುದು ಬಿಸಿಲ ತಾಪಕ್ಕೆ ಸಿಲುಕಿ ಬಳಲಿದವರಿಗೆ ಕೊಂಚ ಹಿತ ತಂದAತಾಗಿದೆ. ರಸ್ತೆಯ ಇಬ್ಬದಿಗಳಲ್ಲಿ ಹಸಿರು ಹುಲ್ಲು ಬೆಳೆಯಲಾರಂಭಿಸಿದೆ. ಬಿಸಿಲ ತಾಪದಿಂದಾಗಿ ಎಸಿ, ಫ್ಯಾನ್ ಗಳು ಇಲ್ಲದೇ ಮನೆಯೊಳಗೆ ಇರಲಾರದ ದುಸ್ಥಿತಿಗೆ ಒಂದಷ್ಟು ಪರಿಹಾರ ದೊರೆತಂತಿದೆ.
ಬಿಸಿಲ ಝಳಕ್ಕೆ ಕಾದು ಕಾದು ಬಸವಳಿದಿದ್ದ ಮನೆಯ ಸುತ್ತಲಿನ ಗೋಡೆಗಳು, ಮನೆಗಳ ಆಸುಪಾಸು ಮಳೆಯಿಂದಾಗಿ ಹಿತಾನುಭವ ಹೊಂದುತ್ತಿವೆ.
ಚೇತರಿಕೆ ಕಂಡ ಕೊಳವೆ ಬಾವಿಗಳು
ಬಿಸಿಲ ನರ್ತನಕ್ಕೆ ಬಳಲಿ ಪಾತಾಳ ಸೇರಿದ್ದ ಅಂತರ್ಜಲಕ್ಕೆ ಒಂದಷ್ಟು ಮರು ಜೀವ ಬಂದAತಾಗಿದೆ. ಬತ್ತಿ ಹೋಗಿದ್ದ ಕೊಳವೆ ಬಾವಿಗಳಿಗೆ ಈ ಮಳೆ ಮರು ಜೀವ ನೀಡಿದಂತಾಗಿದೆ.
ಕಾವೇರಿ ನದಿಯಲ್ಲಿ ನೀರಿಲ್ಲದೆ ನದಿ ಒಣಗಿದ ಪರಿಣಾಮ ಮನೆಗಳಲ್ಲಿ ನೀರಿನ ಬಳಕೆ ಕಡಿಮೆಯಾದ ಕಾರಣ ಪೇಟೆ ಹಾಗೂ ನಗರ ಪ್ರದೇಶಗಳ ಚರಂಡಿಗಳಲ್ಲಿ ತ್ಯಾಜ್ಯ ನೀರು ಹರಿಯದೇ ಒಣಗಿ ನಿಂತ ಚರಂಡಿಗಳನ್ನು ಈ ಮಳೆ ಸಂಪೂರ್ಣವಾಗಿ ತೊಳೆದಿದೆ. ಅರ್ಥಾತ್ ಚರಂಡಿಗಳು ಸ್ವಚ್ಛಂದವಾಗಿವೆ.
ಕೃಷಿಕರಲ್ಲಿ ಮಂದಹಾಸ
ಮಳೆಗಾಗಿ ಹಗಲಿರುಳು ಕಾದು ಹಾಕಿದ್ದ ಶುಂಠಿಬಿತ್ತನೆ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದ ಕೃಷಿಕರ ಪಾಲಿಗಂತೂ ಈ ಮಳೆ ಜೀವ ಸಂಜೀವಿನಿಯಾಗಿದೆ.
ಕೊಳವೆ ಬಾವಿಗಳಿಂದ ಅದೆಷ್ಟೇ ಪ್ರಮಾಣದಲ್ಲಿ ನೀರು ಬಸಿದು ಶುಂಠಿ ಬೆಳೆಗೆ ಹರಿಸಿದರೂ ಕೂಡ ಸ್ವಾಭಾವಿಕವಾಗಿ ಸುರಿದ ಮಳೆಯ ನೀರು ಶುಂಠಿಯೂ ಸೇರಿದಂತೆ, ನೀರನ್ನು ಕಾಣದ ತೆಂಗು, ಬಾಳೆ, ಅಡಕೆ ಮೊದಲಾದ ಬೆಳೆಗಳಿಗೆ ಮಳೆಯ ನೀರು ಜೀವ ಸಂಜೀವಿನಿಯಾಗಿದೆ.
ನೀರಿಲ್ಲದೇ ಒಣಗಿ ನಿಂತ ಕಾವೇರಿ ನದಿಯಲ್ಲಿ ನೀರಿನ ಹರಿವು ಅಚ್ಚರಿಯ ರೂಪದಲ್ಲಿ ಅದು ಯಾವಾಗ ಹರಿಯಲಿದೆ ಎಂಬ ಆತಂಕದೊಡಗಿನ ವಿಶ್ವಾಸದ ನೋಟ ಎಲ್ಲರಲ್ಲೂ ಮನೆ ಮಾಡಿದೆ.
ಕಾವೇರಿ ನದಿಯ ದಕ್ಷಿಣ ಕೊಡಗಿನ ಮೇಲ್ಭಾಗದ ಪ್ರದೇಶಗಳಲ್ಲಿ ಮಳೆಯಾದ ಪರಿಣಾಮ ಕೊಂಚ ಕೊಂಚವೇ ನದಿಯಲ್ಲಿ ಹರಿಯುತ್ತಿರುವ ನೀರಿನ ಒರತೆ ನದಿಯಲ್ಲಿ ಅದು ಯಾವಾಗ ಹಣತೆ ಹಚ್ಚುವುದೋ ಕಾದು ನೋಡಬೇಕಿದೆ. - ಕೆ.ಎಸ್.ಮೂರ್ತಿ