ಕಣಿವೆ, ಮೇ ೧೩: ‘ದೊಡ್ಡ ಹೊಟ್ಟೆಯ ಮುಗ್ಧ ಜೀವಿಗಳು ನಾವು ಕೇಳಿಸುವುದೇ ಇಲ್ಲವೇ ನಿಮಗೆ ನಮ್ಮೊಡಲ ನೋವು...?’

ಇದು ಕಾಡಾನೆಗಳು ಅರಣ್ಯ ಇಲಾಖೆಯೂ ಸೇರಿದಂತೆ ಮಾನವ ಸಂಕುಲಕ್ಕೆ ಕೇಳುತ್ತಿರುವ ಮೂಕರೋಧನದ ಪ್ರಶ್ನೆ.

ಕಾಡಾನೆಗಳಿಗೆ ದಿನವೊಂದಕ್ಕೆ ಕನಿಷ್ಟ ೨೫೦ ರಿಂದ ೩೦೦ ಕೆ.ಜಿ. ಸೊಪ್ಪು ಸೆದೆಗಳ ಆಹಾರ ಬೇಕು. ದಾಹ ನೀಗಲು ೧೨೦ ರಿಂದ ೧೫೦ ಲೀಟರ್ ತನಕ ನೀರು ಬೇಕು. ಇವುಗಳಿಗೆ ನೀರು ಮತ್ತು ಆಹಾರ ಎಲ್ಲಿದೆ ?

ಇದುವರೆಗೆ ರಾತ್ರಿ ಸಮಯದಲ್ಲಿ ನಾಡಿಗೆ ಬಂದು ಬೆಳೆ ತಿಂದು ನೀರು ಕುಡಿದು ತೆರಳುತ್ತಿದ್ದ ಕಾಡಾನೆಗಳು ಈಗ ಹಾಡಹಗಲೇ ಮನುಷ್ಯರ ಭೀತಿಯನ್ನು ಲೆಕ್ಕಿಸದೇ ರಾಜಾರೋಷವಾಗಿ ನಾಡಿಗೆ ಲಗ್ಗೆ ಇಡುತ್ತಿರುವುದರ ಮರ್ಮವನ್ನು ನಾವು ಅರಿಯಬೇಕಲ್ಲವೇ.

ಕುಶಾಲನಗರ ತಾಲೂಕಿನ ಹಳಗೋಟೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಹಾಡಹಗಲೇ ಧಾವಿಸಿದ ಕಾಡಾನೆ ಬಹಿರ್ದೆಸೆಗೆ ತೆರಳಿದ್ದ ವೃದ್ಧೆಯೊಬ್ಬರನ್ನು ತುಳಿದು ಗಾಯಗೊಳಿಸಿತ್ತು.

ಕಳೆದವಾರ ಯಡವನಾಡಿನ ರಾಧಾ ರಮೇಶ್ ಅವರ ಮನೆಯಂಗಳಕ್ಕೆ ಬಂದು ಮನೆಯನ್ನು ಹಾನಿ ಪಡಿಸಿದೆ. ವಾರದ ಹಿಂದೆ ಗುಡ್ಡೆಹೊಸೂರಿನ ಕೆರೆಮೂಲೆ ಜನವಸತಿ ಪ್ರದೇಶಕ್ಕೆ ಬಂದು ನಾರಾಯಣ ಎಂಬವರ ಮನೆಯಂಗಳದಲ್ಲಿ ನೀರು ಸಿಗದ ಕಾರಣ ಕೊಳವೆ ಬಾವಿಗೆ ಒದ್ದು, ನೀರಿನ ಟ್ಯಾಂಕ್ ಹುಡಿ ಮಾಡಿ ತೆರಳಿದೆ.

