ಕಣಿವೆ, ಮೇ ೧೪: ಹೆಬ್ಬಾಲೆ ಗ್ರಾಮದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿದ್ದರೂ ಕೂಡ ಸ್ಥಳೀಯ ಪಂಚಾಯಿತಿ ಆಡಳಿತ ಮಂಡಳಿ ಕಣ್ಣು ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಗ್ರಾಮ ಪಂಚಾಯಿತಿಗೆ ಖಾಯಂ ಪಿಡಿಓ ನೇಮಕವಾಗದ ಕಾರಣ ಸಾರ್ವಜನಿಕರ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಸ್ವಚ್ಛತಾ ಕೆಲಸಗಳು ಕೂಡ ಸಮರ್ಪಕವಾಗಿಲ್ಲ. ಸಾರ್ವಜನಿಕರು ಹೆಚ್ಚು ಸಂಧಿಸುವ ಆಯಕಟ್ಟಿನ ಸ್ಥಳಗಳಲ್ಲಿ ಸ್ವಚ್ಛತೆ ಇಲ್ಲದ ಕಾರಣ ಗ್ರಾಮದ ಮೂಲಕ ಸಾಗುವವರು ಸ್ಥಳೀಯ ಪಂಚಾಯಿತಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಈ ಕುರಿತು ‘ಶಕ್ತಿ' ಯೊಂದಿಗೆ ಮಾತನಾಡಿದ ಹೆಬ್ಬಾಲೆ ಗ್ರಾಮದ ನಿವಾಸಿ ಮಂಜುನಾಥ್ , ಪರಮೇಶ್, ಪ್ರಸನ್ನ ಕುಮಾರ್, ಶೇಖರ್ ಮೊದಲಾದವರು ಹೆಬ್ಬಾಲೆ ಗ್ರಾಮ ಪಂಚಾಯಿತಿ ವತಿಯಿಂದ ಕಳೆದ ಐದು ವರ್ಷಗಳ ಹಿಂದೆ ರೂ. ೪ ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಸಾರ್ವಜನಿಕ ಶೌಚಾಲಯ ಸಾರ್ವಜನಿಕರ ಬಳಕೆಗೆ ಲಭ್ಯವಾಗಿಲ್ಲ. ಹಾಳು ಬಿದ್ದ ಶೌಚಾಲಯದಲ್ಲಿ ಈ ಹಿಂದೆ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಹಾಗಾಗಿ ಈ ಕಟ್ಟಡವನ್ನು ಬಳಸದೇ ಕಡೆಗಣಿಸಿದ ಪರಿಣಾಮ ಕಟ್ಟಡದ ಗೋಡೆಗಳು ಬಿರುಕುಗೊಂಡಿವೆ ಎಂದು ತಿಳಿಸಿದ್ದಾರೆ.

ತಾಲೂಕಿನಲ್ಲಿಯೇ ಅತ್ಯಂತ ದೊಡ್ಡ ಗ್ರಾಮ ಪಂಚಾಯಿತಿ ಯಾಗಿರುವ ಈ ಪಂಚಾಯಿತಿ ವ್ಯಾಪ್ತಿಯ ಸ್ವಚ್ಛತೆಗೆ ಕನಿಷ್ಟ ಐದಾರು ಮಂದಿ ಸ್ವಚ್ಛತಾ ಸಿಬ್ಬಂದಿಗಳು ಇರಬೇಕಾಗಿದ್ದರೂ ಕೇವಲ ಓರ್ವ ಸ್ವಚ್ಛತಾ ಸಿಬ್ಬಂದಿ ಇದ್ದಾರೆ. ಆದ್ದರಿಂದ ಹೆಚ್ಚುವರಿ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಕ ಮಾಡಬೇಕೆಂದು ಗ್ರಾಮದ ಪ್ರಮುಖರು ಆಗ್ರಹಿಸಿದ್ದಾರೆ.

ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರದ ಸಂತೆ ಮಾರುಕಟ್ಟೆಯೂ ನಡೆಯುತ್ತಿದ್ದು ಅದೂ ಕೂಡ ಸ್ವಚ್ಛತೆ ಇಲ್ಲದೆ ಸೊರಗುತ್ತಿದೆ. ಕೂಡಲೇ ಪಂಚಾ ಯಿತಿಯ ಹಿರಿಯ ಅಧಿಕಾರಿಗಳು ಇತ್ತ ಧಾವಿಸಿ ಬಂದು ಸೂಕ್ತ ರೀತಿಯಲ್ಲಿ ತಪಾಸಣೆಗೈದು ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಪಂಚಾಯಿತಿಗೆ ಖಾಯಂ ಪಿಡಿಓ ನೇಮಿಸಬೇಕು ಹಾಗೂ ಇನ್ನಿತರೇ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕೆAದು ಗ್ರಾಮಸ್ಥರು ಕೋರಿದ್ದಾರೆ.