ಮುಸ್ಲಿಂ ಕಪ್ ಕ್ರಿಕೆಟ್ ರದ್ದು

ಮಡಿಕೇರಿ, ಮೇ ೧೩: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ವತಿಯಿಂದ ಮೂರ್ನಾಡಿನಲ್ಲಿ ಆಯೋಜಿಸಲಾಗಿದ್ದ ೨೦ನೇ ವರ್ಷದ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟ ರದ್ದುಗೊಂಡಿದೆ. ಕ್ರಿಕೆಟ್ ಪಂದ್ಯಾಟದ ಹಿನ್ನೆಲೆಯಲ್ಲಿ ತಾ.೧೧ರಂದು ನಾಪೋಕ್ಲು ಬಲ್ಲಮಾವಟಿ ಜಂಕ್ಷನ್ ಸಮೀಪ ಬ್ಯಾನರ್ ಕಟ್ಟುತ್ತಿದ್ದ ಸಂದರ್ಭ ಮೂರ್ನಾಡು ನಿವಾಸಿ ಮಹಮ್ಮದ್ ಆರಿಫ್ (೩೫) ಎಂಬವರು ವಿದ್ಯುತ್ ತಂತಿ ಸ್ಪರ್ಶಗೊಂಡು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪಂದ್ಯಾಟವನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಖಾದರ್ ಮೃತ ಮಹಮ್ಮದ್ ಆರಿಫ್ ಮನೆಯ ಬಳಿಯ ಮೈದಾನದಲ್ಲೇ ಪಂದ್ಯಾಟ ಏರ್ಪಡಿಸಲಾಗಿತ್ತು. ಕ್ರಿಕೆಟ್‌ಗೆ ೯೬, ಹಗ್ಗಜಗ್ಗಾಟಕ್ಕೆ ೧೩೭ ತಂಡಗಳು ನೋಂದಾಯಿಸಲ್ಪಟ್ಟಿದ್ದವು. ತಾ.೧೦ರಂದು ಪಂದ್ಯಾಟಕ್ಕೆ ಚಾಲನೆ ದೊರೆತಿತ್ತು. ಆದರೆ ತಾ.೧೧ರಂದು ವಿದ್ಯುತ್ ಅವಘಡದಲ್ಲಿ ಮಹಮ್ಮದ್ ಆರಿಫ್ ಮೃತಪಟ್ಟ ಹಿನ್ನೆಲೆಯಲ್ಲಿ ಪಂದ್ಯಾಟವನ್ನು ರದ್ದುಗೊಳಿಸಲಾಗಿದೆ.

ಮೃತ ಯುವಕನ ಮನೆ ಮೈದಾನದ ಬಳಿಯೆ ಇರುವ ಕಾರಣ ಅಲ್ಲಿ ಪಂದ್ಯಾಟ ಮುಂದುವರೆಸುವುದು ಸಮಂಜಸವಲ್ಲ ಹಾಗೂ ಮಳೆಗಾಲ ಸಮೀಪಿಸುತ್ತಿರುವುದರಿಂದ ಬದಲಿ ಮೈದಾನದ ವ್ಯವಸ್ಥೆ ಮಾಡಲು ಕಷ್ಟವಾಗುವ ಹಿನ್ನೆಲೆಯಲ್ಲಿ ಪಂದ್ಯಾಟವನ್ನು ರದ್ದು ಮಾಡಲಾಗಿದೆ. ಅಕ್ಟೋಬರ್ ನಂತರ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಅಬ್ದುಲ್ ಖಾದರ್ ಮಾಹಿತಿಯಿತ್ತರು.