ಇತ್ತೀಚೆಗೆ ೭ನೇ ಹೊಸಕೋಟೆ ರಾಷ್ಟಿçÃಯ ಹೆದ್ದಾರಿಯಲ್ಲಿ ಒಂದು ಕಿಲೋ ಮೀಟರ್ ಸಾಗಿ ಮುರುಳೀಧರ್ ಅವರ ತೋಟದ ಗೇಟು ಮುರಿದು ತೆರಳಿದೆ. ಹೀಗೆ ಇನ್ನೂ ಅನೇಕ ಪ್ರಕರಣಗಳು ನಿತ್ಯವೂ ಘಟಿಸುತ್ತಲೇ ಇದ್ದು, ಕಾಡಾನೆಗಳ ಗೋಳು ಯಾರಿಗೂ ತಿಳಿಯದಾಗಿದೆ.

ಕಳೆದ ಕೆಲವು ತಿಂಗಳಿAದ ಕೊಡಗು ಜಿಲ್ಲೆಯ ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿಯದ್ದೇ ಸದ್ದು ಹಾಗೂ ಸುದ್ದಿ. ಕಳೆದ ಎರಡು ವರ್ಷಗಳಿಂದ ಬರಬೇಕಾದ ವಾಡಿಕೆಯ ಮಳೆ ಸುರಿಯಲಿಲ್ಲ.

ಹಾಗಾಗಿ ಈ ಬಾರಿ ಹಿಂದೆAದೂ ಕಂಡರಿಯದ ಬಿಸಿಲ ನರ್ತನ ಭೂಮಿಯನ್ನು ಸುಡುತ್ತಿರುವುದರಿಂದ ಭೂಮಿಯ ಮೇಲಿನ ಗಿಡ ಮರಗಳು ನೀರಿಲ್ಲದೇ ಒಣಗುತ್ತಿವೆ.

ಇನ್ನು ಜೀವ ಸಂಕುಲಗಳ ಸಂಜೀವಿನಿ ಯಾದಂತಹ ಕುಡಿಯುವ ನೀರು ಅರಣ್ಯದ ಕೆರೆ ಕಟ್ಟೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಇಂಗಿ ಹೋಗಿದೆ. ಹಾಗಾಗಿ ಕಾಡಾನೆಗಳು ಸಹಜವಾಗಿ ನೀರು ಮತ್ತು ಆಹಾರ ಇರುವಲ್ಲಿಗೆ ಅರಸಿ ಬರುತ್ತಿವೆ.

ಕಾಡಂಚಿನ ಜನರನ್ನು ಕಾಡುವ ಕಾಡಾನೆಗಳ ನಿರ್ವಹಣೆಗೆಂದೇ ಇರುವ ಅರಣ್ಯ ಇಲಾಖೆಯ ಮೇಲುಸ್ತರದ ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಯೋಜನೆ ಮಾಡುವುದನ್ನು ಬಿಟ್ಟು ಕಾಡಂಚಿನ ಗ್ರಾಮಗಳ ಜನರಲ್ಲಿಗೆ ಬಂದು ಜನರು ದಶಕ ದಶಕಗಳಿಂದ (ಶತಮಾನಗಳಿಂದ) ಅನುಭವಿಸಿಕೊಂಡೇ ಬರುತ್ತಿರುವ ಕಾಡಾನೆಗಳ ಹಾವಳಿ ತಡೆಯುವ ಬಗ್ಗೆ ಚರ್ಚೆ ನಡೆಸಿ ಅವರಿಂದ ಮಾಹಿತಿ ಪಡೆದು ಯೋಜನೆ ರೂಪಿಸುವುದು ಒಳಿತು. ಅರಣ್ಯ ಇಲಾಖೆಯ ಬೊಕ್ಕಸ ತುಂಬಲು ಅರಣ್ಯಗಳಲ್ಲಿ ಕಾಡಾನೆಗಳಿಗೆ ಮಾರಕವಾದ ಪರಿಸರಕ್ಕೂ ಮಾರಕವಾದ ಅಕೇಶಿಯಾ, ನೀಲಗಿರಿ ಮುಂತಾದ ಮರಗಳನ್ನು ಬೆಳೆಸಿತೇ ಹೊರತು ಕಾಡಾನೆಗಳ ಆಹಾರಕ್ಕೆ ಪೂರಕವಾದ ಗಿಡಗಳನ್ನು ನೆಟ್ಟು ಬೆಳೆಸಲೇ ಇಲ್ಲ.

