ಮುಳ್ಳೂರು, ಮೇ ೧೪: ಸಮೀಪದ ಗೋಪಾಲಪುರ ಗ್ರಾಮದಲ್ಲಿ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನದ ೨೬ನೇ ವಾರ್ಷಿಕ ಪೂಜಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಗೋಪಾಲಪುರ ಗ್ರಾಮದ ದೇವಾಂಗ ಸಂಘದ ವತಿಯಿಂದ ಕಳೆದ ೨೬ ವರ್ಷಗಳಿಂದ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಪೂಜಾ ಮಹೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ.

ಬೆಳಿಗ್ಗೆ ೮ ಗಂಟೆಯಿAದ ಮಧ್ಯಾಹ್ನ ೧೨.೩೦ ರವರೆಗೆ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮವನ್ನು ನಡೆಸಲಾಯಿತು. ಪಂಚಾಮೃತ ಅಭಿಷೇಕ, ಶ್ರೀಸೂಕ್ತ, ದುರ್ಗಾಸೂಕ್ತ, ದೇವಿಸೂಕ್ತಗಳ ಅಭಿಷೇಕದ ನಂತರ ಗಣಪತಿ ಪೂಜೆ, ಪುಣ್ಯಾಹ, ಋತ್ವಿಕ್ ವರ್ಣ, ಕಲಶಾರಾಧನೆಯ ನಂತರ ಗಣಪತಿ ಹೋಮ, ನವಗ್ರಹ ಹೋಮ, ದುರ್ಗಾಹೋಮ, ಮೃತ್ಯುಂಜಯ ಹೋಮವನ್ನು ನೆರವೇರಿಸಲಾಯಿತು. ಬಳಿಕ ಪುಣ್ಯಾಹುತಿ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಂಜೆ ೪ ಗಂಟೆಗೆ ಶ್ರೀ ಬನಶಂಕರಿ ಅಮ್ಮನವರ ಉತ್ಸವ ಮೂರ್ತಿಯ ಮೆರವಣಿಗೆ, ವಾದ್ಯಗೋಷ್ಠಿ, ವೀರಗಾಸೆ ಕುಣಿತದೊಂದಿಗೆ ನಡೆಯಿತು.

ಅರ್ಚಕರಾದ ಪ್ರಸನ್ನಭಟ್ ಮತ್ತು ನಾಗೇಶ್‌ಭಟ್ ನೇತೃತ್ವದಲ್ಲಿ ಅರ್ಚಕರು ಪೂಜಾ ವಿಧಿ ವಿಧಾನಗಳು ನೆರವೇರಿದವು. ಪೂಜಾ ಕಾರ್ಯಕ್ರಮದಲ್ಲಿ ಸ್ಥಳೀಯ ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನ ಸಮಿತಿ ವತಿಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

-ಭಾಸ್ಕರ್ ಮುಳ್ಳೂರು