ಶನಿವಾರಸAತೆ, ಮೇ ೧೪: ಪಟ್ಟಣ ಹಾಗೂ ಹೋಬಳಿ ಯಾದ್ಯಂತ ಶುಕ್ರವಾರ ಸಂಜೆ ಹಾಗೂ ರಾತ್ರಿ ಉತ್ತಮ ಮಳೆಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮಿನುಗಿದೆ. ಪ್ರತಿದಿನ ಸಂಜೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ನಾಲ್ಕು ಹನಿ ಚೆಲ್ಲಿ ಹೋಗುತ್ತಿದ್ದ ಮಳೆಗಳು ಶುಕ್ರವಾರ ರಾತ್ರಿ ಸುಮಾರಾಗಿ ಸುರಿದು ಒಣಗಿ ನಿಂತಿದ್ದ ಭೂಮಿ ಒಡಲು ಮೊದಲ ಮಳೆಯಿಂದ ತಂಪಾಯಿತು. ಕೃಷಿ ಚಟುವಟಿಕೆಗೆ ಮುನ್ನುಡಿ ಬರೆಯಿತು. ಎಲ್ಲಾ ಬೆಳೆಯೂ ಮತ್ತೆ ಜೀವಕಳೆ ಪಡೆಯುವಂತಾಗಿದೆ.

ಶನಿವಾರಸAತೆಗೆ ವರ್ಷ ಆರಂಭದಿAದ ಈವರೆಗೆ ಒಟ್ಟು ೧.೯೫ ಸೆನ್ಸ್ ಮಳೆಯಾಗಿದೆ. ಶನಿವಾರವೂ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವಿತ್ತು.

ತೋಟಗಳಲ್ಲಿ ಕಾಫಿ ಗಿಡ, ಕಾಳುಮೆಣಸಿನ ಬಳ್ಳಿ ಒಣಗಿ ನಿಂತಿದ್ದು ಮತ್ತೆ ಚೇತರಿಸಿಕೊಳ್ಳುವ ಭರವಸೆ ಮೂಡಿಸಿದೆ. ಒಣಗಿ ನಿಂತಿದ್ದ ಶುಂಠಿ ಬೆಳೆಯ ಹೊಲದಲ್ಲಿ ಮತ್ತೆ ಜೀವಕಳೆ ತಳೆಯುವ ಹಾಗೇ ಹಸಿರು ಮೂಡಿದೆ.

ಈ ಭಾಗದ ಬಹುತೇಕ ರೈತರು ಮಳೆಯ ನೀರನ್ನೇ ಅವಲಂಭಿಸಿದ್ದು ವಾಡಿಕೆ ಮಳೆಯಾಗದೆ ಆತಂಕದಲ್ಲಿದ್ದರು. ಮುಂಗಾರು ಮಳೆ ಮತ್ತೆ ಕೈ ಕೊಡದೇ ಮುಂದುವರೆದರೆ ಮಾತ್ರ ಭತ್ತದ ಬೇಸಾಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಶೇ. ೩೦ ರಷ್ಟು ರೈತರು ಮಾತ್ರ ಹೋಬಳಿ ವ್ಯಾಪ್ತಿಯಲ್ಲಿ ಭತ್ತ ಬೆಳೆಯುತ್ತಾರೆ. ಭತ್ತದ ಬಿತ್ತನೆ ಬೀಜದ ಖರೀದಿ, ಅಗೆ ಹಾಕುವ ಸಂಭ್ರಮ ನೋಡಲಾದರೂ ತಾ. ೧೧ ರಿಂದ ಆರಂಭವಾಗಿರುವ ಕೃತ್ತಿಕ ಮಳೆ ನಕ್ಷತ್ರ ಮಳೆ ಸುರಿಸಲಿ ಎಂಬ ಆಶಾ ಭಾವನೆಯನ್ನು ಅಪ್ಪಶೆಟ್ಟಳ್ಳಿ ಗ್ರಾಮದ ಕೃಷಿ ವಿಜ್ಞಾನಿ ಎ.ಡಿ. ಮೋಹನ್ ಕುಮಾರ್ ವ್ಯಕ್ತಪಡಿಸಿದರು.

ಕಾಜೂರು ಗ್ರಾಮದ ಪ್ರಗತಿಪರ ರೈತ ಚಂದ್ರಣ್ಣ “ಶುಕ್ರವಾರ ಸುರಿದ ಮಳೆಗೆ ಭೂಮಿ ಹದಗೊಂಡಿದೆ. ಸೊಪ್ಪು ಕಡಿದು ಹಾಕಿದರೆ ಮಳೆಯಾಗಿ ಉಳುಮೆ ಮಾಡಿದಾಗ ಅದೇ ಒಳ್ಳೆಯ ಗೊಬ್ಬರವಾಗುತ್ತದೆ. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಿAದ ಬಿತ್ತನೆ ಬೀಜ ದೊರೆತರೆ ಮಾತ್ರ ಉಳಮೆ ಮಾಡಿದಾಕ್ಷಣ ಅಗೆ ಹಾಕಬಹುದು. ಆದರೆ, ಕೃಷಿ ಇಲಾಖೆ ಬಿತ್ತನೆ ಬೀಜದ ಮಾಹಿತಿಯನ್ನೇ ನೀಡುತ್ತಿಲ್ಲ’’ ಎಂದು ಬೇಸರ ವ್ಯಕ್ತಪಡಿಸಿದರು.

ಮೊದಲ ಬಾರಿ ಸುರಿದ ಮಳೆಗೆ ಸಮೀಪದ ಕಾಜೂರು ಹೊಳೆಯಲ್ಲಿ ನೀರು ಸಣ್ಣ ಝರಿಯಾಗಿ ಹರಿಯುತ್ತಿದೆ. ಕೆರೆ, ಬಾವಿಯಲ್ಲೂ ನೀರು ಜಿನುಗುತ್ತಿದೆ. ಮಳೆ ಬಿಡುವು ನೀಡದೆ ಸುರಿದರೆ ಮಾತ್ರ ರೈತರ ಬದುಕು ಹಸನಾದೀತು.