ಪ್ರತೀ ವರ್ಷದ ಮಳೆಗಾಲದಲ್ಲಿ ಅರಣ್ಯಗಳಲ್ಲಿ ಬೀಜ ಬಿತ್ತನೆ ಹೆಸರಿನಲ್ಲಿ, ಗಿಡಗಳನ್ನು ಬೆಳೆಸಿ ರೈತರಿಗೆ ಹಂಚುವ ಮತ್ತು ಅರಣ್ಯಗಳಲ್ಲಿ ಗಿಡಗಳನ್ನು ನೆಡುವ ನಾಟಕವಾಡುತ್ತಾ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಗಿಡಗಳನ್ನು ಬೆಳೆಸಲು ಕೋಟಿ ಕೋಟಿ ರೂಪಾಯಿ ವ್ಯಯಿಸುತ್ತಿದೆಯೇ ಹೊರತು ಯಾವ ವರ್ಷ ಎಷ್ಟು ಗಿಡ ಬೆಳೆಸಿತು ಎಂಬ ಅಂಕಿ ಅಂಶವಿಲ್ಲ. ಅಥವಾ ಕಳೆದ ಹತ್ತಾರು ವರ್ಷಗಳ ಹಿಂದೆ ನೆಟ್ಟು ಬೆಳೆಸಿರಬಹುದಾದ ಗಿಡಗಳು ಇಂದು ಮರಗಳಾಗಬೇಕಿತ್ತು. ಆದರೆ ಅವುಗಳ ಕುರುಹುಗಳೇ ಇಲ್ಲ.

ನೀರಿಗೂ ಬವಣೆ

ಕಾಡಾನೆಗಳೂ ಸೇರಿ ದಂತೆ ವನ್ಯಮೃಗಗಳ ದಾಹ ನೀಗಿಸಲು ಕಾಡುಗಳಲ್ಲಿ ಕೆರೆಗಳನ್ನು ನಿರ್ಮಿಸಿ ಮಳೆ ನೀರು ತುಂಬಿಸುವ ಯೋಜನೆಗಳು ಕೂಡ ಕಾಗದ ಪತ್ರಗಳಲ್ಲಿ, ಕಚೇರಿಗಳ ಕಂಪ್ಯೂಟರ್‌ಗಳಲ್ಲಿ ಅಡಕ ವಾಗಿವೆಯೇ ಹೊರತು ಅವು ಕೆರೆ ಕಟ್ಟೆಗಳಾಗಿ ತಲೆಎತ್ತಿ ವನ್ಯಪ್ರಾಣಿಗಳ ದಾಹ ನೀಗಿಸುವ ಸಂಜೀವಿನಿಯಾಗಿರುವ ಉದಾಹರಣೆಗಳೇ ಇಲ್ಲ.

ಹಾಗಾದರೆ ಕೆರೆ ಕಟ್ಟೆಗಳ ನಿರ್ಮಾಣಕ್ಕೆ ಬಳಸುವ ಅನುದಾನ ಏನಾಗುತ್ತಿದೆ ಎಂಬ ಪ್ರಶ್ನೆಗಳಿಗೆ ಅರಣ್ಯ ಇಲಾಖೆಯಲ್ಲಿ ಸ್ಪಷ್ಟವಾದ ಉತ್ತರಗಳಿಲ್ಲ.

ಕಾಡಾನೆ ಕಂಡರೆ ಕಿರುಚಿ ಮರಳಿಸುವುದು ಒಳಿತಲ್ಲ

ಇದನ್ನು ನಾಡಿನ ಮಂದಿ ಅಯ್ಯೋ ಆನೆ ಬಂತು ಆನೆ ಎಂದು ಬೊಬ್ಬೆ ಹೊಡೆದು ಕಿರುಚಿ ಅರುಚಾಡಿ ಮರಳಿ ಕಾಡಿಗೆ ಓಡಿಸುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಅದು ಏಕಾಗಿ ಕಾಡಿನಿಂದ ನಾಡಿಗೆ ಬಂತು? ಕಾಡಿನೊಳಗೆ ಅದಕ್ಕೆ ಏನು ತೊಂದರೆಯಾಗಿದೆ. ಯಾವ ಕೊರತೆ ಕಾಡಿದೆ? ಎಂಬಿತ್ಯಾದಿ ವಿಚಾರಗಳನ್ನು ಯಾರೂ ಕೂಡ ಮಂಥನ ಮಾಡುತ್ತಲೇ ಇಲ್ಲ. ಕಾಡಾನೆ ಕಂಡರೆ ಅರಣ್ಯ ಇಲಾಖೆಗೆ ಫೋನ್ ಹಚ್ಚುತ್ತಾರೆ. ಅರಣ್ಯ ಸಿಬ್ಬಂದಿ ಒಂದು ವೇಳೆ ಬರುವುದು ತಡವಾದರೆ ಅವರ ಮೇಲೆಯೇ ಕಿರುಚಾಡುತ್ತಾರೆ.

ಕಾಡಾನೆ ಬಂದು ಹೋದ ಮಾರ್ಗದಲ್ಲಿ ಹಾನಿಯಾದ ಬೆಳೆಗಳ ಪರಿಹಾರಕ್ಕಾಗಿ ಒತ್ತಾಯ ಇರುತ್ತದೆಯೇ ಹೊರತು ಕಾಡಾನೆಗಳು ನಮ್ಮ ರೀತಿಯೇ ಜೀವಿಗಳು. ಅವುಗಳಿಗೂ ಬೃಹದಾಕಾರದ ಹೊಟ್ಟೆಗಳಿವೆ.

ನಾವು ದಿನಕ್ಕೆ ಮೂರು ಹೊತ್ತು ಹೊಟ್ಟೆ ತುಂಬಿಸುವ ಹಾಗೆ ಕಾಡಾನೆಯೂ ಕೂಡ ಕನಿಷ್ಟ ಒಂದು ಹೊತ್ತಾದರೂ ಹೊಟ್ಟೆ ತುಂಬಿಸುವುದು ಬೇಡವೇ? ಅದಕ್ಕೂ ದಾಹ ತೀರಬೇಕಲ್ಲವೇ ಎಂಬ ಸೌಜನ್ಯ ನಮ್ಮ ಮನುಷ್ಯರಿಗಿದ್ದರೆ ಅದೆಷ್ಟು ಚೆಂದ ಅಲ್ಲವೇ...?

ಕಾಡಂಚಿನ ಹಲವು ರೈತರು ತಾವು ಬೆಳೆಗಳ ಬಿತ್ತನೆ ಮಾಡುವಾಗಲೇ ಕಾಡಾನೆಗಳು ತಿಂದುಳಿಸಿದ್ದು ನಮಗಿಷ್ಟು ಎಂದುಕೊAಡೆ ಬೆಳೆ ಬೆಳೆಯುತ್ತಾರೆ. ಆದರೆ ಕೆಲವರು ಬೆಳೆದ ಫಸಲು ಪೂರ್ಣ ಪ್ರಮಾಣದಲ್ಲಿ ನಮಗೆ ಸಿಗಬೇಕು ಎಂದುಕೊಳ್ಳುವವರೂ ಇದ್ದಾರೆ.

ಆದರೆ ಪ್ರಕೃತಿಯ ಸಮತೋಲನಕ್ಕೆ ದೇವರು ಸೃಷ್ಟಿಸಿರುವ ವನ್ಯಮೃಗಗಳು ಕೂಡ ಬದುಕಬೇಕು. ಅವುಗಳ ಜೊತೆಯೇ ಮನುಷ್ಯರ ಜೀವನವೂ ಸಾಗಬೇಕು ಎಂಬ ಅರಿವು ಇರಬೇಕಾದುದು ಬಹು ಮುಖ್ಯ.

ಇಲಾಖೆ ಅನುದಾನವನ್ನು ರೈತರಿಗೆ ಕೊಟ್ಟರೆ ಉಪಯುಕ್ತ

ಅರಣ್ಯ ಇಲಾಖೆ ಕಾಡಾನೆಗಳ ನಿಗ್ರಹಕ್ಕೆ ನಿರ್ಮಿಸುವ ಅವೈಜ್ಞಾನಿಕ ಕಂದಕಗಳು, ಕಡಿಮೆ ಗುಣಮಟ್ಟದ ಸೋಲಾರ್ ತಂತಿ ಬೇಲಿ ಮೊದಲಾದ ವ್ಯರ್ಥ ಯೋಜನೆಗಳ ಬದಲು ಇಲಾಖೆಯ ಅನುದಾನವನ್ನು ನೇರವಾಗಿ ಕಾಡಂಚಿನ ಕೃಷಿಕರಿಗೆ ಕ್ರಮಬದ್ಧವಾಗಿ ಹಂಚಿಕೆ ಮಾಡಿದಲ್ಲಿ ರೈತರೇ ಕಾಡಾನೆಗಳ ನಿಗ್ರಹಕ್ಕೆ ಶಾಶ್ವತವಾದ ಯೋಜನೆಗಳನ್ನು ಮಾಡಿಕೊಳ್ಳುತ್ತಾರೆ.

(ಅಂದರೆ ರೈತರು ತಮ್ಮ ಹೊಲ - ಗದ್ದೆ, ತೋಟಗಳ ಸುತ್ತಲೂ ತಮಗಿಷ್ಟವಾದ ಸೋಲಾರ್ ಬೇಲಿ ಅಥವಾ ಇನ್ನಾವುದೇ ಕಸರತ್ತುಗಳನ್ನು ಅನುಷ್ಠಾನಗೊಳಿಸಿ ಕಾಡಾನೆಗಳ ಹಾವಳಿಯಿಂದ ಹೊರತಾದ ಪರಿಸರವನ್ನು ಅವರು ಕಟ್ಟಿಕೊಳ್ಳುತ್ತಾರೆ.)

ಕಾಡಿನಲ್ಲಿ ಆಹಾರ-ನೀರು ಮುಖ್ಯ

ಅರಣ್ಯ ಇಲಾಖೆ ಕಾಡಿನೊಳಗೆ ಕಾಡಾನೆಗಳಿಗೆ ಬೇಕಾದಂತಹ ಆಹಾರದ ಸೊಪ್ಪು, ಮರಗಳ ಬೇರು ಅಥವಾ ಖಾಂಡದAತಹ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಬೇಸಿಗೆಯಲ್ಲಿ ನೀರಿನ ಮರುಪೂರಣ ಮಾಡುವಂತಹ ಕೆರೆ ಕಟ್ಟೆಗಳನ್ನು ನಿರ್ಮಿಸಿದಲ್ಲಿ ಕಾಡಾನೆಗಳು ನಾಡಿಗೆ ಏಕೆ ಬರುತ್ತವೆ...?

ಇನ್ನಾದರೂ ಅರಣ್ಯ ಇಲಾಖೆ ಹಾಗೂ ರೈತರು ಕಾಡಾನೆಗಳ ನರಕ ಸಂಚಾರದ ನೋವನ್ನು ಅರ್ಥ ಮಾಡಿಕೊಂಡು ಯೋಜಿಸಿದರೆ ಒಳಿತು.

- ಕೆ.ಎಸ್. ಮೂರ್ತಿ, ಕಣಿವೆ.